ಬೆಂಗಳೂರು,ಆ.೧೭: ಭಾರತೀಯ ಸೇನೆಯ ವಿರುದ್ಧ ಘೋಷಣೆ ಕೂಗಿದವರನ್ನು ತಕ್ಷಣವೇ ಬಂಧಿಸಿ ಅಮ್ನೆಸ್ಟಿ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆನ್ನುವ ಹೋರಾಟವನ್ನು ತೀವ್ರಗೊಳಿಸಿರುವ ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ,ಬಳ್ಳಾರಿ,ಮೈಸೂರು,ಬೆಳಗಾವಿ ಸೇರಿದಂತೆ ರಾಜ್ಯದ ಹಲವೆಡೆ ಎಬಿವಿಪಿ,ಬಿಜೆಪಿ,ಆರ್‌ಎಸ್‌ಎಸ್ ಸೇರಿದಂತೆ ಹಿಂದೂ ಪರಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸೇನೆ ವಿರುದ್ಧ ಘೋಷಣೆಗಳನ್ನು ಕೂಗಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯ ಮುನ್ಸೂಚನೆ ನೀಡದೆ ಸಾವಿರಾರು ಎಬಿವಿಪಿ ಕಾರ್ಯಕರ್ತರು ಏಕಾಎಕಿ ಕೇಸರಿ ತಿರಂಗಾ ಧ್ವಜ ಹಿಡಿದು ಮೈಸೂರು ಬ್ಯಾಂಕ್ ವೃತ್ತಕ್ಕೆ ಆಗಮಿಸಿ ಸೇನೆಯ ವಿರುದ್ಧ ಘೋಷಣೆ ಕೂಗಿದವರನ್ನು ಬಂಧಿಸಿ ಎಬಿಪಿಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ಭೂತದಹನ ಮಾಡಿದರು.
ಪ್ರತಿಭಟನೆ ವಾಪಸ್
ಅಮ್ನೆಸ್ಟಿ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಸೇನೆ ವಿರುದ್ಧ ಘೋಷಣೆ ಕೂಗಿರುವ ಕೆಲವು ವೀಡಿಯೋ ಸ್ಷಷ್ಟವಾಗಿದ್ದರೆ ಇನ್ನು ಕೆಲವು ಅಸ್ಪಷ್ಟವಾಗಿದ್ದು ಮೂಲ ವೀಡಿಯೋ ನೀಡುವಂತೆ ಕೋರಲಾಗಿದೆ. ತನಿಖೆ ಇಷ್ಟೇ ದಿನದಲ್ಲಿ ಮುಗಿಯುತ್ತದೆ ಎಂದು ಹೇಳಲಾಗುವುದಿಲ್ಲ. ವರದಿ ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಅವರು ಭರವಸೆ ನೀಡಿ ಮನವಿ ಮಾಡಿದ ನಂತರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಹಿಂತೆಗೆದುಕೊಂಡರು.
ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಸೇನೆಯ ವಿರುದ್ಧ ಘೋಷಣೆ ಕೂಗಿದವರನ್ನು ಬಂಧಿಸಬೇಕು, ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಅಮ್ನೆಸ್ಟಿ ಸಂಘಟನೆಯನ್ನು ನಿಷೇಧಿಸಬೇಕು ಎಂದು ಏರಿದ ಧ್ವನಿಯಲ್ಲಿ ಆಗಹಿಸಿ ಘೋಷಣೆಗಳನ್ನು ಕೂಗ ತೂಡಗಿದರು.
ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದ ಎಬಿವಿಪಿ ಕಾರ್ಯಕರ್ತರು ದಿಡೀರ್ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಆಗಮಿಸಿರುವುದನ್ನು ತಿಳಿದ ತಕ್ಷಣ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಭದ್ರತೆ ಕೈಗೊಳ್ಳಲಾಯಿತು.
ಅಮ್ನೆಸ್ಟಿಯ ಮೂವರ ವಿರುದ್ಧ ಎಬಿವಿಪಿ ದೂರು ನೀಡಿತ್ತು ಆದರೆ ಆ ಹೆಸರುಗಳನ್ನು ಬಿಟ್ಟು ಕೇವಲ ಸಂಸ್ಥೆಯ ವಿರುದ್ಧ ದೂರು ದಾಖಲಾಗಿದೆ. ಘೋಷಣೆ ಕೂಗಿದ ಕಾಶ್ಮೀರಿ ಯುವಕರನ್ನು ಬಂಧಿಸಬೇಕು
ವಿನಯ್ ಬಿದರೆ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಬಿವಿಪಿ
ಪೊಲೀಸರ ಭದ್ರತೆಯ ನಡುವೆಯೇ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಗರ ಪೊಲೀಸ್ ಆಯುಕ್ತ ಮೇಘರಿಕ್ ಅವರು ಸ್ಥಳಕ್ಕೆ ಬಂದು ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದವರನ್ನು ಬಂಧಿಸುವುದಾಗಿ ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಗೆ ವಿದ್ಯಾರ್ಥಿಗಳು ಬಂದು ಸೇರುತ್ತಲೇ ಇದ್ದರಿಂದ ಮೊದಲಿಗೆ ನೂರರ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರ ಸಂಖ್ಯೆ ಮಧ್ಯಾಹ್ನದ ವೇಳೆಗೆ ಸಾವಿರಾರು ಸಂಖ್ಯೆಯಾಗ ತೊಡಗಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ಅವರು ಸೇನೆ ವಿರುದ್ಧ ಘೋಷಣೆಗಳನ್ನು ಕೂಗಿದ ಆರೋಪಿಗಳನ್ನು ೪೮ ಗಂಟೆಯೊಳಗೆ ಬಂಧಿಸದಿದ್ದರೆ ನಾಳೆಯಿಂದ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ದೇಶ ವಿರೋಧಿ ಘೋಷಣೆಗಳನ್ನು ಕೂಗಿ ನಾಲ್ಕು ದಿನ ಕಳೆದಿದ್ದರೂ ಒಬ್ಬರನ್ನು ಇಲ್ಲಿಯವರೆಗೆ ಬಂಧಿಸಿಲ್ಲ ಎಬಿವಿಪಿ ಕಾರ್ಯಕರ್ತರು ದೂರು ನೀಡಿದ ನಂತರ ಮಾಧ್ಯಮಗಳಲ್ಲಿ ದೇಶ ವಿರೋಧಿ ಘೋಷಣೆ ಕೂಗಿರುವುದು ವರದಿಯಾದ ನಂತರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೂರಿದರು.
