ಕರ್ನಾಟಕ

ಅಯೋಮಯ ಮಳೆ : ಬೆಳಗಾವಿ ಜಿಲ್ಲೆಯಲ್ಲಿ ನಿಲ್ಲದ ನೆರೆ ಅನಾಹುತ

Pinterest LinkedIn Tumblr

belaಬೆಳಗಾವಿ, ಆ.೯- ‘ಮಹಾ’ ಮಳೆಗೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ತತ್ತರಿಸಿದ್ದು, ಮಳೆಯ ಅಬ್ಬರ ತಗ್ಗಿದರೂ ಅನೇಕ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿಂತಿಲ್ಲ.

ಕೃಷ್ಣಾ ನದಿಯ ಹಿನ್ನೀರಿನಿಂದ ಅನೇಕ ಹಳ್ಳಿಗಳು ಜಲಾವೃತಗೊಂಡಿದ್ದು, ಜನರು ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ.

ಬೆಳಗಾವಿ ಜಿಲ್ಲೆಯ ಇಂಗಳಿ, ಯಡೂರು, ಕಲ್ಲೋಳ ಹಾಗೂ ಚಿಂಚಲಿ ಗ್ರಾಮಗಳು ಕೃಷ್ಣಾ ನದಿಯ ಹಿನ್ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದೆ. ಇವೆಲ್ಲವೂ ತಗ್ಗು ಪ್ರದೇಶಗಳಾಗಿದ್ದು, ನೀರು ಶೇಖರಣೆಯಿಂದ ಜೀವನ ದುಸ್ತರವಾಗಿದೆ.

ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಜಿಲ್ಲೆಯ ೧೪ಕ್ಕೂ ಅಧಿಕ ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಸೇತುವೆ ಮೇಲೆ ಹರಿಯುತ್ತಿರುವ ನೀರಿನ ಪ್ರಮಾಣ ತಗ್ಗಿಲ್ಲ. ೮ ದೇವಾಲಯಗಳು ಜಲಾವೃತಗೊಂಡಿವೆ.

ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ೧.೫೬ ಲಕ್ಷ ಕ್ಯೂಸೆಕ್ಸ್ ನೀರನ್ನು ಹರಿಬಿಡುತ್ತಿರುವುದರಿಂದ ಕೃಷ್ಣಾ, ವೇದಗಂಗಾ, ದೂಧಗಂಗಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ನೀರಿನ ಮಟ್ಟ ಅಧಿಕಗೊಂಡಿದೆ.

ಹಿಪ್ಪರಗಿ ಜಲಾಶಯದಿಂದ ಕೃಷ್ಣಾ ನದಿಗೆ ೨.೮ ಲಕ್ಷ ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗುತ್ತಿದೆ. ಅಪಾರ ಪ್ರಮಾಣದ ನೀರು ಜಮೀನುಗಳಿಗೆ ನುಗ್ಗಿ ಸುಮಾರು ೫ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಕಬ್ಬು, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ನಾಶಗೊಂಡು ಲಕ್ಷಾಂತರ ರೂ. ಹಾನಿಯೊಂದಿಗೆ ರೈತರನ್ನು ಕಂಗಾಲು ಮಾಡಿದೆ.

ಇತ್ತ ಮನೆಯೂ ಇಲ್ಲದೆ, ಅತ್ತ ಬೆಳೆದ ಬೆಳೆಯೂ ಕೈಗೆ ದಕ್ಕದೆ ಅನ್ನದಾತನ ಬವಣೆ ಮುಗಿಲುಮುಟ್ಟಿದೆ. ಆತ ಮತ್ತೆ ದಿಗಿಲುಗೊಂಡು ಹೇಗಪ್ಪಾ ಬದುಕು ಎಂಬ ಚಿಂತೆಯೊಂದಿಗೆ ದಿನ ನೂಕುವಂತಹ ಪರಿಸ್ಥಿತಿಯನ್ನು ಈ ಮಹಾಮಳೆ ತಂದೊಡ್ಡಿದೆ.

ಮಹಾರಾಷ್ಟ್ರದಲ್ಲಿ ಇಂದು ಮಳೆಯ ಪ್ರಮಾಣ ಕಡಿಮೆಯಾಗಿದೆಯಾದರೂ ಅದರ ಪರಿಣಾಮ ಮಾತ್ರ ಬೆಳಗಾವಿ ಜಿಲ್ಲೆಗೆ ಇನ್ನೂ ತಪ್ಪದ ಗೋಳಾಗಿ ಮುಂದುವರೆದಿದೆ.

