ಬೆಂಗಳೂರು: ಕೆಎಸ್‌ಆರ್‌ಟಿಸಿ ವತಿಯಿಂದ ರಾಜ್ಯದ ವಿವಿಧ ಸಣ್ಣ, ಮಧ್ಯಮ ನಗರಗಳಲ್ಲಿ ನಗರ ಸಾರಿಗೆ ಸೇವೆ ಕಲ್ಪಿಸಲು ಹೊಸದಾಗಿ 637 ಅತ್ಯಾಧುನಿಕ ಬಸ್ಸುಗಳಿಗೆ ಗುರುವಾರ ಚಾಲನೆ ನೀಡಲಾಗಿದ್ದು, ಈ ಮೂಲಕ 38 ನಗರಗಳಲ್ಲಿ ನಗರ ಸಾರಿಗೆ ಸೇವೆ ಒದಗಿಸಿದ ದೇಶದ ಪ್ರಪ್ರಥಮ ಸಾರಿಗೆ ಸಂಸ್ಥೆ ಎಂಬ ಕೀರ್ತಿಗೆ ಕೆಎಸ್‌ಆರ್‌ಟಿಸಿ
ಪಾತ್ರವಾಗಿದೆ.
ಗುರುವಾರ ಬೆಳಗ್ಗೆ ವಿಧಾನಸೌಧದ ಮುಂಭಾಗ ಸಾಲಾಗಿ ನಿಂತಿದ್ದ 241 ಬಸ್ಸುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುತೇಕ ಸಣ್ಣ, ಮಧ್ಯಮ ನಗರಗಳಲ್ಲಿ “ನಗರ ಸಾರಿಗೆ’ ಸೇವೆ ಕಲ್ಪಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಅಮೃತ್ ಹಾಗೂ ರಾಜ್ಯ ಡಿಎಲ್‌ಟಿ ಯೋಜನೆಯಡಿ ಒಟ್ಟು 637 ಅತ್ಯಾಧುನಿಕ ಟಾಟಾ ಬಸ್ಸುಗಳನ್ನು ಸಾರಿಗೆ ಸೇವೆ ಅರ್ಪಿಸಿದ್ದು, ಎಲ್ಲಾ ಬಸ್ಸುಗಳಲ್ಲೂ ಸಿಸಿ ಟಿವಿ ಕೆಮೆರಾ, ರಿಯರ್ ವ್ಯೂ ಕ್ಯಾಮೆರಾ (ಹಿಂಬದಿ ನೋಟ), ಸ್ವಯಂಚಾಲಿತ ಬಾಗಿಲು ವ್ಯವಸ್ಥೆ, ಧ್ವನಿ ಸಲಹಾ ವ್ಯವಸ್ಥೆ, ತುರ್ತು ಗುಂಡಿ ಒತ್ತುವ ಮೂಲಕ ನಿಯಂತ್ರಣ ಕೊಠಡಿಗೆ ಸಂದೇಶ ಕಳುಹಿಸುವುದು ಸೇರಿದಂತೆ ಅತ್ಯಾಧುನಿಕ ಸೌಲಭ್ಯ ಅಳವಡಿಸಲಾಗಿದೆ. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಇತರೆ ಸಣ್ಣ ಪುಟ್ಟ ನಗರಗಳಿಗೂ ನಗರ ಸಾರಿಗೆ ಸೇವೆ ಕಲ್ಪಿಸಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಇದರಂತೆ ಈ ಮೊದಲು ಸಾರಿಗೆ ಸೇವೆ ಹೊಂದಿದ್ದ ನಗರಗಳು ಸೇರಿ
