ಕರ್ನಾಟಕ

ಕಾಂಗ್ರೆಸ್‌ ಪ್ರಚಾರಕ್ಕೆ 600 ಕೋಟಿ?ಚುನಾವಣೆ ಗೆಲ್ಲೋ ತಂತ್ರಗಾರಿಕೆ

Pinterest LinkedIn Tumblr

kotiಬೆಂಗಳೂರು: ಕೇವಲ ಜನಹಿತದ ಕಾರ್ಯಕ್ರಮ ನಡೆಸಿ, ಅದರಿಂದಲೇ ಗೆಲ್ಲುವ ಭ್ರಮೆ ಬಿಡಬೇಕು. ಗೆಲ್ಲುವ ಮಾನದಂಡದ ಆಧಾರದ ಮೇಲೆ ರಾಜಕೀಯ ತಂತ್ರಗಾರಿಕೆ ಹೆಣೆಯುವ ಬಿಜೆಪಿಗೆ ಮಾರುತ್ತರ ನೀಡಲು ಅದೇ ಮಾರ್ಗವನ್ನು ನಾವು ಅನುಸರಿಸಬೇಕು. ಚುನಾವಣಾ ಪ್ರಚಾರಕ್ಕೆ 600 ಕೋಟಿ ರೂ. ಬಜೆಟ್‌ ಮೀಸಲಿಟ್ಟು ಪ್ರಚಾರತಂತ್ರಕ್ಕೆ ಹೆಚ್ಚು ಒತ್ತು ನೀಡಬೇಕು. ಒಟ್ಟಾರೆ, ಪಕ್ಷ ಗೆಲ್ಲುವುದೇ ಮುಖ್ಯವಾಗಬೇಕೇ ಹೊರತು ಗೆಲುವಿನ ಹಾದಿಯಲ್ಲ.’
ಪುನರ್‌ ರಚನೆಯಾದ ನಂತರ ಮೊದಲ ಬಾರಿಗೆ ಗುರುವಾರ ಸಮಾವೇಶಗೊಂಡ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆಯಲ್ಲಿ ಪಕ್ಷವನ್ನು 2018ರ ಚುನಾವಣೆಗೆ ಅಣಿಗೊಳಿಸುವ ಕುರಿತು ಪಕ್ಷದ ನಾಯಕರು ನೀಡಿದ ಸಲಹೆಗಳಿವು.

ಜನ ಹಿತದ ಕಾರ್ಯಕ್ರಮ ಮಾಡುವ, ತನ್ನ ಮತ ಬ್ಯಾಂಕ್‌ ನೆಚ್ಚಿ ರಾಜಕಾರಣ ಮಾಡುವ ಹಳೆತಂತ್ರವನ್ನು ಬಿಡಬೇಕು. ಗೆಲುವಿಗೆ ಬೇಕಾದ ರಾಜಕೀಯ ತಂತ್ರಗಾರಿಕೆಯನ್ನು ಅನುಸರಿಸಬೇಕು. ಚುನಾವ ಣೆಯಲ್ಲಿ ಗೆಲುವೇ ಮುಖ್ಯ. ಉಳಿದದ್ದು ಅನಂತರ. ಹೀಗಾಗಿ ಬಿಜೆಪಿ ಅನುಸರಿಸುತ್ತಿರುವ ಮಾರ್ಗವನ್ನು ಕಾಂಗ್ರೆಸ್‌ ಸಹ ಅನುಸರಿಸಬೇಕು ಎಂದು ನಾಯಕರು ಸಭೆಯಲ್ಲಿ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಸಭೆ ಆರಂಭವಾಗುತ್ತಿದ್ದಂತೆಯೇ ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್‌ ಅವರು 2018ರ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆ ಹಾಗೂ ಚುನಾವಣಾ ತಂತ್ರಗಾರಿಕೆ ಕುರಿತು ಸಲಹೆ ನೀಡುವಂತೆ ಕೋರಿದ ಹಿನ್ನೆಲೆಯಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಡಿ.ಕೆ.ಶಿವಕುಮಾರ್‌ ಹಾಗೂ ರೋಷನ್‌ಬೇಗ್‌ ಮೊದಲಾದವರು, ಬಿಜೆಪಿ ಹಾಗೂ ಅದರ ಅಂಗ ಸಂಸ್ಥೆಗಳು ತೀವ್ರ ಆಕ್ರಮಣಕಾರಿ ಪ್ರಚಾರ ತಂತ್ರವನ್ನು ಬಳಸಿ ಚುನಾವಣೆ ಮುಂದಾಗುತ್ತಿವೆ.

