ಕರ್ನಾಟಕ

ಸೂರು ಸಂತ್ರಸ್ತರ ಘರ್ಜನೆ : ಅಧಿಕಾರಿಗಳ ಬಾಯಿಗೆ ಬೀಗ – ಪೊಲೀಸರಿಗೆ ಜಾಗ

Pinterest LinkedIn Tumblr

9demolition4clrಬೆಂಗಳೂರು, ಆ. ೯- ನಗರದ ವಿವಿಧೆ‌ಡೆ ಕಳೆದ ನಾಲ್ಕು ದಿನಗಳಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಇಂದು ಕೂಡ ಮುಂದುವರಿದಿದ್ದು, ಮಹದೇವಪುರ ವಲಯದ ಕಸವನಹಳ್ಳಿಯಲ್ಲಿ ಜೆಸಿಬಿಗಳು ಘರ್ಜನೆ ಮಾಡಲು ಮುಂದಾಗುತ್ತಿದ್ದಂತೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ರಾಜಕಾಲುವೆಯ ಮೇಲೆ ನಿರ್ಮಾಣ ಮಾಡಿಕೊಂಡಿದ್ದ ಆರು ಮನೆಗಳನ್ನು ಗುರುತಿಸಿ ಮೂರು ಮನೆಗಳನ್ನು ಕೆಡವಲು ಬಿಬಿಎಂಪಿ ಅಧಿಕಾರಿಗಳು ಜೆಸಿಬಿ ಜತೆಗೆ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಅಧಿಕಾರಿಗಳು ಹಾಗೂ ಪೊಲೀಸರ ಜತೆ ವಾಗ್ವಾದ ನಡೆಸಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಬಿಗಿಪಟ್ಟು ಹಿಡಿದರು. ಇದರಿಂದಾಗಿ ಉಂಟಾದ ಗದ್ದಲದಿಂದಾಗಿ ಹೆಚ್ಚಿನ ಪೊಲೀಸ್ ಬಿಗಿ ಬಂದೊಬಸ್ತ್ ಕಲ್ಪಿಸಲಾಗಿದೆ.

ರಾಜಕಾಲುವೆ ಮೇಲೆ ನಿರ್ಮಿಸಿಕೊಂಡಿರುವ ಮನೆಗಳು ಹಾಗೂ ಕಟ್ಟಡಗಳನ್ನು ನೀವು ಒಡೆದು ಹಾಕಬೇಡಿ. ನಮಗೆ ನಾಲ್ಕೈದು ದಿನಗಳ ಕಾಲ ಸಮಯಾವಕಾಶ ಕೊಟ್ಟರೆ ಸ್ವಯಂಪ್ರೇರಿತವಾಗಿ ನಾವೇ ತೆರವು ಮಾಡುತ್ತೇವೆ ಎನ್ನುವ ಸ್ಥಳೀಯರ ಮನವಿಗೆ ಕ್ಯಾರೆ ಅನ್ನದ ಅಧಿಕಾರಿಗಳು ಜೆಸಿಬಿ ಮೂಲಕ ಕಟ್ಟಡ ತೆರವಿಗೆ ಮುಂದಾಗುತ್ತಿದ್ದಂತೆ ನಿವಾಸಿಗಳು ಅಡ್ಡಿಪ‌ಡಿಸಿದರು. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿ ತಾತ್ಕಾಲಿಕವಾಗಿ ತೆರವು ಕಾರ್ಯಾಚರಣೆ ನಿಂತಿದೆ.

ಸ್ಥಳದಲ್ಲಿರುವ ಪಾಲಿಕೆ ಅಧಿಕಾರಿಗಳು ಘಟನಾ ಸ್ಥಳದಲ್ಲಿ ನಡೆದ ವಿದ್ಯಮಾನಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸ್ಥಳೀಯರು ಸ್ವಯಂಪ್ರೇರಿತವಾಗಿ ತೆರವು ಮಾಡಲು ಕಾಲಾವಕಾಶ ಕೇಳುತ್ತಿದ್ದಾರೆ. ಒತ್ತುವರಿ ಮಾಡಿಕೊಂಡಿರುವ ಮನೆ ಹಾಗೂ ಕಟ್ಟಡಗಳನ್ನು ತೆರವು ಮಾಡಬೇಕೆ ಅಥವಾ ಸಮಯಾವಕಾಶ ನೀಡಬೇಕೇ ಎನ್ನುವ ಗೊಂದಲದಲ್ಲಿ ಸಿಲುಕಿದ್ದಾರೆ.

