ಬೆಂಗಳೂರು: ರಾಜ್ಯದ ಪೊಲೀಸ್ ಸಿಬ್ಬಂದಿಗೆ ಕಾರ್ತಿಕಮಾಸದ ಬಂಪರ್ ಕೊಡುಗೆಯನ್ನು ಸರ್ಕಾರ ಘೋಷಣೆ ಮಾಡಿದೆ.
ಪೊಲೀಸ್ ಪೇದೆಯಿಂದ ಹಿಡಿದು ಸಬ್‌ಇನ್ಸ್‌ಪೆಕ್ಟರ್ ವರೆಗಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡುತ್ತಿದ್ದ ವಿವಿಧ ಭತ್ಯೆಗಳ ಮೊತ್ತವನ್ನು ಹೆಚ್ಚಿಸಿದ್ದು, ಹೆಚ್ಚುವರಿ ಭತ್ಯೆಗಳು ಡಿ. 1 ರಿಂದ ಜಾರಿಗೆ ಬರಲಿವೆ.
ವೇತನ ಪರಿಷ್ಕರಣೆ ಮಾಡಬೇಕೆಂಬ ಪೊಲೀಸರ ಬಹುದಿನಗಳ ಬೇಡಿಕೆಯನ್ನು ಈಡೇರಿಸದಿದ್ದರೂ ಪೊಲೀಸರಿಗೆ ನೀಡುತ್ತಿದ್ದ ವಿವಿಧ ಭತ್ಯೆಗಳ ಜತೆಗೆ ಹೆಚ್ಚುವರಿ ಭತ್ಯೆಯನ್ನು ನೀಡುವ ಮೂಲಕ ಅವರನ್ನು ಸಮಾಧಾನಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡಿದೆ.
ಪೊಲೀಸ್ ಪೇದೆಗಳನ್ನು ಬಹುವಾಗಿ ಕಾಡುತ್ತಿದ್ದ ಆರ್ಡರಲಿ ಪದ್ದತಿಯನ್ನು ರದ್ದು ಮಾಡುವ ಮೂಲಕ ಅವರ ಮೆಚ್ಚುಗೆಗೆ ಸರ್ಕಾರ ಪಾತ್ರವಾಗಿದೆ.
ಮುಖ್ಯಮಂತ್ರಿ ಗೃಹ ಕಛೇರಿ ಕೃಷ್ಣಾದಲ್ಲಿಂದು ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಹೆಚ್ಚುವರಿ ಭತ್ಯೆಗಳ ಕುರಿತು ವಿವರಣೆ ನೀಡಿದರು.
2 ಸಾವಿರ ರೂ. ಹೆಚ್ಚುವರಿ ಭತ್ಯೆ
ಪೊಲೀಸ್ ಸಿಬ್ಬಂದಿಗೆ ಪ್ರಸ್ತುತ ತಿಂಗಳಿಗೆ ನೀಡುತ್ತಿದ್ದ ಸಮವಸ್ತ್ರ ಭತ್ಯೆಯನ್ನು 500 ರೂ.ಗಳಿಗೆ ಹೆಚ್ಚಿಸಲಾಗಿದೆ. ಇದುವರೆಗೂ ಜಾರಿಯಲ್ಲಿರದ ಸಾರಿಗೆ ಭತ್ಯೆಯನ್ನು ಹೊಸದಾಗಿ ನೀಡಲು ಸರ್ಕಾರ ತೀರ್ಮಾನಿಸಿದ್ದು, ತಿಂಗಳಿಗೆ ತಲಾ 600 ರೂ. ನೀಡಲು ನಿರ್ಧರಿಸಲಾಗಿದೆ.
ಅದೇ ರೀತಿ ಕಠಿಣ ಶ್ರಮದ ಭತ್ಯೆ (ರಿಸ್ಕ್ ಭತ್ಯೆ) ಯನ್ನು ತಿಂಗಳಿಗೆ ತಲಾ 1 ಸಾವಿರ ರೂ. ನೀಡಲು ತೀರ್ಮಾನಿಸಿದ್ದು, ಒಟ್ಟಾರೆ ಸಿಬ್ಬಂದಿಯೊಬ್ಬರಿಗೆ ಪ್ರತಿ ತಿಂಗಳು 2 ಸಾವಿರ ರೂ. ಹೆಚ್ಚುವರಿ ಭತ್ಯೆ ದೊರೆಯಲಿದೆ ಎಂದು ಅವರು ತಿಳಿಸಿದರು.