ಆದರೆ, ಕಾಂಗ್ರೆಸ್‌ ಹಳೆ ತಂತ್ರಗಾರಿಕೆಯನ್ನೇ ಹೊಂದಿದೆ. ಹೀಗಾಗಿ ಜನ ಹಿತ ಕಾರ್ಯಕ್ರಮ ಮಾಡಿದ್ದೇವೆ ಎಂಬ ನಿರಾಳ ಭಾವ ಕೈಬಿಟ್ಟು, ಗೆಲ್ಲುವ ಮಾನದಂಡವನ್ನು ಪ್ರಮುಖವಾಗಿಟ್ಟುಕೊಂಡು ಕಾರ್ಯತಂತ್ರ ಅನುಸರಿಸಬೇಕು ಎಂದು ಸಲಹೆ ನೀಡಿದರು ಎನ್ನಲಾಗಿದೆ. ಬಿಜೆಪಿ ಹಾಗೂ ಅದರ ಅಂಗ ಸಂಸ್ಥೆಗಳನ್ನು ಎದುರಿಸಲು ಯುವ ಕಾಂಗ್ರೆಸ್‌ ಹಾಗೂ ವಿದ್ಯಾರ್ಥಿ ಘಟಕಕ್ಕೆ ಹೆಚ್ಚಿನ ಬಲ ತುಂಬಬೇಕು. ಮುಂಚೂಣಿ ಘಟಕಗಳನ್ನು ಮತ್ತಷ್ಟು ಸಕ್ರಿಯಗೊಳಿಸಬೇಕು. ಕೆಪಿಸಿಸಿ ಇನ್ನಷ್ಟು ಚುರುಕಾಗಬೇಕು ಎಂದು ನಾಯಕರು ಸೂಚಿಸಿದರು ಎನ್ನಲಾಗಿದೆ.

ಪ್ರಚಾರಕ್ಕೆ 600 ಕೋಟಿ ರೂ.: ದೆಹಲಿಯಂತಹ ಸಣ್ಣ ರಾಜ್ಯದಲ್ಲಿ ಪ್ರಚಾರಕ್ಕಾಗಿ 400 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಕರ್ನಾಟಕ ವಿಶಾಲ ರಾಜ್ಯ. ಇದಕ್ಕೆ ಈಗ ಮೀಸಲಿಡುತ್ತಿರುವ ಬಜೆಟ್‌ ಅತ್ಯಂತ ಕಡಿಮೆ. ಮುಂದಿನ ಚುನಾವಣೆಗೆ ಪ್ರಚಾರಕ್ಕಾಗಿಯೇ 600 ಕೋಟಿ ರೂ. ಮೀಸಲಿಡಬೇಕು. ಸೋಷಿಯಲ್‌ ಮೀಡಿಯಾ ಹಾಗೂ ಬಾಯಿ ಮಾತಿನ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು.

ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದರ ಜೊತೆಗೆ ಸ್ಥಳೀಯ ರಾಜಕೀಯ ತಂತ್ರಗಾರಿಕೆ ಬಗ್ಗೆಯೂ ಗಮನ ನೀಡಬೇಕು ಎಂದು ನಾಯಕರು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಸೆ. 27ಕ್ಕೆ ಕಾರ್ಯಕಾರಿ ಸಮಿತಿ ಸಭೆ: ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಗ್ವಿಜಯ ಸಿಂಗ್‌ ಅವರು, ಪಕ್ಷದ ಸಂಘಟನೆಯನ್ನು ಹೆಚ್ಚಿಸಲು ಹಾಗೂ ಜನ ಸಂಪರ್ಕ ಸಭೆಗಳನ್ನು ನಡೆಸಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರಂತೆ, ಸೆ. 27ರಂದು ಧಾರವಾಡದಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಪಕ್ಷಕ್ಕೆ ಸದಸ್ಯರ ನೋಂದಣಿ ಆಂದೋಲನವನ್ನು ಅಕ್ಟೋಬರ್‌ನಿಂದ ಆರಂಭಿಸಲಾಗುವುದು.

ನವೆಂಬರ್‌ನಲ್ಲಿ ಇಂದಿರಾಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್‌. ಮುನಿಯಪ್ಪ, ಡಿ.ಕೆ. ಶಿವಕುಮಾರ್‌. ಕೆ.ಜೆ. ಜಾರ್ಜ್‌ ಮೊದಲಾದವರು ಪಾಲ್ಗೊಂಡಿದ್ದರು. ಆದರೆ, ಆಸ್ಕರ್‌ ಫ‌ರ್ನಾಂಡೀಸ್‌, ಸಿ.ಎಂ. ಇಬ್ರಾಹಿಂ, ಎಸ್‌.ಎಂ. ಕೃಷ್ಣ ಹಾಗೂ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌ ಪಾಲ್ಗೊಂಡಿರಲಿಲ್ಲ.

-ಉದಯವಾಣಿ

Comments are closed.