ಎಲ್ಲದಕ್ಕೂ ಡ್ಯಾಮ್ಗಳನ್ನೇ ನೆಚ್ಚಿಕೊಳ್ಳುವ ಸರಕಾರದ ಪರಿಪಾಠವೇ ನೀರಿನ ಸಮಸ್ಯೆಗೆ ಪ್ರಮುಖ ಕಾರಣ. ಮಳೆಕೊಯ್ಲು, ಕೆರೆಗಳ ಹೂಳು ತೆಗೆದು ನೀರು ತುಂಬಿಸುವ ಬಗ್ಗೆ ಬರೀ ಮಾತನಾಡುತ್ತ ಕಾಲ ಕಳೆದರೆ ಮುಂದೆ ಇನ್ನೂ ಭೀಕರ ದಿನಗಳು ಕಾದಿವೆ.
ಈ ವರ್ಷ ಉತ್ತಮ ಮಳೆಯಾಗುತ್ತದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಕೇಳಿ 2 ವರ್ಷದಿಂದ ಬರಗಾಲ ಅನುಭವಿಸಿದ್ದ ಕರ್ನಾಟಕದ ವಿವಿಧ ಪ್ರಾಂತ್ಯಗಳ ರೈತರಲ್ಲಿ ಖುಷಿ ಮನೆ ಮಾಡಿತ್ತು. ಆದರೆ, ಅರ್ಧ ಮಳೆಗಾಲ ಕಳೆಯುವ ಹೊತ್ತಿಗೆ ಅದು ಕಮರಿಹೋಗಿದೆ. ದೇಶಾದ್ಯಂತ ಒಳ್ಳೆಯ ಮಳೆಯೇ ಆಗಿದ್ದರೂ ಕರ್ನಾಟಕದಲ್ಲಿ ಮಳೆ ನಿರೀಕ್ಷಿತ ಪ್ರಮಾಣಕ್ಕಿಂತ ಬಹಳ ಕಡಿಮೆಯಾಗಿದೆ.
ಮಲೆನಾಡು ಹಾಗೂ ದಕ್ಷಿಣ ಕರ್ನಾಟಕದಲ್ಲಿ ಮಳೆಯ ತೀವ್ರ ಕೊರತೆ ಕಂಡುಬಂದಿದೆ. ರಾಜ್ಯ ಸರ್ಕಾರ ಈಗಲೇ ಬರಗಾಲಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿರುವುದು ನಿಜಕ್ಕೂ ಗಂಭೀರ ವಿಚಾರ. ಸೆಪ್ಟೆಂಬರ್ನಲ್ಲಿ ಮಳೆಯಾಗಬಹುದು ಎಂಬ ಆಶಾಭಾವನೆಯೊಂದೇ ಸದ್ಯಕ್ಕೆ ರೈತಾಪಿ ಜನರ ಕೈಹಿಡಿಯಬೇಕಷ್ಟೆ. ಸೆಪ್ಟೆಂಬರ್ನಲ್ಲೂ ಸರಿಯಾಗಿ ಮಳೆಯಾಗದಿದ್ದರೆ ಕಳೆದೆರಡು ವರ್ಷಗಳಿಗಿಂತ ಭೀಕರ ಬರಗಾಲ ಕಾದಿದೆ.
ಸದ್ಯ ಮಳೆಗಾಲ ಚಾಲ್ತಿಯಲ್ಲಿದ್ದರೂ ನೀರಾವರಿ ಪ್ರದೇಶಗಳಲ್ಲಿ ಕೃಷಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಅಣೆಕಟ್ಟೆಗಳಲ್ಲಿ ಅರ್ಧಕ್ಕಿಂತ ಕಡಿಮೆ ನೀರಿನ ಸಂಗ್ರಹವಿದೆ. ಈ ಹಿನ್ನೆಲೆಯಲ್ಲಿ ಅದನ್ನು ಮುಂದಿನ ಬೇಸಿಗೆಯಲ್ಲಿ ಕುಡಿಯಲು ಬಳಸಿಕೊಳ್ಳಬೇಕೆಂಬ ಕಾರಣಕ್ಕೆ ಕೃಷಿಗೆ ಬಿಡುಗಡೆ ಮಾಡುವುದಿಲ್ಲ ಎಂಬ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿದೆ. ರೈತರು ಖುಷಿಯಿಂದ ಬಿರುಸಿನ ಕೃಷಿ ಚಟುವಟಿಕೆ ನಡೆಸಬೇಕಾದ ಹೊತ್ತಿನಲ್ಲಿ ಬಂದೆರಗಿದ ಬರಸಿಡಿಲು ಇದು.
ಆರಂಭದಲ್ಲಿ ಉತ್ತಮ ಮುಂಗಾರಿನ ಲಕ್ಷಣ ನೋಡಿ ಬಿತ್ತನೆ ಮಾಡಿದ್ದ ರೈತರು ಮುಂದೇನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ. ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ತುಂಗಭದ್ರಾ ಡ್ಯಾಮ್ನ ಹಿನ್ನೀರು ಪ್ರದೇಶದಲ್ಲೇ ನೀರಿಲ್ಲದೆ ರೈತರು ಮೆಕ್ಕೆಜೋಳ, ಹೆಸರುಬೇಳೆ ಬೆಳೆಗಳನ್ನು ಕಿತ್ತುಹಾಕಿ ನಾಶಪಡಿಸುತ್ತಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಆಗಸ್ಟ್ 30ರ ವರೆಗೆ ಮಾತ್ರ ಬೆಳೆಗಳಿಗೆ ಕೆಆರ್ಎಸ್ನಿಂದ ನೀರು ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ನಂತರ ಅಲ್ಲಿನ ಸ್ಥಿತಿ ಊಹಿಸಲು ಅಸಾಧ್ಯ.
