ಬೆಂಗಳೂರು (ಅ.08): ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಮಹಿಳಾ ಬ್ಯಾಂಕ್ ಉದ್ಯೋಗಿಯೊಬ್ಬರ ಪರ್ಸ್ ಕಳವು ಮಾಡಿದ್ದ ಚಾಲಾಕಿ ಕಳ್ಳಿ, ಕೆಲವೇ ಗಂಟೆಗಳಲ್ಲಿ ಎರಡು ಎಟಿಎಂ ಕಾರ್ಡ್‌ಗಳಿಂದ 90 ಸಾವಿರ ಹಣ ಡ್ರಾ ಮಾಡಿ ಸಿಕ್ಕಿಬಿದ್ದಿದ್ದಾಳೆ.
ತಮಿಳುನಾಡು ಮೂಲದ ಅಭಿ ಅಲಿಯಾಸ್ ಪ್ರಫುಲ್ಲಾ (27) ಬಂಧಿತ ಮಹಿಳೆ. ಸದ್ಯ ಆರೋಪಿಯನ್ನು ಆ.20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಜಾಜಿನಗರ ಠಾಣೆ ಪೊಲೀಸರು ಮಹಿಳೆಯನ್ನು ಮತ್ತಷ್ಟುವಿಚಾರಣೆಗೆ ಒಳಪಡಿಸಿದ್ದಾರೆ.
ಏನಿದು ಘಟನೆ?: ಮಾಗಡಿ ರಸ್ತೆ ಎಸ್‌ಬಿಐ ಶಾಖೆ ಉದ್ಯೋಗಿ ಸ್ವರ್ಣಲತಾ ಎಂಬುವರು ಗುರುವಾರ ಬೆಳಗ್ಗೆ ಕೆಲಸಕ್ಕೆ ಹೋಗಲೆಂದು ರಾಜಾಜಿನಗರ ಭಾಷ್ಯಂ ವೃತ್ತದಲ್ಲಿ ಬಿಎಂಟಿಸಿ ಬಸ್ ಏರಿದ್ದರು. ಈ ವೇಳೆ ಅದೇ ನಿಲ್ದಾಣದಲ್ಲಿ ಪ್ರಫುಲ್ಲಾ ಕೂಡ ಬಸ್ ಹತ್ತಿಕೊಂಡಿದ್ದಳು. ಬಸ್ ಅನತಿ ದೂರಕ್ಕೆ ಸಾಗುವ ವೇಳೆಗೆ ಪ್ರಫುಲ್ಲಾ, ಸ್ವರ್ಣ ಲತಾ ಅವರ ಬ್ಯಾಗ್‌ನಿಂದ ಪರ್ಸ್ ಎಗರಿಸಿದ್ದಳು. ಇದಾದ ಕೆಲವೇ ನಿಮಿಷಗಳಲ್ಲಿ ಮುಂದಿನ ನಿಲ್ದಾಣದಲ್ಲಿ ಬಸ್ ಇಳಿದು ತನ್ನ ಪಾಡಿಗೆ ಹೋಗಿದ್ದಾಳೆ. ನೇರ ಮಲ್ಲೇಶ್ವರ ರಸ್ತೆಯಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಎಟಿಎಂ ಕೇಂದ್ರಕ್ಕೆ ಹೋಗಿರುವ ಪ್ರಫುಲ್ಲಾ, ಪರ್ಸ್‌ನಲ್ಲಿದ್ದ ಎರಡು ಎಟಿಎಂ ಕಾರ್ಡ್ ತೆಗೆದು, ರೂ. 90 ಸಾವಿರ ಡ್ರಾ ಮಾಡಿದ್ದಾಳೆ. ಇಲ್ಲಿ ಹಣ ಡ್ರಾ ಆಗುತ್ತಿದ್ದಂತೆ ಸ್ವರ್ಣ ಲತಾ ಅವರ ಪತಿ ಮೊಬೈಲ್‌ಗೆ ಸಂದೇಶ ಹೋಗಿದೆ.
ಅಲರ್ಟ್ ಮಾಡಿದ ಪತಿ: ಒಮ್ಮೆಗೆ ಇಷ್ಟೊಂದು ಪ್ರಮಾಣದ ಹಣ ಡ್ರಾ ಮಾಡಿದ್ದರಿಂದ ಗಾಬರಿಗೊಂಡ ಪತಿ, ಸ್ವರ್ಣಲತಾ ಅವರಿಗೆ ಕರೆ ಮಾಡಿ ಹಣ ಡ್ರಾ ಮಾಡಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ದಿಗಿಲುಗೊಂಡ ಸ್ವರ್ಣಲತಾ, ಬ್ಯಾಗ್‌ನಲ್ಲಿರಿಸಿದ್ದ ಪರ್ಸ್ ಗಮನಿಸಿದಾಗ ಕಳವುವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮುಂದಿನ ನಿಲ್ದಾಣದಲ್ಲಿ ಬಸ್ ಇಳಿದ ಅವರು, ಕೂಡಲೇ ಬ್ಯಾಂಕ್ ಸಿಬ್ಬಂದಿಗೆ ಕರೆ ಮಾಡಿ, ಹಣ ಡ್ರಾ ಮಾಡಿರುವ ವಿಚಾರ ತಿಳಿಸಿದ್ದಾರೆ. ಅಲ್ಲದೇ ಯಾವ ಎಟಿಎಂ ಕೇಂದ್ರದಿಂದ ಹಣ ಡ್ರಾ ಮಾಡಲಾಗಿದೆ ಎಂಬುವರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ಆ ಕೇಂದ್ರ ಸೆಕ್ಯೂರಿಟಿ ಗಾರ್ಡ್ ಮೊಬೈಲ್ ನಂಬರ್ ಪಡೆದು ಎಟಿಎಂ ಕೇಂದ್ರಕ್ಕೆ ಕೆಲ ನಿಮಿಷದ ಹಿಂದೆ ಬಂದಿದ್ದ ವ್ಯಕ್ತಿ ಇದ್ದರೇ ಆತನನ್ನು ಹಿಡಿಯುವಂತೆ ಹೇಳಿದ್ದಾರೆ.
ಕೂಡಲೇ ಎಚ್ಚೆತ್ತ ಸೆಕ್ಯೂರಿಟಿ ಗಾರ್ಡ್, ಎಟಿಎಂ ಕೇಂದ್ರದ ಸಮೀಪದಲ್ಲಿ ಹೋಗುತ್ತಿದ್ದ ಪ್ರಫುಲ್ಲಾಳನ್ನು ಹಿಡಿದು ಪರಿಶೀಲಿಸಿದಾಗ ಬ್ಯಾಗ್‌ನಲ್ಲಿ ಹಣ ಪತ್ತೆಯಾಗಿದೆ. ಅಷ್ಟರಲ್ಲಿ ಸ್ವರ್ಣಲತಾ ಕೂಡ ಸ್ಥಳಕ್ಕೆ ಬಂದಿದ್ದಾರೆ. ವಿಷಯ ತಿಳಿದು ಕುಪಿತಗೊಂಡ ಕೆಲ ಸಾರ್ವಜನಿಕರು ಪ್ರಫುಲ್ಲಾಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕರ್ನಾಟಕ
Comments are closed.