ಬೆಂಗಳೂರು: ಪಾಸ್‌ಪೋರ್ಟ್ ಮಾದರಿಯಲ್ಲಿ ಪಡಿತರ ಚೀಟಿಯನ್ನು ಸ್ಪೀಡ್‌ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಜಾರಿಗೊಳಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಾಗಿದೆ.
ಅಷ್ಟೇ ಅಲ್ಲದೆ ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿ ಸೇವೆಯನ್ನೂ ಸಕಾಲ ಯೋಜನೆಯಡಿ ಸೇರ್ಪಡೆಗೊಳಿಸಿ, ಗರಿಷ್ಠ ಎಂದರೆ 15 ದಿನಗಳಲ್ಲಿ ಪಡಿತರ ಚೀಟಿ ದೊರಕುವಂತೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೆ, ಪಡಿತರ ಕಾರ್ಡ್‌ಗೆ ಹೊಸ ರೂಪ ನೀಡಲಾಗುತ್ತಿದ್ದು, ನೋಡಲು ಆಧಾರ್ ಕಾರ್ಡ್‌ನಂತೆಯೇ ಕಾಣಲಿದೆ.
ಪಡಿತರ ಕಾರ್ಡ್‌ಗೆ ಅರ್ಜಿ ಹಾಕಿದ ನಂತರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯವರೇ ಬಂದು ತಪಾಸಣೆ ಮಾಡಬೇಕು ಎಂಬ ನಿಯಮ ಸಡಿಲಿಸಿ ಮಹಾನಗರ ಪಾಲಿಕೆ, ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳಿಗೆ ಈ ಹೊಣೆಗಾರಿಕೆ ನೀಡಲು ತೀರ್ಮಾನಿಸಲಾಗಿದೆ.
ಇದರಿಂದಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಲೆಕ್ಕಿಗ, ಪಾಲಿಕೆ, ನಗರಸಭೆ, ಪುರಸಭೆ ವಾಪ್ತಿಯಲ್ಲಿ ಸ್ಥಳೀಯ ವಾರ್ಡ್ ಮಟ್ಟದ ಅಧಿಕಾರಿ ಮನೆಗೆ ಬಂದು ತಪಾಸಣೆ ಮಾಡಿ ವರದಿ ಕೊಟ್ಟ ತಕ್ಷಣ ಪಡಿತರ ಕಾರ್ಡ್ ಸ್ಪೀಡ್ ಪೋಸ್ಟ್ ಮೂಲಕ ತಲುಪಲಿದೆ.
ಸಮ್ಮತಿ: ನೂತನ ವ್ಯವಸ್ಥೆ ಜಾರಿ ಬಗ್ಗೆ ಈಗಾಗಲೇ ನಗರಾಭಿವೃದ್ಧಿ, ಪೌರಾಡಳಿತ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಬಿಬಿಎಂಪಿ ಮೇಯರ್-ಆಯುಕ್ತರ ಜತೆಯೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಯು.ಟಿ.ಖಾದರ್ ಸಮಾಲೋಚನೆ ನಡೆಸಿ ಸಮ್ಮತಿ ಪಡೆದುಕೊಂಡಿದ್ದಾರೆ.
ಗವರ್ನೆನ್ಸ್ ಹಾಗೂ ಐಟಿ-ಬಿಟಿ ಇಲಾಖೆಯ ಸಹಭಾಗಿತ್ವದಡಿ ಪಡಿತರ ಕಾರ್ಡ್ ವಿತರಣೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದು ಪ್ರಮುಖವಾಗಿ ಅಲೆದಾಟ ತಪ್ಪಿಸುವುದು ಹಾಗೂ ಆರ್ಹರಿಗೆ ಪಡಿತರ ಕಾರ್ಡ್ ಸಿಗುವಂತೆ ಮಾಡುವ ಬಗ್ಗೆ ಈಗಾಗಲೇ ಮೂರ್‍ನಾಲ್ಕು ಹಂತಗಳಲ್ಲಿ ಸಚಿವರು ಚರ್ಚೆ ನಡೆಸಿದ್ದಾರೆ.
ನೂತನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಸಚಿವ ಯು.ಟಿ.ಖಾದರ್, ಇತ್ತೀಚೆಗೆ ಪಾಸ್‌ಪೋರ್ಟ್ ಬೇಗ ಪಡೆಯಬಹುದು, ಪಡಿತರ ಕಾರ್ಡ್ ಪಡೆಯುವುದು ಕಷ್ಟ ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿದೆ. ಅದನ್ನು ತಪ್ಪಿಸಿ ಇಲಾಖೆಯನ್ನು ನಾಗರಿಕ ಸ್ನೇಹಿಯನ್ನಾಗಿಸಿ ಪಾಸ್‌ಪೋರ್ಟ್‌ಗಿಂತ ವೇಗವಾಗಿ ಪಡಿತರ ಕಾರ್ಡ್ ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಸಾಕಷ್ಟು ತಯಾರಿ ಸಹ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಸೂಕ್ತ ದಾಖಲೆ ಒದಗಿಸಿದರೂ ಪರಿಶೀಲನೆ ಪ್ರಕ್ರಿಯೆ ಮುಗಿಸಿ ಕಾರ್ಡ್ ಮುದ್ರಣಕ್ಕೆ ಆದೇಶ ಹೊರಡಿಸಿ ನಂತರ ಸ್ಪೀಡ್ ಪೋಸ್ಟ್ ಮೂಲಕ ಪಡಿತರ ಚೀಟಿ ಮನೆ ಬಾಗಿಲಿಗೆ ತಲುಪಿಸಲಾಗುವುದು.