ಪೊಲೀಸರ ಸಹಕಾರದೊಂದಿಗೆ ಬಿಬಿಎಂಪಿ ಅಧಿಕಾರಿಗಳು ಜೆಸಿಬಿಗಳ ಸಹಾಯದೊಂದಿಗೆ ಒತ್ತುವರಿಯಾಗಿರುವ ಕಟ್ಟಡ ಹಾಗೂ ಮನೆಗಳನ್ನು ಕೆಡವಲು ಮುಂದಾಗುತ್ತಿದ್ದಂತೆ ಸ್ಥಳೀಯರು ಜೆಸಿಬಿ ಮುಂದೆ ಪ್ರತಿಭಟನೆ ನಡೆಸಿ ಅದೇಗೆ ಕೆಡವುತ್ತಿರೊ ನೋಡೇ ಬಿಡುತ್ತೇವೆ ಎಂದು ಅಕ್ಷರಶಃ ಪಾಲಿಕೆ ಅಧಿಕಾರಿಗಳ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ.

ಜೆಸಿಬಿ ಮೂಲಕ ಮನೆಗಳನ್ನು ಒಡೆಯುವುದರಿಂದ ಅಕ್ಕಪಕ್ಕದ ಮನೆ ಕಟ್ಟಡಗಳಿಗೂ ಹಾನಿಯಾಗಲಿದೆ. ಹೀಗಾಗಿ ನಾವೆ ತೆರವು ಮಾಡುತ್ತೇವೆ. ನಮಗೆ ಅವಕಾಶ ಮಾಡಿಕೊಡಿ ಎಂದು ಸ್ಥಳೀಯರು ಹಲವು ಬಾರಿ ಮನವಿ ಮಾಡಿಕೊಂಡರೂ ಅಧಿಕಾರಿಗಳು ಕೇಳುವ ಮನಸ್ಥಿತಿಯಲ್ಲಿ ಇಲ್ಲದಂತಾಗಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು ಪಾಲಿಕೆ ಅಧಿಕಾರಿಗಳು, ಬಡವರು ಕಷ್ಟಪಟ್ಟು ನಿರ್ಮಿಸಿಕೊಂಡಿರುವ ಮನೆ, ಕಟ್ಟಡಗಳನ್ನು ಕೆಡವುತ್ತಿದ್ದಾರೆ. ಆದರೆ ಶ್ರೀಮಂತರು, ಪ್ರಭಾವಿತರು ಒತ್ತುವರಿ ಮಾಡಿಕೊಂಡಿದ್ದರೂ ಅವರನ್ನು ಕೇಳುವ ಅಥವಾ ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಬಡವರಿಗೊಂದು ಕಾನೂನು. ಶ್ರೀಮಂತರಿಗೊಂದು ಕಾನೂನನಾ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನಾಲ್ಕೈದು ದಿನಗಳ ಅವಕಾಶ ಮಾಡಿಕೊಟ್ಟರೆ ನಾವೇ ಮನೆಗಳನ್ನು ತೆರವು ಮಾಡುತ್ತೇವೆ ಎಂದು ಪರಿಪರಿಯಾಗಿ ನಿವಾಸಿಗಳು ಕೇಳಿಕೊಂಡರೂ ಅಧಿಕಾರಿಗಳು ಅದಕ್ಕೆ ಕಿವಿಗೊಡುತ್ತಿಲ್ಲ. ಇದರಿಂದಾಗಿ ಗದ್ದಲ, ಗೊಂದಲ ಉಂಟಾಗಿದೆ.
ಡಿಸಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೊಬಸ್ತ್ ಕಲ್ಪಿಸಲಾಗಿದೆ.

Comments are closed.