ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನಟ ರಾಘವ ಉದಯ್ ಬಳಿಕ ಗುರುವಾರ ಬೆಳಗ್ಗೆ ಮತ್ತೊಬ್ಬ ಮೃತ ನಟ ಅನಿಲ್ ಶವವೂ ಸಿಕ್ಕಿದೆ. 72 ಗಂಟೆಗಳ ಕಾರ್ಯಾಚರಣೆ ಬಳಿಕ ಅನಿಲ್ ಶವ ಪತ್ತೆಯಾಗಿದೆ.
ಅನಿಲ್ ಬಿದ್ದ ಸ್ಥಳದಿಂದ 50 ಮೀಟರ್ ದೂರದಲ್ಲಿ ಇಂದು ಬೆಳಿಗ್ಗೆ 5.50 ರ ಸುಮಾರಿಗೆ ಮೃತದೇಹ ಪತ್ತೆ ಹಚ್ಚಿದ್ದಾರೆ. ನಂತರ ಅನಿಲ್ ಮೃತದೇಹವನ್ನು ದಡಕ್ಕೆ ತರಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಜಲಾಶಯದ ಗಿಡಗಂಟಿಗಳಲ್ಲಿ ಸಿಕ್ಕಿಕೊಂಡಿದ್ದ ಅನಿಲ್ ಮೃತ ದೇಹವನ್ನು ಇಂದು ಬೆಳಗ್ಗೆ 5:50ರ ಮುಂಜಾವಿನಲ್ಲಿ ಹೊರತೆಗೆಯಲಾಯಿತು. ಪಣಂಬೂರಿನ ನುರಿತ ಮುಳುಗು ತಜ್ಞರ ತಂಡ, ಎನ್’ಡಿಆರ್’ಎಫ್, ಎಸ್’ಡಿಆರ್’ಎಫ್, ಅಗ್ನಿಶಾಮಕ ಸಿಬ್ಬಂದಿ ಅನಿಲ್ ಮೃತದೇಹದ ಶೋಧಕ್ಕಾಗಿ ಜಂಟಿ ಕಾರ್ಯಾಚರಣೆ ನಡೆಸಿದ್ದವು.
ನಿನ್ನೆ ಮಧ್ಯಾಹ್ನ 3 ಗಂಟೆಗೆ ನಟ ರಾಘವ್ ಉದಯ್ ಅವರ ಮೃತದೇಹ ಪತ್ತೆಯಾಗಿತ್ತು. ತಿಪ್ಪಗೊಂಡನಹಳ್ಳಿ ಬಳಿಯೇ ವೈದ್ಯರ ತಂಡ ಆಗಮಿಸಿ ಪೋಸ್ಟ್ ಮಾರ್ಟಮ್ ನಡೆಸಿತ್ತು. ಇಂದು ಬೆಳಗ್ಗೆ ಉದಯ್ ಅಂತ್ಯಸಂಸ್ಕಾರ ನೆರವೇರಲಿದೆ.
ನವೆಂಬರ್ 7ರ ಮಧ್ಯಾಹ್ನದಂದು ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ವೇಳೆ ಹೆಲಿಕಾಪ್ಟರ್’ನಿಂದ ನೀರಿಗೆ ಹಾರುವ ಸ್ಟಂಟ್ ಮಾಡುವ ವೇಳೆ ರಾಘವ ಉದಯ್ ಮತ್ತು ಅನಿಲ್ ಕುಮಾರ್ ಸಾವನ್ನಪ್ಪಿದ್ದರು. ಅವರ ಜೊತೆ ನೀರಿಗೆ ಹಾರಿದ್ದ ನಾಯಕನಟ ದುನಿಯಾ ವಿಜಯ್ ಅದೃಷ್ಟವಶಾತ್ ಬಚಾವ್ ಆಗಿದ್ದರು. ಚಿತ್ರೀಕರಣಕ್ಕೆ ಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿತ್ತು. ಅಲ್ಲದೇ, ಪೊಲೀಸ್ ಹಾಗೂ ಬಿಡಬ್ಲ್ಯೂಎಸ್’ಎಸ್’ಬಿ ಅನುಮತಿ ಇಲ್ಲದೆಯೇ ಚಿತ್ರೀಕರಣ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಸಾಹಸ ನಿರ್ದೇಶಕ ರವಿ ವರ್ಮಾ, ನಿರ್ಮಾಪಕ ಸುಂದರ್, ನಿರ್ದೇಶಕ ನಾಗಶೇಖರ್ ಹಾಗೂ ನಾಯಕ ನಟ ದುನಿಯಾ ವಿಜಯ್ ವಿರುದ್ಧ ದೂರು ದಾಖಲಾಗಿದೆ.
