ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಾರಾಟ ಮಳಿಗೆಗಳಿಗೆ ತೆರಳಿ ಒಡವೆ ಕಳವು ಮಾಡುತ್ತಿದ್ದ ಅಮ್ಮ, ಮಗಳು ಹಾಗೂ ಮೊಮ್ಮಗ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆಲಿಯಾ ಬೇಗಂ (67) ಈಕೆಯ ಮಗಳು ಸಬೀಹಾ ಬಾನು (50) ಹಾಗೂ ಮೊಮ್ಮಗ ಇಮ್ರಾನ್ ಖಾನ್ (20) ಬಂಧಿತರು. ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಇವರು ಕೆಲ ದಿನಗಳ ಹಿಂದೆ ಡಿಕನ್ಸನ್ ರಸ್ತೆಯ ಚಿನ್ನದ ಮಳಿಗೆಯಲ್ಲಿ ಆಭರಣ ಕಳವು ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಮೂವರನ್ನು ಪತ್ತೆ ಮಾಡಿ ಜೈಲಿಗೆ ಅಟ್ಟಿದ್ದಾರೆ.
ಈ ಹಿಂದೆ ಆರ್.ಟಿ. ನಗರ ಠಾಣಾ ವ್ಯಾಪ್ತಿಯ 1 ಹಾಗೂ ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ 2 ಚಿನ್ನಾಭರಣ ಅಂಗಡಿಗಳಲ್ಲಿ ಕಳವು ಮಾಡಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ. 3.70 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ಕಳವಿಗೆ ಬಳಸುತ್ತಿದ್ದ ಆಟೋ ವಶಕ್ಕೆ ಪಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬುರ್ಖಾ ಧರಿಸಿ ಕಳ್ಳತನ: ನೆಲಮಂಗಲದ ಇಸ್ಲಾಂಪುರ ನಿವಾಸಿ ಆಲಿಯಾ ಬೇಗಂ, ಸಾರಾಯಿಪಾಳ್ಯದಲ್ಲಿ ಇರುವ ಮಗಳು ಸಬೀಹಾ ಬಾನು ಹಾಗೂ ಮಗನ ಪುತ್ರ ಇಮ್ರಾನ್ ಕಳವು ಮಾಡುತ್ತಿದ್ದರು.
ಆರ್.ಟಿ. ನಗರ, ಕಮರ್ಷಿಯಲ್ ಸ್ಟ್ರೀಟ್ ಸೇರಿ ಹಲವೆಡೆ ಬುರ್ಖಾ ಧರಿಸಿ ಹೋಗುತ್ತಿದ್ದ ಆಲಿಯಾ ಹಾಗೂ ಸಬೀಹಾ ಖರೀದಿ ನೆಪದಲ್ಲಿ ಚಿನ್ನಾಭರಣ ನೋಡುತ್ತಿದ್ದರು. ನಂತರ ಯಾರಿಗೂ ಕಾಣದಂತೆ ಬಟ್ಟೆಯೊಳಗೆ ಹಾಕಿಕೊಳ್ಳುತ್ತಿದ್ದರು. ಬಳಿಕ ಸಮೀಪದಲ್ಲೇ ನಿಲ್ಲಿಸಿಕೊಂಡಿರುತ್ತಿದ್ದ ಇಮ್ರಾನ್ನ ಆಟೋದಲ್ಲಿ ಪರಾರಿಯಾಗುತ್ತಿದ್ದರು. ಪರಿಚಯಸ್ಥರ ಅಂಗಡಿಗಳಲ್ಲಿ ಕಳವು ಮಾಲನ್ನು ಮಾರಿ ಹಣ ಹಂಚಿಕೊಳ್ಳುತ್ತಿದ್ದರು.
ಕೆಲಕಾಲ ಸುಮ್ಮನಿರುತ್ತಿದ್ದ ಐನಾತಿಗಳು ಹಣ ಖಾಲಿಯಾಗುತ್ತಿದ್ದಂತೆ ಮತ್ತೆ ಕಳ್ಳತನಕ್ಕೆ ಇಳಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿಗೆ ಹೋಗಿ ಬಂದರೂ ಚಾಳಿ ಬಿಡಲಿಲ್ಲ
ಸುಲಭವಾಗಿ ಹಣ ಸಂಪಾದಿಸಲು ಕಳ್ಳತನಕ್ಕೆ ಇಳಿದಿದ್ದ ಮೂರು ತಲೆಮಾರುಗಳ ತಂಡ 2011ರಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರ ಕೈಗೆ ಸಿಕ್ಕಿಬಿದ್ದು, ಪರಪ್ಪನ ಅಗ್ರಹಾರ ಜೈಲಿಗೆ ಹೋಗಿತ್ತು. ಜಾಮೀನು ಪಡೆದು ಹೊರಬಂದು ಮತ್ತೆ ಕಳ್ಳತನಕ್ಕೆ ಇಳಿದಿತ್ತು. ಅಲ್ಲದೆ ಇವರ ಕಳ್ಳತನಕ್ಕೆ ಸಹಕರಿಸುತ್ತಿದ್ದ ಆಲಿಯಾ ಬೇಗಂ ಹತ್ತಿರದ ಸಂಬಂಧಿ ಮುಷರತ್ಬಾನು ತಲೆಮರೆಸಿಕೊಂಡಿದ್ದು, ಆಕೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Comments are closed.