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ- ಯಡೂರ ಸೇತುವೆ, ದೂಧಗಂಗಾ ನದಿಗೆ ಕಟ್ಟಿರುವ ಮಲಿಕವಾಡ-ದತ್ತವಾಡ, ಕಾರದಗಾ-ಬೋಜ, ವೇದಗಂಗಾ ನದಿಗೆ ಕಟ್ಟಿರುವ ಸಿದ್ನಾಳ-ಅಕ್ಕೋಳ, ಜತ್ರಾಟ-ಭೀವಸಿ, ಬೋಜವಾಡಿ-ಕುನ್ನೂರ, ಯಕ್ಸಂಬಾ-ದಾನವಾಡ ಏಳು ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಅಥಣಿ ತಾಲೂಕಿನ ೬, ರಾಯಬಾಗ ತಾಲೂಕಿನ ಒಂದು ಸೇತುವೆ ಮುಳುಗಡೆಯಾಗಿದೆ. ಜಲಾವೃತಗೊಂಡಿರುವ ಮಹಾರಾಷ್ಟ್ರದ ಸುಕ್ಷೇತ್ರ ನರಸಿಂಹವಾಡಿಗೆ ಸಂಪರ್ಕ ಕಲ್ಪಿಸುವ ಯಕ್ಸಂಬಾ- ದಾನವಾಡ ಸೇತುವೆ ಮೇಲೆ ಸುಮಾರು ೧ ಅಡಿಯಷ್ಟು ನೀರು ಹೆಚ್ಚಾಗಿದೆ.
ಮಹಾರಾಷ್ಟ್ರದ ಜಲಾನಯನ ಪ್ರದೇಶ ಹಾಗೂ ರಾಜ್ಯದ ನದಿ ತೀರದಲ್ಲಿ ವರುಣನ ಅಬ್ಬರ ಕಡಿಮೆಯಾಗಿರುವುದರಿಂದ ಇನ್ನೆರಡು ದಿನಗಳವರೆಗೆ ನದಿ ನೀರಿನ ಪಾತ್ರ ಯಥಾಸ್ಥಿತಿ ಕಾಯ್ದುಕೊಂಡು ಹೋಗುವ ಲಕ್ಷಣಗಳಿವೆ ಎಂದು ತಹಸೀಲ್ದಾರ್ ಸಿ.ಎ.ಎಸ್.ಕುಲಕರ್ಣಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಕೃಷ್ಣಾ ಶ್ರೇಣಿಯಲ್ಲಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ಗೆ ೨ ಲಕ್ಷ ೮ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಹಿಪ್ಪರಗಿ ಬ್ಯಾರೇಜ್‌ನಲ್ಲಿ ೫೨೪.೩೦ ಮೀ. ನೀರಿನ ಮಟ್ಟ ದಾಖಲಾಗಿದೆ. ೫೨೬ ಮೀ. ದಾಟಿದರೆ ನೆರೆ ಉಂಟಾಗುವ ಸಾಧ್ಯತೆ ಇದೆ.
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಅಪಾರ ನೀರು ಹರಿಬಿಡಲಾಗಿದೆ. ತಾರಾಪುರ ಗ್ರಾಮದ ಬಳಿ ನದಿ ತೀರದ ಬೆಳೆಗಳು ಭಾನುವಾರ ಸಂಜೆ ಜಲಾವೃತ ವಾಗಿದ್ದು, ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಮೇಲೆ ನೀರು ಆವರಿಸಿ ಸಂಪರ್ಕ ಕಳೆದುಕೊಂಡಿದೆ. ಮುಳುಗಡೆ ಪ್ರದೇಶಗಳಿಗೆ ಸಿಂದಗಿ ತಹಸೀಲ್ದಾರ್ ಜಿ.ಎಸ್. ಮಳಗಿ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಸ್ಥಿತಿ ಅವಲೋಕಿಸಿ ಪ್ರವಾಹ ಎದುರಿಸಲು ಕ್ರಮ ಕೈಗೊಳ್ಳಲಾಗುವುದು.
ಕರಾವಳಿಯಲ್ಲೂ ಭಾರಿ ಮಳೆ: ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆ.೧೩ರಿಂದ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಸೋಮವಾರ ಶಿವಮೊಗ್ಗ ಜಿಲ್ಲೆಯ ಹುಂಚದಕಟ್ಟೆಯಲ್ಲಿ ೮ ಸೆಂ.ಮೀ. ಮಳೆ ದಾಖಲಾಗಿದ್ದರೆ, ಆಗುಂಬೆಯಲ್ಲಿ ೭ ಸೆಂ.ಮೀ. ಮಳೆಯಾಗಿದೆ. ಬೆಳ್ತಂಗಡಿಯಲ್ಲಿ ೫, ಗೇರುಸೊಪ್ಪ ಹಾಗೂ ಯಲ್ಲಾಪುರದಲ್ಲಿ ೪, ಮೂಡಬಿದಿರೆ, ಧರ್ಮಸ್ಥಳ, ಬಂಟ್ವಾಳ, ಕಾರ್ಕಳ, ಶೃಂಗೇರಿಯಲ್ಲಿ ೩ ಸೆಂ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.