ಕರ್ನಾಟಕ

ತೀವ್ರ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾದ ಸಾಲುಮರದ ತಿಮ್ಮಕ್ಕ

Pinterest LinkedIn Tumblr

19BG_SALUMARADA_TH_2162209f

ಬೆಂಗಳೂರು: ಸಾಲುಮರದ ತಿಮ್ಮಕ್ಕ ತೀವ್ರ ಅಸ್ವಸ್ಥಗೊಂಡಿದ್ದು, ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.ಅನಾರೋಗ್ಯಕ್ಕೆ ತುತ್ತಾಗಿರುವ ತಿಮ್ಮಕ್ಕ ಅವರು ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ಈಗಾಗಲೇ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದ ತಿಮ್ಮಕ್ಕ ಅವರ ಆರೋಗ್ಯ ಈ ಬಾರಿ ಬಿಗಡಾಯಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ತಿಮ್ಮಕ್ಕ ಅವರಿಗೆ ಚಿಕಿತ್ಸಾ ವೆಚ್ಚ ಭರಿಸುವ ಶಕ್ತಿಯಿಲ್ಲ. ಆದರೂ ಮುಂಗಡವಾಗಿ ಆಸ್ಪತ್ರೆಗೆ 30 ಸಾವಿರ ಹಣ ಪಾವತಿಸಿದ್ದಾರೆ.

ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಸಾಲುಮರದ ತಿಮ್ಮಕ್ಕ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಬಿಬಿಎಂಪಿ ಭರಿಸಬೇಕು ಎಂದು ಪದ್ಮನಾಭನಗರ ನಾಡಪ್ರಭು ಕೆಂಪೇಗೌಡ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎ.ಎಚ್.ಬಸವರಾಜ್ ಒತ್ತಾಯಿಸಿದ್ದಾರೆ.

ಈ ಕುರಿತಂತೆ ಮೇಯರ್ ಪದ್ಮಾವತಿ ಅವರಿಗೆ ದೂರವಾಣಿ ಕರೆ ಮಾಡಿರುವ ಬಸವರಾಜ್ ಅವರು, ತಿಮ್ಮಕ್ಕ ಅವರ ಸಂಪೂರ್ಣ ವೆಚ್ಚ ಭರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದ ತಿಮ್ಮಕ್ಕ ಅವರು ತಮ್ಮ ಚಿಕಿತ್ಸಾ ವೆಚ್ಚಕ್ಕಾಗಿ ತಮಗೆ ಲಭಿಸಿದ್ದ ರಾಜ್ಯೋತ್ಸವ ಹಾಗೂ ಬಸವಶ್ರೀ ಪದಕಗಳನ್ನು ಅಡಮಾನವಿಟ್ಟಿದ್ದರು.

ಹೀಗಾಗಿ ಈ ಬಾರಿ ಅವರ ಅನಾರೋಗ್ಯ ಜಟಿಲಗೊಂಡಿರುವ ಹಿನ್ನೆಲೆಯಲ್ಲಿ ಚಿಕಿತ್ಸಾ ವೆಚ್ಚ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬಿಬಿಎಂಪಿ ವತಿಯಿಂದ ಅವರ ಸಂಪೂರ್ಣ ವೆಚ್ಚ ಭರಿಸುವ ಮೂಲಕ ಮಾನವಿಯತೆ ಮೆರೆಯಬೇಕೆಂದು ಬಸವರಾಜ್ ಮೇಯರ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.

Comments are closed.