ದೇಶ ವಿರೋಧಿ ಘೋಷಣೆ ಕೂಗಿದವರ ಮೇಲೆ ಎಫ್‌ಐಆರ್ ದಾಖಲಿಸಿ ೨ ದಿನಗಳು ಕಳೆದಿದ್ದರೂ ಯಾರನ್ನೂ ಬಂಧಿಸಿಲ್ಲ. ದೇಶಪ್ರೇಮ ಮೆರೆದ ಎಬಿವಿಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಇದು ಸರ್ಕಾರದ ದ್ವಂದ್ವ ನೀತಿಯಾಗಿದೆ ಎಂದು ಆರೋಪಿಸಿದರು.
ಪ್ರತಿಭಟನಕಾರರನ್ನು ರಸ್ತೆ ತಡೆ ನಡೆಸುವುದನ್ನು ತಡೆಯಲು ಹಾಗೂ ವಿಧಾನಸೌಧ ಇನ್ನಿತರ ಕಡೆಗಳಿಗೆ ನುಗ್ಗುವುದನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸ್ ಪಹರೆ ಹಾಕಲಾಗಿತ್ತು.ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆಯ ಹಿನ್ನಲೆಯಲ್ಲಿ ಮೈಸೂರು ಬ್ಯಾಂಕ್ ಸುತ್ತಮುತ್ತಲ ಕಾಲೇಜುಗಳಿಗೆ ಬಿಗಿ ಪೊಲೀಸ್ ಬಂದೋಬಸ್ಥ್ ವ್ಯವಸ್ಥೆ ಮಾಡಿ ಬಲವಂತವಾಗಿ ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಕರೆದುಕೊಂಡು ಹೋಗುತ್ತಿದ್ದ ಕೆಲ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡರು.
ಎಬಿವಿಪಿ ಕಾರ್ಯಕರ್ತರು ಎಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎನ್ನುವ ಗೊಂದಲದ ಹಿನ್ನಲೆಯಲ್ಲಿ ಫ್ರೀಡಂಪಾರ್ಕ್ ರೇಸ್‌ಕೋರ್ಸ್ ರಸ್ತೆ ಆನಂದ್‌ರಾವ್ ವೃತ್ತದ ಗಾಂಧಿಪ್ರತಿಮೆ ಇನ್ನಿತರ ಪ್ರತಿಭಟನೆ ನಡೆಸುವ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಭದ್ರತೆ ಕೈಗೊಳ್ಳಲಾಗಿತ್ತು.
ಎಬಿವಿಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮೈಸೂರು ಬ್ಯಾಂಕ್ ಸುತ್ತಮುತ್ತ ರಸ್ತೆಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಸಾರ್ವಜನಿಕರು ಪರದಾಡುವಂತಾಯಿತುಘೋಷಣೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದು ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಅವರು, ಈಗಾಗಲೇ ಅಮ್ನೆಸ್ಟಿ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಘೋಷಣೆ ಕೂಗಿರುವ ಕೆಲವು ವೀಡಿಯೋ ಸ್ಷಷ್ಟವಾಗಿದೆ, ಇನ್ನು ಕೆಲವು ಅಸ್ಪಷ್ಟವಾಗಿದೆ. ಆದ್ದರಿಂದ ಮೂಲ ವೀಡಿಯೋ ನೀಡುವಂತೆ ಕೋರಲಾಗಿದೆ. ತನಿಖೆ ಇಷ್ಟೇ ದಿನದಲ್ಲಿ ಮುಗಿಯುತ್ತದೆ ಎಂದು ಹೇಳಲಾಗುವುದಿಲ್ಲ. ವರದಿ ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು.
ವಿನಯ್ ಬಿದರೆ ಮಾತನಾಡಿ, ಅಮ್ನೆಸ್ಟಿಯ ಮೂವರ ವಿರುದ್ಧ ದೂರು ನೀಡಲಾಗಿತ್ತು. ಆದರೆ ಆ ಹೆಸರುಗಳನ್ನು ಬಿಟ್ಟು ಕೇವಲ ಸಂಸ್ಥೆಯ ವಿರುದ್ಧ ದೂರು ದಾಖಲಾಗಿದೆ. ಘೋಷಣೆ ಕೂಗಿದ ಕಾಶ್ಮೀರಿ ಯುವಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದನ್ನು ಪರಿಶೀಲನೆ ನಡೆಸುವುದಾಗಿ ಚರಣ್‌ರೆಡ್ಡಿ ಅವರು ಭರವಸೆ ನೀಡಿದ ನಂತರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
Comments are closed.