ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟಿಸುವ ಉದ್ದೇಶದಿಂದ ಹುಬ್ಬಳ್ಳಿ ನಗರದಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಬೆಳಿಗ್ಗೆ ಇಲ್ಲಿನ ಬೈರಿದೇವರಕೊಪ್ಪ ಮಾಯ್ಕಾರ ಕಾಲೊನಿಯಲ್ಲಿ ‘ಏಕದಂತ ಕೃಪಾ’ ಮನೆಯ ಗೃಹಪ್ರವೇಶ ಮಾಡಿದರು.
ಅವರ ಪತ್ನಿ ಅನಿತಾ ಕುಮಾರಸ್ವಾಮಿ ಗುರುವಾರವೇ ಇಲ್ಲಿಗೆ ಬಂದು ಮನೆಯನ್ನು ಪರಿಶೀಲಿಸಿದರು. ಅಲ್ಲದೇ, ಗೃಹಪ್ರವೇಶ ಸಮಾರಂಭದ ಪೂರ್ವ ಸಿದ್ಧತೆ ನಡೆಸಿದರು. ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳು ನಡೆದು, ಮಧ್ಯಾಹ್ನ 12 ಗಂಟೆಗೆ ಸರ್ವಧರ್ಮ ಸ್ವಾಮೀಜಿಗಳ ಸಮ್ಮುಖದಲ್ಲಿ ಕುಮಾರಸ್ವಾಮಿ ಗೃಹಪ್ರವೇಶ ನೆರವೇರಿತು.
ಯಲ್ಲಾಪುರದ ವಿದ್ವಾನ್ ಪ್ರದೀಪ ಭಟ್ಟ ನೇತೃತ್ವದಲ್ಲಿ ಮುಂಜಾನೆ ಪೂಜಾ ಕೈಂಕರ್ಯ; ಹೋಮ ಹವನ ನಡೆದವು.ಗೃಹಪ್ರವೇಶ ಕಾರ್ಯಕ್ರಮದಲ್ಲಿ ಅನಿತಾ ಕುಮಾರಸ್ವಾಮಿ ಭಾಗಿಯಾಗಿದ್ದರು.
ಸಾರ್ವಜನಿಕ ಸಮಾರಂಭದಲ್ಲಿ ಶುಭ ಹಾರೈಸಲು ಜನರು ಸಾಲುಗಟ್ಟಿ ನಿಂತಿದ್ದರು. ಸ್ಥಳೀಯರು, ರೈತ ಮುಖಂಡರು ಅಭಿನಂದನೆ ಸಲ್ಲಿಸಿದರು.
ಮಧ್ಯಾಹ್ನ ಸಭಾ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಮತದಾರರ ಮನವೊಲಿಸಲು ಪ್ರಯತ್ನ. ಎಚ್ ಡಿಕೆ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಕೈ ಎತ್ತಿ ಚಪ್ಪಾಳೆ ತಟ್ಟುವ ಮೂಲಕ ಸಾರ್ವಜನಿಕರು ಹೇಳಿದರು.
ಮುಗಳಖೋಡದ ಬಸವರಾಜ ಸ್ವಾಮೀಜಿ, ಮುಸ್ಲಿಂ ಧರ್ಮಗುರು ತಾಜುದ್ದೀನ್ ಖಾದ್ರಿ, ಸಿಖ್ ಧರ್ಮಗುರು ಮೇಜರ್ ಗ್ಯಾನ್ ಸಿಂಗ್, ಶಾಸಕರಾದ ಬಸವರಾಜ ಹೊರಟ್ಟಿ, ಎನ್ ಎಚ್ ಕೋನರಡ್ಡಿ, ಜೆಡಿಎಸ್ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಭಾಗಿಯಾಗಿದ್ದರು.
ಕುಮಾರಸ್ವಾಮಿ ಅವರು ನಗರದಲ್ಲೇ ತಿಂಗಳಲ್ಲಿ ಕನಿಷ್ಠ 10 ದಿನ ವಾಸ್ತವ್ಯ ಮಾಡಿ, ಕಾರ್ಯಕರ್ತರು, ಸಾರ್ವಜನಿಕರನ್ನು ಭೇಟಿಯಾಗಬೇಕು ಎಂಬುದು ಪಕ್ಷದ ಈ ಭಾಗದ ಮುಖಂಡರ ಅಭಿಲಾಷೆಯಾಗಿತ್ತು. ಅದಕ್ಕಾಗಿ ನಾಲ್ಕು ತಿಂಗಳಿಂದ ಮನೆಗಾಗಿ ಹುಡುಕಾಟ ನಡೆದಿತ್ತು. ಕೊನೆಗೆ, ಭೈರಿದೇವರಕೊಪ್ಪದ ಮಾಯಕಾರ ಕಾಲೊನಿಯಲ್ಲಿನ 6 ಸಾವಿರ ಚದರ ಅಡಿ ವಿಸ್ತೀರ್ಣದ ‘ಏಕದಂತ ಕೃಪಾ’ ಹೆಸರಿನ ಈ ಮನೆಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ.
ಎರಡು ಅಂತಸ್ತಿನ ಈ ಕಟ್ಟಡದಲ್ಲಿ ಐದು ಕೊಠಡಿಗಳು, ಜಿಮ್, ವಿಶಾಲ ಸಭಾಂಗಣ, ಮೊದಲ ಮಹಡಿಯಲ್ಲಿ ಎಲ್‌ಇಡಿ ಪರದೆ ಹೊಂದಿದ ಪ್ರತ್ಯೇಕ ಕೊಠಡಿ ಇದೆ. ಕಟ್ಟಡದ ಒಂದು ಭಾಗದಲ್ಲಿ ಕಚೇರಿಗೂ ಸ್ಥಳಾವಕಾಶವಿದೆ.
Comments are closed.