ಕರ್ನಾಟಕ

ಒತ್ತುವರಿ ತೆರವು ಮುಂದುವರಿಕೆ: 189 ಎಕರೆ ಸರ್ಕಾರದ ವಶಕ್ಕೆ

Pinterest LinkedIn Tumblr

Crime-1ಬೆಂಗಳೂರು, ನ. ೧೮- ನಕಲಿ ದಾಖಲೆ ಸೃಷ್ಟಿ ಹಾಗೂ ಒತ್ತುವರಿ ಮಾಡಿಕೊಂಡು ಸರಿಸುಮಾರು 1 ಸಾವಿರ ಕೋಟಿ ರೂ. ಮೌಲ್ಯದ 189 ಎಕರೆ ಸರ್ಕಾರಿ ಜಮೀನು ಒತ್ತುವರಿಯನ್ನು ಜಿಲ್ಲಾಡಳಿತ ಬಿಗಿ ಭದ್ರತೆಯಲ್ಲಿ ಇಂದು ತೆರವು ಮಾಡಿದೆ.
ಕೆಂಗೇರಿ ಹೋಬಳಿಯ ಮಾಳಿಗೊಂಡನಹಳ್ಳಿ ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಗೋಮಾಳವನ್ನು ನುಂಗಿ ನೀರು ಕು‌ಡಿದಿದ್ದ ಒತ್ತುವರಿದಾರರನ್ನು ತೆರವುಗೊಳಿಸಿ ಸರ್ಕಾರದ ಆಸ್ತಿಯನ್ನು ಜಿಲ್ಲಾಧಿಕಾರಿ ವಿ. ಶಂಕರ್ ನೇತೃತ್ವದಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಮಾಳಿಗೊಂಡನಹಳ್ಳಿಯಲ್ಲಿ ಟಾರ್ ಪ್ಲಾಂಟೇಷನ್ ಇಂಡಸ್ಟ್ರೀ ಸರ್ಕಾರದಿಂದ 55 ಎಕರೆ ಜಮೀನು ಮಂಜೂರಾಗಿದೆ ಎನ್ನುವ ರೀತಿ ನಕಲಿ ದಾಖಲೆ ಸೃಷ್ಟಿಸಿ ಅಲ್ಲಿ ಶೆಡ್‌ಗಳನ್ನು ಹಾಕಿ ಉದ್ಯಮ ನಡೆಸಲಾಗುತ್ತಿತ್ತು. ಇಂದು ಬೆಳಿಗ್ಗೆ ಜಿಲ್ಲಾಡಳಿತ ಟಾರ್ ಪ್ಲಾಂಟೇಷನ್ ಶೆಡ್‌ಗಳನ್ನು ತೆರವು ಮಾಡಿದೆ.
ಟಾರ್ ಪ್ಲಾಂಟೇಷನ್‌ಗೆ ಸೇರಿದ ಟಾರ್ ಮಿಕ್ಸಿಂಗ್ ಮೆಷಿನ್‌ಗಳು, 2 ಜೆಸಿಬಿಗಳು, 4 ಟಿಪ್ಪರ್‌ಗಳು ಸೇರಿದಂತೆ ಇಂಡಸ್ಟ್ರೀಗೆ ಸೇರಿದ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಹಾಗೂ ಸುತ್ತಮುತ್ತ ಸರ್ಕಾರಿ ಜಮೀನು ಕಬಳಿಸಿರುವವರ ಬಗ್ಗೆ ಭೂಕಬಳಿಕೆ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಕಬಳಿಕೆದಾರರ ಪಟ್ಟಿಯಲ್ಲಿದ್ದ ಒತ್ತುವರಿದಾರರನ್ನು ತೆರವು ಮಾಡುವ ಕಾರ್ಯಕ್ಕೆ ಜಿಲ್ಲಾಡಳಿ ಮುಂದಾಗಿತ್ತು. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಪೊಲೀಸರು ದಾಳಿ ನಡೆಸಿ 900 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವು ಮಾಡುವ ಕಾರ್ಯಾಚರಣೆ ಮಂದುವರೆಯಲಿದೆ. ಯಾಱ್ಯಾರು ಎಷ್ಟೆಷ್ಟು ಪ್ರಮಾಣದಲ್ಲಿ ಒತ್ತುವರಿಮಾಡಿಕೊಂಡಿದ್ದಾರೆ ಎನ್ನುವ ಬಗ್ಗೆ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಪಟ್ಟಿ ಸಿದ್ದಪಡಿಸಲಾಗಿದೆ. ಅದರಂತೆ ಒತ್ತುವರಿದಾರರನ್ನು ತೆರವುಗೊಳಿಸಿ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯುವ ಮೂಲಕ ವಶಪಡಿಸಿಕೊಂಡ ಜಾಗಕ್ಕೆ ಬೇಲಿ ಹಾಕುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಒತ್ತುವರಿದಾರರೊಂದಿಗೆ ಶಾಮೀಲಾಗಿ ಸರ್ಕಾರಿ ಭೂಮಿ ಕಬಳಿಸಲು ಅವಕಾಶ ಕೊಡುವಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.

* ಕೆಂಗೇರಿ ಹೋಬಳಿಯ ಮಾಳಿಗೊಂಡನಹಳ್ಳಿಯಲ್ಲಿ ಗೋಮಾಳ ವಶಕ್ಕೆ ಪಡೆದ ಜಿಲ್ಲಾಡಳಿತ.
* ಸರಿ ಸುಮಾರು 1 ಸಾವಿರ ಕೋಟಿ ರೂ. ಮೌಲ್ಯದ 189 ಎಕರೆ ಸರ್ಕಾರದ ವಶಕ್ಕೆ
* ಟಾರ್ ಪ್ಲಾಂಟೇಷನ್ ಇಂಡಸ್ಟ್ರಿ 55 ಎಕರೆ ಸರ್ಕಾರದಿಂದ ಮುಂಜೂರಾಗಿದೆ ಎಂದು ನಕಲಿ ಸಹಿ ಪತ್ತೆ
* ಟಾರ್ ಪ್ಲಾಂಟೇಷನ್‌ನ ಶೆಡ್‌ಗಳು ತೆರವು
* 2 ಜೆಸಿಬಿ, 4 ಟಿಪ್ಪರ್ ಹಾಗೂ ಟಾರ್ ಮಿಕ್ಸಿಂಗ್ ಯಂತ್ರಗಳು ವಶಕ್ಕೆ
‌* ಜಿಲ್ಲಾಧಿಕಾರಿ ವಿ. ಶಂಕರ್ ನೇತೃತ್ವದಲ್ಲಿ ದಾಳಿ
* ಸರ್ಕಾರದ ಆಸ್ತಿ ವಶಕ್ಕೆ

Comments are closed.