ಮೃತ ಉದಯ್ ಅವರ ತಂದೆ ಹೇಳಿದ್ದು ಹೀಗೆ….
ಮಾಧ್ಯಮದವರ ಮುಂದೆ ಉದಯ್ ಅವರ ತಂದೆ ಮಾತನಾಡಿದ್ದು, ತಮ್ಮ ಪುತ್ರನ ಅಂತಿಮ ದರ್ಶನ ಪಡೆಯುವಂತೆ ದುನಿಯಾ ವಿಜಿಯವರಲ್ಲಿ ಮನವಿ ಮಾಡಿಕೊಂಡರು. “ಕೆರೆಯಲ್ಲಿ ನೀವು ಸಾಕಷ್ಟು ಕಷ್ಟಪಟ್ಟಿದ್ದೀರಿ. ಈಗ ಶವ ಸಿಕ್ಕಾಗಿದೆ. ತಾವು ದಯವಿಟ್ಟು ಇಲ್ಲಿಗೆ ಬಂದು ನನ್ನ ಮಗನನ್ನು ನೋಡಬೇಕು ಎಂದು ಕೇಳಿಕೊಳ್ಳುತ್ತೇನೆ” ಎಂದು ಉದಯ್ ತಂದೆ ಹೇಳಿದರು.
ದುನಿಯಾ ವಿಜಿಯಷ್ಟೇ ಅಲ್ಲ, ಸಾಹಸ ನಿರ್ದೇಶಕ ರವಿ ವರ್ಮಾ ಸೇರಿದಂತೆ ಚಿತ್ರರಂಗದ ಸ್ನೇಹಿತರು ಅಂತ್ಯಸಂಸ್ಕಾರಕ್ಕೆ ಆಗಮಿಸಬೇಕು ಎಂದೂ ಉದಯ್ ತಂದೆ ಮನವಿ ಮಾಡಿಕೊಂಡರು.
ಇದೇ ವೇಳೆ, ಉದಯ್ ಮತ್ತು ಅನಿಲ್ ಇಬ್ಬರ ಅಂತ್ಯಸಂಸ್ಕಾರವನ್ನು ಒಂದೇ ಕಡೆ ಒಮ್ಮೆಗೇ ನಡೆಸಲಾಗುವುದು ಎಂಬ ಸುದ್ದಿಯನ್ನು ಉದಯ್ ತಂದೆ ಅಲ್ಲಗಳೆದಿದ್ದಾರೆ. “ಒಂದೇ ಕಡೆ ಅಂತ್ಯಸಂಸ್ಕಾರ ಮಾಡುವುದಿಲ್ಲ. ಅವರ ಶಾಸ್ತ್ರವೇ ಬೇರೆ, ನಮ್ಮ ಶಾಸ್ತ್ರವೇ ಬೇರೆ. ನಮ್ಮ ನೆಂಟರಿಷ್ಟರ ಸಮ್ಮುಖದಲ್ಲಿ ನಾವು ಮಣ್ಣ ಮಾಡಲು ನಿರ್ಧರಿಸಿದ್ದೇವೆ” ಎಂದವರು ಸ್ಪಷ್ಟಪಡಿಸಿದರು.
ಗುರುವಾರ ಬೆಳಗ್ಗೆ 10 ಗಂಟೆಗೆ ಬನಶಂಕರಿಯಲ್ಲಿರುವ ರುದ್ರಭೂಮಿಯಲ್ಲಿ ರಾಘವ ಉದಯ್’ನ ಅಂತ್ಯಸಂಸ್ಕಾರ ನೆರವೇರಲು ನಿಶ್ಚಯಿಸಲಾಗಿದೆ.
Comments are closed.