ಬೆಂಗಳೂರು: ಪೊಲೀಸ್ ಹುದ್ದೆಗಳ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು ಪರಿಷ್ಕರಿಸಿರುವ ರಾಜ್ಯ ಸರ್ಕಾರವು ಸಾಮಾನ್ಯ ಮತ್ತು ಓಬಿಸಿ ವರ್ಗದ ಅಭ್ಯರ್ಥಿಗಳ ವಯೋಮಿತಿಯನ್ನು 26ರಿಂದ 28 ಹಾಗೂ ಎಸ್ಸಿ, ಎಸ್ಟಿ ವರ್ಗದ ವಯೋಮಿತಿಯನ್ನು 28ರಿಂದ 30 ವರ್ಷಕ್ಕೆ ಹೆಚ್ಚಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ಬಳಿಕ ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ನೆರೆಯ ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪೊಲೀಸ್ ಹುದ್ದೆ ಗಳ ನೇಮಕಾತಿಗೆ ಗರಿಷ್ಠ ವಯೋಮಿತಿ 28 ವರ್ಷ ಇದೆ.
ಆದರೆ, ನಮ್ಮ ರಾಜ್ಯದಲ್ಲಿ ಇಲ್ಲಿವರೆಗೆ ಸಾಮಾನ್ಯ ಮತ್ತು ಓಬಿಸಿ ವರ್ಗಕ್ಕೆ 26 ವರ್ಷ ಹಾಗೂ ಎಸ್ಸಿ, ಎಸ್ಟಿ ವರ್ಗಗಳಿಗೆ 28 ವರ್ಷ ಇತ್ತು ಎಂದರು.ಹೆಚ್ಚಿನ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮುಂದಿನ ಎಲ್ಲ ಪೊಲೀಸ್ ನೇಮಕಾತಿಗಳ ಸಂದರ್ಭದಲ್ಲಿ ಸಾಮಾನ್ಯ ಮತ್ತು ಓಬಿಸಿ ವರ್ಗದ ಗರಿಷ್ಠ ವಯೋಮಿತಿಯನ್ನು 28 ಮತ್ತು ಎಸ್ಸಿ, ಎಸ್ಟಿ ವರ್ಗಗಳ ಗರಿಷ್ಠ ವಯೋಮಿತಿಯನ್ನು 30 ವರ್ಷಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದ್ದು, ಇದಕ್ಕಾಗಿ
ಪೊಲೀಸ್ ನೇಮಕಾತಿ ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿಗಳನ್ನು ತರಲಾಗುವುದು ಎಂದು ತಿಳಿಸಿದರು.
-ಉದಯವಾಣಿ
Comments are closed.