ಬೆಂಗಳೂರು, ಸೆ. ೯ – ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆಯಿಂದ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆ ನಿಗದಿತ ವೇಳೆಗೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗದ ಇಬ್ಬರು ಹೃದಯ ರೋಗಿಗಳನ್ನು ಬೈಕ್ ಆಂಬ್ಯುಲೆನ್ಸ್‌ನ ತಾಂತ್ರಿಕ ಸಹಾಯಕರು ತುರ್ತು ಸೇವೆ ನೀಡಿ ಆಸ್ಪತ್ರೆಗೆ ರವಾನಿಸಿದ ಘಟನೆ ನಡೆಯಿತು.
ಇಂದು ಬೆಳಿಗ್ಗೆ ನಗರದ ನಾರಾಯಣ ಹೃದಯಾಲಯಕ್ಕೆ ಹೃದಯ ಚಿಕಿತ್ಸೆಗೆ ಆಗಮಿಸಿದ್ದ ಕಲ್ಕತ್ತಾ ಮೂಲದ 37 ವರ್ಷದ ಮಿಲಿಗೌರಿ ಎನ್ನುವ ಮಹಿಳೆ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆ ಆನಂದ್ ರಾವ್ ವೃತ್ತದ ಮೂಲೆಯೊಂದರಲ್ಲಿ ದಾರಿ ಕಾಣದೆ ಕುಳಿತಿದ್ದರು. ಅಲ್ಲಿಗೆ ಭೇಟಿ ನೀಡಿದ ಬೈಕ್ ಆಂಬ್ಯುಲೆನ್ಸ್‌ನ ತಾಂತ್ರಿಕ ಸಹಾಯಕ ಓಬಲೇಶ್ ಮಹಿಳೆಗೆ ತುರ್ತು ಚಿಕಿತ್ಸೆ ನೀಡಿ ತಕ್ಷಣ ಆಂಬ್ಯುಲೆನ್ಸ್‌ನ್ನು ಸಂಪರ್ಕಿಸಿ ಅವರನ್ನು ನಾರಾಯಣ ಹೃದಯಾಲಯಕ್ಕೆ ದಾಖಲಿಸುವಂತೆ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಇದೇ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 2 ದಿನದ ಹಸುಗೂಸಿಗೂ ಸಹ ಬೈಕ್ ಆಂಬ್ಯುಲೆನ್ಸ್‌ನ ತಾಂತ್ರಿಕ ಸಹಾಯಕರು ತುರ್ತು ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸಿದ್ದ ಈ ದಂಪತಿಗಳ ಎರಡು ದಿನದ ಅಸುಗೂಸಿಗೆ ಹೃದಯ ಸಮಸ್ಯೆಯಿಂದ ಬಳಲುತ್ತಿತ್ತು. ಅಲ್ಲಿಗೆ ಭೇಟಿ ನೀಡಿದ ಬೈಕ್ ಆಂಬ್ಯುಲೆನ್ಸ್ ಹಸುಗೂಸಿಗೆ ಅಗತ್ಯವಿರುವ ಆಕ್ಸಿಜನ್ ಹಾಗೂ ಇನ್ನಿತರ ಸಣ್ಣಪುಟ್ಟ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ 108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಒಟ್ಟು ನಗರಾದ್ಯಂತ 20 ಆಂಬ್ಯುಲೆನ್ಸ್ ಬೈಕ್‌ಗಳು ತೀವ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಮುಂದಾಗಿವೆ.
ಕರ್ನಾಟಕ
Comments are closed.