ಬೆಂಗಳೂರು, ಆ. ೧೧ – ಯಲಹಂಕ ವಲಯದ ಹಳೆ ದೊಡ್ಡಬೊಮ್ಮಸಂದ್ರ ಕೆರೆಯವರೆಗೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಕಾರ್ಯಾಚರಣೆ ಪಡೆ ಇಂದು ಮತ್ತಷ್ಟು ತೀವ್ರಗೊಳಿಸಿದೆ. ಇಂದು 20ಕ್ಕೂ ಹೆಚ್ಚು ಮನೆಗಳು ಹಾಗೂ ಅಂಗಡಿಗಳ ಭಾಗಶಃ ಜಾಗಗಳನ್ನು ಕೆಡವಿ ಹಾಕಿದೆ.
ಇಂದು ಬೆಳಿಗ್ಗೆ 9.30 ರಿಂದ ಕಾರ್ಯಾಚರಣೆಯನ್ನು ಆರಂಭಿಸುತ್ತಿದ್ದಂತೆ ಮನೆ ಮತ್ತು ಅಂಗಡಿಗಳ ಮಾಲೀಕರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಅದನ್ನು ಲೆಕ್ಕಿಸದೆ ಕಾರ್ಯಾಚರಣೆ ಪಡೆ ಸಿಬ್ಬಂದಿಗಳು ಪೊಲೀಸರ ಸಹಕಾರದಿಂದ ಮನೆಗಳನ್ನು ಕೆಡವಿ ಹಾಕುವ ಕಾರ್ಯಾಚರಣೆಯನ್ನು ಮುಂದುವರೆಸಿದರು.
ಮನೆಗಳು ಮತ್ತು ಅಂಗಡಿಗಳಲ್ಲಿದ್ದ ವಸ್ತುಗಳನ್ನು ಹೊರ ಸಾಗಿಸಲು ಮಾಲೀಕರಿಗೆ ನಿನ್ನೆಯೇ ಗಡುವು ನೀಡಲಾಗಿತ್ತು. ಆದರೂ ಕೆಲ ಅಂಗಡಿಗಳ ಮಾಲೀಕರು ಇನ್ನೂ ವಸ್ತುಗಳನ್ನು ಹೊರ ಸಾಗಿಸಿರಲಿಲ್ಲ. ಇನ್ನಷ್ಟು ಸಮಯ ಬೇಕು ಎಂದು ಅಂಗಲಾಚಿದರೂ ಕಾರ್ಯಾಚರಣೆ ಪಡೆ ಸಿಬ್ಬಂದಿಗಳು ಅದನ್ನು ಲೆಕ್ಕಿಸದೇ ಭಾಗಶಃ ಕಟ್ಟಡಗಳನ್ನು ನೆಲಸಮಗೊಳಿಸಿದರು.
ಈ ಮಧ್ಯೆ ಸ್ಥಳೀಯ ನಿವಾಸಿಗಳು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವಯಂ ಪ್ರೇರಿತವಾಗಿ ಕಟ್ಟಡಗಳನ್ನು ತೆರವುಗೊಳಿಸುತ್ತೇವೆ ಎಂದು ಹೇಳಿಕೊಂಡರೂ ಅದಕ್ಕೆ ಅವಕಾಶ ನೀಡದೇ ಪೊಲೀಸರ ಸಹಕಾರ ಪಡೆದು ನಮ್ಮನ್ನು ಶತ್ರುಗಳಂತೆ ಕಾಣುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜೆಸಿಬಿ ಯಂತ್ರಗಳು ನಿಗದಿಪಡಿಸಿದ ಕಟ್ಟಡವನ್ನು ಕೆಡವಿ ಹಾಕುವುದರ ನಡುವೆಯೇ ಕೆಲ ನಿವಾಸಿಗಳು ಮನೆಗಳಿಂದ ಅಗತ್ಯ ವಸ್ತುಗಳನ್ನು ಹೊರ ಸಾಗಿಸುತ್ತಿದ್ದರು. ಮತ್ತೆ ಕೆಲವರು ವಸ್ತುಗಳನ್ನು ಹೊರ ಸಾಗಿಸಿದರೂ ಎಲ್ಲಿಗೆ ಕೊಂಡೊಯ್ಯುವುದು ಎಂಬ ಪ್ರಶ್ನೆ ಎದುರಾಗಿದ್ದು, ಅಕ್ಕಪಕ್ಕದ ನಿವೇಶನಗಳಲ್ಲಿ ಇಡಲಾರಂಭಿಸಿದರು.
ಈ ಮಧ್ಯೆ ಅಂಗಡಿಯಲ್ಲಿ 2 ಲಕ್ಷ ರೂ.ಗಳ ನಗದು ಹಣ ಇದೆ. ಅದನ್ನು ತೆಗೆದುಕೊಳ್ಳುತ್ತೇನೆ ಎಂದು ಜೆಸಿಬಿ ಯಂತ್ರಗಳ ಘರ್ಜನೆಯ ನಡುವೆಯೇ ಅಂಗಡಿಯೊಳಗೆ ಹೋಗುತ್ತಿದ್ದ ಒಬ್ಬಾತನನ್ನು ಪೊಲೀಸರು ತಡೆಹಿಡಿದು ವಾಪಸ್ಸು ಕರೆದುಕೊಂಡು ಬಂದರು. ಅವನಿಗೆ ಅಂಗಡಿಗೆ ಹೋಗಲು ಅವಕಾಶ ನೀಡಲಿಲ್ಲ. ಕಾವೇರಿ ಬಟ್ಟೆ ಅಂಗಡಿಯ ಮಾಲೀಕರೊಬ್ಬರು ತಮ್ಮೆದುರೇ ಅಂಗಡಿ ನೆಲಸಮಗೊಳ್ಳುತ್ತಿರುವುದನ್ನು ಕಣ್ಣಾರೆ ಕಂಡು ಹೃದಯಾಘಾತಕ್ಕೆ ಒಳಗಾದರು.
ತಕ್ಷಣವೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆಯಿಂದ ದೊಡ್ಡಬೊಮ್ಮಸಂದ್ರದಲ್ಲಿ ನೆಲಸಮ ಕಾರ್ಯಾಚರಣೆ ನಡೆದಿದ್ದು, ಈಗ ಆ ಭಾಗದಲ್ಲಿ ಬರೀ ಜೆಸಿಬಿಗಳ ಘರ್ಜನೆಯೇ ಕೇಳಲಾರಂಭಿಸಿವೆ. ಅಮಾಯಕರ ಮನೆಗಳು ತರಗೆಲೆಯಂತೆ ಉರುಳಲಾರಂಭಿಸಿವೆ.
Comments are closed.