ಒಟ್ಟು 38 ನಗರಗಳಲ್ಲಿ ಸಾರಿಗೆ ಸೇವೆ ಒದಗಿಸಲಾಗುತ್ತಿದೆ. ಇದಕ್ಕಾಗಿಹೊಸದಾಗಿ 637 ಅತ್ಯಾಧುನಿಕ ಬಸ್ಸುಗಳ ಸೇವೆ ಪ್ರಾರಂಭಿಸಿದ್ದು, ಅಮೃತ್ ಯೋಜನೆಯಡಿ 487 ಬಸ್ಸು ಖರೀದಿಸಲಾಗಿದೆ. ಮೊದಲ ಹಂತದಲ್ಲಿ 241 ಬಸ್ಸುಗಳಿಗೆ ಚಾಲನೆ ನೀಡುತ್ತಿದ್ದೇವೆ. ಜತೆಗೆ ಡಿಎಲ್‌ಟಿ (ರಾಜ್ಯ ನಗರ ಸಾರಿಗೆ ನಿಧಿ) ಅಡಿ 150 ಬಸ್ಸು ಖರೀದಿಸಲು ಪ್ರಸ್ತಾಪಿಸಿದ್ದು, 106 ಬಸ್ಸು ಖರೀದಿಸಲಾಗಿದೆ. ಗುರುವಾರ ಅಮೃತ್ ಯೋಜನೆಯಡಿಯ 241 ಬಸ್ಸುಗಳನ್ನು ಸೇವೆಗೆ ಅರ್ಪಣೆ
ಮಾಡಲಾಯಿತು ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬಿಎಂಟಿಸಿ ಅಧ್ಯಕ್ಷ ನಾಭಿರಾಜ್ ಜೈನ್, ಉಪಾಧ್ಯಕ್ಷ ವಿ.ಎಸ್.ಆರಾಧ್ಯ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ
ಏಕರೂಪ್ ಕೌರ್ ಹಾಜರಿದ್ದರು.
ಹೊಸ ಬಸ್‌ನಲ್ಲಿ ಏನೇನಿದೆ?
– ಸಿ.ಸಿ ಟಿವಿ
– ರಿಯರ್ ಕೆಮೆರಾ (ಚಾಲನಾ ಸುರಕ್ಷತೆಗಾಗಿ ಹಿಂಬದಿ ನೋಟದ ಕೆಮೆರಾ)
– ಧ್ವನಿ ಸಲಹಾ ವ್ಯವಸ್ಥೆ, ಎಲ್‌ಇಡಿ
– ಮುಂದಿನ ನಿಲ್ದಾಣದ ಮಾಹಿತಿ
– ಸ್ವಯಂಚಾಲಿತ ಬಾಗಿಲು (ಬಾಗಿಲು ಮುಚ್ಚದಿದ್ದರೆ ಬಸ್ಸು ಚಲಿಸದು)
– ತುರ್ತು ಸಂದರ್ಭದಲ್ಲಿ ಕೇಂದ್ರ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸಲು ಗುಂಡಿ
– ಅಂಗವಿಕಲರಿಗೆ ಬಸ್ಸಿಗೆ ಹತ್ತಿ-ಇಳಿಯಲು ರ್‍ಯಾಂಪ್ ವ್ಯವಸ್ಥೆ
ಎಲ್ಲೆಲ್ಲಿಗೆ ಈ ಹೊಸ ಬಸ್?
ಅಮೃತ್ ಯೋಜನೆಯಡಿ ಹಾಸನ, ಶಿವಮೊಗ್ಗ, ಭದ್ರಾವತಿ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ತುಮಕೂರು, ದಾವಣಗೆರೆ, ಮಂಗಳೂರು, ಪುತ್ತೂರು, ಉಡುಪಿ, ಮಡಿಕೇರಿ, ಕೋಲಾರ, ಕೆಜಿಎಫ್ ಚಿತ್ರದುರ್ಗ, ಮಂಡ್ಯ ಸೇರಿ 13 ಸಣ್ಣ ಮತ್ತು ಮಧ್ಯಮ ನಗರಗಳಿಗೆ 487 ಬಸ್ಸು ಮಂಜೂರು ಮಾಡಿದ್ದು, ಮೊದಲ ಹಂತದಲ್ಲಿ 241 ವಾಹನಗಳ ಸೇವೆಗೆ ಗುರುವಾರ ಚಾಲನೆ ನೀಡಲಾಯಿತು.
-ಉದಯವಾಣಿ
Comments are closed.