ಬೆಳಗಾವಿ: ಯಾವುದೇ ನೋಟಿಸ್ ಗೆ ಹೆದರಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನ ಚಟುವಟಿಕೆಗಳನ್ನು ನಿಲ್ಲಿಸುವುದಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಪಕ್ಷದ ವರಿಷ್ಠರಿಂದ ಎಷ್ಟೇ ನೋಟಿಸ್ ಬಂದರೂ ಅದಕ್ಕೆ ನಾನು ಮತ್ತು ಬ್ರಿಗೇಡ್ ನ ಬೆಂಬಲಿಗರು ಉತ್ತರಿಸಲು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ನನ್ನು ಗಲ್ಲಿಗೇರಿಸಿದ ಖಾನಾಪುರದ ನಂದಗಡದಲ್ಲಿ ಆಯೋಜಿಸಿದ್ದ ಬ್ರಿಗೇಡ್ ನ ಸಂಚಾಲಕರ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ರಾಯಣ್ಣ ಬ್ರಿಗೇಡ್ ಗೆ ಸೇರಲು ಯಾವುದೇ ಜಾತಿಯ ಮಿತಿಯಿಲ್ಲ, ಇದು ಯಾವುದೇ ಪಕ್ಷ ಅಥವಾ ಸಮುದಾಯಕ್ಕೆ ಸೇರಿದ್ದಲ್ಲ, ಬಡ ಹಾಗೂ ಅವಶ್ಯಕತೆ ಇರುವ ಜನರ ಪರವಾಗಿ ಕೆಲಸ ಮಾಡುವ ಬ್ರಿಗೇಡ್ ಇದಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ನೀಡಿರುವ ನೋಟಿಸ್ ಬಗ್ಗೆ ಪ್ರತಿಕ್ರಿಸಿದ ಅವರು, ಯಾವುದೇ ನೋಟಿಸ್ ನನ್ನ ಜನ ಕಲ್ಯಾಣ ಹಾಗೂ ಸಮಾಜಮುಖಿ ಕೆಲಸಗಳನ್ನು ನಿಲ್ಲಿಸಲು ಸಾಧ್ಯವಿಲ್ಲ, ರಾಯಣ್ಣ ಬ್ರಿಗೇಡ್ ಸ್ಥಾಪಿಸುವ ಮುನ್ನ ಹಲವು ಸ್ವಾಮೀಜಿಗಳ ಜೊತೆ ಸಮಾಲೋಚಿಸಿ ಅಭಿಪ್ರಾಯ ಪಡೆದು ಮುಂದುವರಿದ್ದೇನೆ ಎಂದು ಹೇಳಿದ್ದಾರೆ.
ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ದಿನವಾದ ಜನವರಿ 26 ರಂದು ಕೂಡಲಸಂಗಮದಲ್ಲಿ ಬೃಹತ್ ಸಮಾವೇಶ ಆಯೋಜಿಸಿರುವುದಾಗಿ ಈಶ್ವರಪ್ಪ ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ಈಶ್ವರಪ್ಪ ಯಾವುದೇ ಪಕ್ಷ ಅಥವಾ ಯಾವುದೇ ರಾಜಕಾರಣಿಗಳ ವಿರುದ್ಧ ಮಾತನಾಡಲಿಲ್ಲ.
ಕರ್ನಾಟಕ
Comments are closed.