ನಾಗರಿಕರು ನೇರವಾಗಿಯೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಪಡಿತರ ಕಾರ್ಡ್ ವಿತರಣೆ ಸೇವೆಯನ್ನೂ ಸಕಾಲದ ಜತೆ ಜೋಡಣೆ ಮಾಡಿ ಅರ್ಜಿ ಸ್ವೀಕಾರ ಮಾಡಿದ 15 ದಿನಗಳಲ್ಲಿ ಪ್ರಕ್ರಿಯೆ ಮುಗಿದು ಕಾರ್ಡ್ ಸ್ಪೀಡ್ ಪೋಸ್ಟ್ ಮೂಲಕ ತಲುಪುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪಡಿತರ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಯೇ ಪರಿಶೀಲನೆ ನಡೆಸಬೇಕು ಎಂಬ ನಿಯಮ ಸಡಿಲಿಸಲು ತೀರ್ಮಾನಿಸಲಾಗಿದೆ. ಮಹಾನಗರ ಪಾಲಿಕೆ, ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಇದರ ಉಸ್ತುವಾರಿ ವಹಿಸಲಾಗುವುದು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಲೆಕ್ಕಿಗ ಅದೇ ರೀತಿ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧಿಕಾರಿ ಸಹ ಅರ್ಜಿ ಸ್ವೀಕಾರವಾದ ತಕ್ಷಣ ಸ್ಥಳ ಪರಿಶೀಲನೆ ನೀಡಿ ವರದಿ ನೀಡಬಹುದು. ಆ ವರದಿ ಆಧಾರದ ಮೇಲೆ ಪಡಿತರ ಕಾರ್ಡ್ ನೀಡಲಾಗುವುದು ಎಂದು ಹೇಳಿದರು.
ಪಡಿತರ ಕಾರ್ಡ್‌ಗೆ ಸಲ್ಲಿಕೆಯಾದ ಅರ್ಜಿಗಳು ನೇರವಾಗಿ ಆಯಾ ವಾರ್ಡ್‌ನ ಅಧಿಕಾರಿಗೆ ರವಾನೆಯಾಗಲಿದ್ದು ದಾಖಲೆಗಳ ಪರಿಶೀಲನೆ ನಂತರ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಬೇಕು. ಸಕಾಲ ಸೇವೆ ವ್ಯಾಪ್ತಿಗೆ ಇದು ಸೇರುವುದರಿಂದ ನಿಗದಿತ ಕಾಲಮಿತಿಯಲ್ಲಿ ವರದಿ ನೀಡಬೇಕಾಗುತ್ತದೆ. ವರದಿ ಬಂದ ತಕ್ಷಣ ಅಷ್ಟೇ ವೇಗದಲ್ಲಿ ಮುಂದಿನ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
ಈ ಕ್ರಮದಿಂದ ಅಕ್ರಮಕ್ಕೂ ಕಡಿವಾಣ ಹಾಕಿದಂತಾಗುತ್ತದೆ. ಪಡಿತರ ಕಾರ್ಡ್ ವಿತರಣೆ ವಿಳಂಬವಾಗುತ್ತಿದೆ ಎಂಬ ಆರೋಪಗಳಿಗೂ ಇತಿಶ್ರೀ ಹಾಡಿದಂತಾಗುತ್ತದೆ. ಯಾವ ಹಂತದಲ್ಲೂ ಭ್ರಷ್ಟಾಚಾರ, ಲಂಚಕ್ಕೂ ಅವಕಾಶ ಇರುವುದಿಲ್ಲ. ಇದೊಂದು ಕ್ರಾಂತಿಕಾರಕ ಯೋಜನೆಯಾಗಿದ್ದು, ಇದರ ಸಾಕಾರಕ್ಕಾಗಿ ಇದಕ್ಕಾಗಿ ಸರ್ಕಾರದ ವಿವಿಧ ಇಲಾಖೆಗಳ ಸಹಕಾರ, ಸಹಭಾಗಿತ್ವ ಪಡೆಯಲಾಗುವುದು ಎಂದು ಹೇಳಿದರು.
– ಪಡಿತರ ಚೀಟಿ ವಿತರಣೆ ವ್ಯವಸ್ಥೆಯೂ ಸಕಾಲ ಸೇವೆ ವ್ಯಾಪ್ತಿಗೆ
– ಪಾಸ್‌ಪೋರ್ಟ್‌ಗಿಂತ ವೇಗವಾಗಿ ಅರ್ಜಿ ವಿಲೇವಾರಿಗೆ ಕ್ರಮ
– ಆಧಾರ್ ಕಾರ್ಡ್‌ನಂತೆಯೇ ಕಾಣುವ ರೇಷನ್ ಕಾರ್ಡ್ ವಿತರಣೆ
– ಪಾಲಿಕೆ, ನಗರ, ಪುರಸಭೆ, ಪಂಚಾಯ್ತಿ ಅಧಿಕಾರಿಗೆ ಪರಿಶೀಲನೆ ಅಧಿಕಾರ
-ಉದಯವಾಣಿ
Comments are closed.