ಈ ಬಾರಿ ಉತ್ತರ ಕರ್ನಾಟಕದಲ್ಲಿ ಸರಾಸರಿ ಮಳೆ ಹೆಚ್ಚೇ ಆಗಿದೆ ಎಂಬುದು ನಿಜ. ಆದರೆ, ಮಳೆ ಏಕಪ್ರಕಾರವಾಗಿ ಸುರಿದಿಲ್ಲ. ಒಂದೇ ಸಲ ಸುರಿದು ನೆರೆ ಸೃಷ್ಟಿಸಿ ಕಣ್ಮರೆಯಾಗಿದೆ. ಇದರಿಂದಾಗಿ ಅಲ್ಲಿನ ಡ್ಯಾಮ್ಗಳಲ್ಲೂ ನೀರು ಸಂಗ್ರಹವಾಗಿಲ್ಲ. ಕೃಷಿಗೂ ಉಪಕಾರವಾಗಿಲ್ಲ.
ರಾಜ್ಯ ಸರಕಾರವೇನೋ ಮತ್ತೂಮ್ಮೆ ಬರಗಾಲಕ್ಕೆ ಸಿದ್ಧತೆ ಮಾಡಿಕೊಳ್ಳುವುದಾಗಿ ಹೇಳಿದೆ. ಆದರೆ, ಸಿದ್ಧತೆ ಅಂದರೆ ಏನು? ಬರಗಾಲದ ಬಿಸಿ ರೈತರಿಗೆ ಹಾಗೂ ಜನರಿಗೆ ತಟ್ಟದಂತೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕಳೆದ 2 ವರ್ಷ ಭೀಕರ ಬರಗಾಲ ಅನುಭವಿಸಬೇಕಾಗಿ ಬಂದಿದ್ದರೂ ರಾಜ್ಯ ಸರಕಾರ ಈ ಬಾರಿಯ ಮಳೆಗಾಲಕ್ಕೂ ಮುನ್ನ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರ ಗಂಭೀರ ದುಷ್ಪರಿಣಾಮ ಈಗ ನಮ್ಮ ಕಣ್ಣೆದುರಿಗಿದೆ. ಮಳೆಗಾಲಕ್ಕೆ ನಾಲ್ಕೈದು ತಿಂಗಳಿದ್ದಾಗಲೇ ಸರಕಾರ ರಾಜ್ಯಾದ್ಯಂತ ಮಳೆಕೊಯ್ಲು ಕಡ್ಡಾಯ ಮಾಡಿ ಆದೇಶ ಹೊರಡಿಸಿತ್ತು.
ಹಾಗೆಯೇ ರಾಜ್ಯದ ಎಲ್ಲ ಕೆರೆಗಳಲ್ಲಿ ಹೂಳೆತ್ತಿ, ಒತ್ತುವರಿ ತೆರವು ಮಾಡಿ, ನೀರು ತುಂಬಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಕೆರೆಗಳ ಪುನರುಜ್ಜೀವನಕ್ಕೆ ದೊಡ್ಡ ದೊಡ್ಡ ಹೆಸರಿನ ಯೋಜನೆ ಪ್ರಕಟಿಸಿ, ಅದಕ್ಕೆ ನೂರಾರು ಕೋಟಿ ರೂ. ಹಣವನ್ನೂ ಬಿಡುಗಡೆ ಮಾಡಿತು. ಆದರೆ, ಕೊನೆಯಲ್ಲಿ ಏನೂ ಆಗಲಿಲ್ಲ. ಸರಕಾರ ಹೇಳಿದಂತೆ ನಡೆದುಕೊಂಡಿದ್ದರೆ ಮೊದಲು ಬಂದ ಕೆಲ ಮಳೆಗೇ ಕೆರೆಗಳು ತುಂಬಿಕೊಳ್ಳುತ್ತಿದ್ದವು. ಅದರ ಜೊತೆಗೆ ಮಳೆಕೊಯೂÉ ನಡೆದಿದ್ದರೆ ಅಂತರ್ಜಲ ಹೆಚ್ಚುತ್ತಿತ್ತು. ಆಗ ಬರಗಾಲದ ಬಿಸಿ ಅಷ್ಟಾಗಿ ತಟ್ಟುತ್ತಿರಲಿಲ್ಲ.
ಸದ್ಯ ಎಲ್ಲದಕ್ಕೂ ಡ್ಯಾಮ್ಗಳನ್ನೇ ನೆಚ್ಚಿಕೊಳ್ಳುವ ಪರಿಪಾಠವಿರುವುದೇ ನೀರಿನ ಸಮಸ್ಯೆಗೆ ಪ್ರಮುಖ ಕಾರಣ. ಸರಕಾರ ಕೇವಲ ಡ್ಯಾಮ್ಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ನೀರಾವರಿ ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದ ನೀತಿಗಳನ್ನು ರೂಪಿಸುವ ಪರಿಪಾಠವನ್ನು ಮೊದಲು ಬದಲಿಸಿಕೊಳ್ಳಬೇಕು.
-ಉದಯವಾಣಿ
Comments are closed.