ಈ ಸೌಲಭ್ಯಗಳು ರಾಜ್ಯದಲ್ಲಿರುವ ಸುಮಾರು 90 ಸಾವಿರ ಪೊಲೀಸರು ಮತ್ತು ಅಧಿಕಾರಿಗಳ ಪೈಕಿ ಶೇ. 90 ರಷ್ಟು ಜನರಿಗೆ ಸಿಗಲಿವೆ. ಇದರಿಂದ ವರ್ಷಕ್ಕೆ ಸರ್ಕಾರಿ ಬೊಕ್ಕಸದ ಮೇಲೆ ಸುಮಾರು 200 ಕೋಟಿ ರೂ. ಹೊರೆ ಬೀಳಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ವೇತನ ಪರಿಷ್ಕರಣೆ ಇಲ್ಲ
ವೇತನ ಪರಿಷ್ಕರಣೆ ಮಾಡಬೇಕೆಂಬ ಪೊಲೀಸರ ಒತ್ತಡಕ್ಕೆ ಮಣಿದಿದ್ದ ಸರ್ಕಾರ ದೇಶದ ವಿವಿಧ ರಾಜ್ಯಗಳಲ್ಲಿ ಪೊಲೀಸರಿಗೆ ನೀಡುತ್ತಿರುವ ವೇತನ ಮತ್ತು ಭತ್ಯೆ ಕುರಿತು ಅಧ್ಯಯನ ನಡೆಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದ್‌ಕರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿ ತನ್ನ ವರದಿಯನ್ನು ಸೆಪ್ಟೆಂಬರ್ ತಿಂಗಳಲ್ಲೇ ನೀಡಿದೆಯಾದರೂ ಈಗಿನ ಪರಿಸ್ಥಿತಿಯಲ್ಲಿ ವೇತನ ಪರಿಷ್ಕರಣೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಮುಂದಿನ ವರ್ಷ ರಾಜ್ಯ ವೇತನ ಆಯೋಗ ರಚನೆ ಮಾಡಬೇಕಿರುವುದರಿಂದ ಈ ಹಂತದಲ್ಲಿ ವೇತನ ಪರಿಷ್ಕರಣೆ ಮಾಡುವ ಬದಲು ಪೊಲೀಸರ ಭತ್ಯೆಗಳನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.
ರಜೆಗಳಿಲ್ಲದೆ ನಿರಂತರವಾಗಿ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಪೊಲೀಸರಿಗೆ 12 ತಿಂಗಳ ವೇತನದ ಜತೆಗೆ 1 ತಿಂಗಳ ಹೆಚ್ಚುವರಿಯಾಗಿ ವೇತನ ಅಂದರೆ ವರ್ಷಕ್ಕೆ 13 ತಿಂಗಳ ವೇತನವನ್ನು ನೀಡಲಾಗುತ್ತಿದೆ ಎಂದರು.
ಕಾಲ ಕಾಲಕ್ಕೆ ಬಡ್ತಿ
ಒಮ್ಮೆ ಪೊಲೀಸ್ ಪೇದೆಯಾಗಿ ಇಲಾಖೆಗೆ ಸೇರುವ ಪೇದೆಗಳಿಗೆ ಈಗಿನ ವ್ಯವಸ್ಥೆಯಡಿ ಅವರ ಸೇವೆಯುದ್ದಕ್ಕೂ 1 ಬಡ್ತಿಯನ್ನು ಪಡೆಯಲು ಅವಕಾಶವಿತ್ತು. ಇದನ್ನು ಬದಲಿಸಿ ಪ್ರತಿ 10 ವರ್ಷಕ್ಕೊಮ್ಮೆ ಬಡ್ತಿ (ಆಕ್ಸಿಲರೇಟೆಡ್ ಪ್ರಮೋಷನ್) ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ ಪೇದೆಯಾಗಿ ಇಲಾಖೆಗೆ ಸೇರುವವರು ಕನಿಷ್ಠ 3 ಬಡ್ತಿ ಪಡೆದು ಪಿಎಸ್ಐ ವರೆಗೂ ಹೋಗಬಹುದಾಗಿದೆ ಎಂದು ಅವರು ಹೇಳಿದರು.
ಪೊಲೀಸರಿಗೆ ವಾರದ ರಜೆ ನೀಡಲಾಗುತ್ತಿದೆ. ಜತೆಗೆ ಅವರಿಗೆ ಆಹಾರ ಧಾನ್ಯಗಳನ್ನು ನೀಡುವ ಬದಲಿಗೆ ನಗದು ರೂಪದಲ್ಲಿ ಆ ಸೌಲಭ್ಯವನ್ನು ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.
Comments are closed.