ಬೆಂಗಳೂರು, ಆ. ೧೩- ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ, ಅತೃಪ್ತಿ ನಿವಾರಿಸಲು ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಈ ತಿಂಗಳ 16ರಂದು ಪಕ್ಷದ ಪ್ರಮುಖರ ಸಬೆ ಕರೆದಿರುವ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜಕೀಯ ತಳಮಳ ಸೃಷ್ಟಿಯಾಗಿದೆ.
ಯಡಿಯೂರಪ್ಪ ಕಾರ್ಯವೈಖರಿ ಬಗ್ಗೆ ಸಿಡಿದೆದ್ದಿರುವ ಹಿರಿಯ ನಾಯಕ ಈಶ್ವರಪ್ಪ ಬಣದವರು ಪ್ರತ್ಯೇಕ ಸಭೆ ನಡೆಸಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಒಂದೆಡೆ ಈಶ್ವರಪ್ಪರವರು ವಿಧಾನಸೌಧದಲ್ಲಿ ಸಭೆ ಸೇರಿ ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಹೆಸರಲ್ಲಿ ಹಿಂದುಳಿದ ವರ್ಗಗಳ ನಾಯಕರ ಸಭೆ ನಡೆಸಿದರೆ ಮತ್ತೊಂದೆಡೆ ಪಕ್ಷದ ಕಚೇರಿಯಲ್ಲಿ ಈಶ್ವರಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದ ಭಾನುಪ್ರಕಾಶ್, ನಿರ್ಮಲ ಸುರಾನ, ಸೋಮಣ್ಣ ಬೇವಿನಮರದ ಮತ್ತಿತರ ನಾಯಕರು ಸಭೆ ನಡೆಸಿರುವುದು ಹಲವಾರು ಅನುಮಾನಗಳಿಗೆ ಎಡೆಯಾಗಿದೆ
ಈ ಮಧ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಪಕ್ಷದ ಕಚೇರಿಯಲ್ಲಿ ಸದ್ದುಗದ್ದಲವಿಲ್ಲದೆ ನಡೆಯಿತು. ಈ ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದಗೌಡ ಹಾಗೂ ಮತ್ತಿತರರು ಭಾಗವಹಿಸಿದ್ದರು. ಆದರೆ ಪಕ್ಷದ ಕಚೇರಿಯಲ್ಲಿ ನಡೆಯುತ್ತಿದ್ದ ಇನ್ನೊಂದು ಸಭೆ ನಡೆಯುತ್ತಿದ್ದರೆ ತಮಗೇನೂ ಸಂಬಂಧವಿಲ್ಲ ಎಂಬಂತೆ ಈ ನಾಯಕರು ಸಭೆಯಲ್ಲಿ ಭಾಗವಹಿಸಿ ತೆರಳಿದರು.
ಪಕ್ಷದ ಪದಾಧಿಕಾರಿಗಳ ನೇಮಕ ಸಂಬಂಧ ಅಸಮಾಧಾನಗೊಂಡಿರುವ ನಾಯಕರುಗಳು ತಮ್ಮ ಅಸಮಾಧಾನಕ್ಕೆ ಯಾವುದೇ ಕಿಮ್ಮತ್ತು ಸಿಕ್ಕಿಲ್ಲ. ತಮ್ಮ ಅಹವಾಲನ್ನು ಯಾರೂ ಆಲಿಸುತ್ತಿಲ್ಲ. ಹಾಗಾಗಿ ಮುಂದೆ ತಮ್ಮ ನಡೆ ಏನಿರಬೇಕು ಎಂಬ ಬಗ್ಗೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿದರು.
ಪಕ್ಷದ ಮುಖಂಡರುಗಳಾದ ಭಾನುಪ್ರಕಾಶ್, ನಿರ್ಮಲ್ ಕುಮಾರ್ ಸುರಾನ, ಸೋಮಣ್ಣ ಬೇವಿನಮರದ, ಎ.ಎಚ್. ಶಿವಯೋಗಿ ಸ್ವಾಮಿ, ಶ್ರೀಕಾಂತ ಕುಲಕರಣಿ, ನಂದೀಶ್, ಗಿರೀಶ್ ಪಟೇಲ್ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪಕ್ಷದ ಪದಾಧಿಕಾರಿಗಳ ನೇಮಕದ ಬಗ್ಗೆ ಕೆಲ ಮುಖಂಡರಿಗೆ ಅಸಮಾಧಾನವಾಗಿರುವುದನ್ನು ಹಿರಿಯ ಮುಖಂಡರ ಗಮನಕ್ಕೆ ತಂದಿದ್ದರೂ ಯಾವುದೇ
ಪ್ರಯೋಜನವಾಗಿಲ್ಲ. ಹಾಗಾಗಿ ಮುಂದೆ ಏನು ಮಾಡಬೇಕು. ತಮ್ಮ ಅಸಮಾಧಾನ ಅತೃಪ್ತಿಯನ್ನು ಯಾರ ಬಳಿ ವ್ಯಕ್ತಪಡಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು.
ದೆಹಲಿಗೆ ದೂರು
ಈ ತಿಂಗಳ 16ರಂದು ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ತಮ್ಮ ಅಹವಾಲಿಗೆ ಸ್ಪಂದನೆ ಸಿಗದಿದ್ದರೆ ಮತ್ತೊಮ್ಮೆ ದೆಹಲಿಗೆ ತೆರಳಿ ವರಿಷ್ಠರಿಗೆ ದೂರು ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದವು.
Comments are closed.