ಬೆಂಗಳೂರು: ಅನ್ನನಾಳವಿಲ್ಲದ ಮಗುವಿನ ಚಿಕಿತ್ಸೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದ ಛಾಯಾಗ್ರಾಹಕರೊಬ್ಬರು ತಾಯಿಯೊಂದಿಗೆ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಾಗರಬಾವಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ನಾಗರಬಾವಿಯ ಹೆಗಡೆ ಪಾರ್ಕ್‌ನ ಯೋಗಾನಂದ (29), ತಾಯಿ ಪದ್ಮಾವತಿ ಜತೆಸೇರಿ ಇಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೋಟೋ ಸ್ಟುಡಿಯೋ ಇಟ್ಟುಕೊಂಡಿದ್ದ ಯೋಗಾನಂದ 2 ವರ್ಷಗಳ ಹಿಂದೆ ಸೋದರ ಮಾವ ಶ್ರೀರಾಮ್ ಅವರ ಪುತ್ರಿಯನ್ನು ವಿವಾಹವಾಗಿದ್ದರು. ದಂಪತಿಗೆ ಒಂದೂವರೆ ವರ್ಷದ ಮಗುವಿದೆ.
ಹುಟ್ಟಿದಾಗಿನಿಂದ ಮಗು ಅನ್ನನಾಳವಿಲ್ಲದೆ ಬಳಲುತ್ತಿದ್ದು, ಪೈಪ್ ಮೂಲಕ ಅದಕ್ಕೆ ಹಾಲುಣಿಸಬೇಕಾಗಿತ್ತು. ಅದರ ಚಿಕಿತ್ಸೆಗಾಗಿ ಸುಮಾರು 17 ಲಕ್ಷದವರೆಗೆ ಯೋಗಾನಂದ ಖರ್ಚು ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಸ್ಟುಡಿಯೋ ಬಿಟ್ಟು ಕ್ಯಾಮೆರಾಗಳನ್ನು ಬಾಡಿಗೆ ಕೊಡುತ್ತಿದ್ದರಾದರೂ ಅದರಿಂದಲೂ ಹೆಚ್ಚಿನ ಆದಾಯ ಬಾರದಿದ್ದರಿಂದ ನೊಂದಿದ್ದರು.
ಇದೇ ನೋವಿನಲ್ಲಿ ನಿನ್ನೆ ಬೆಳಿಗ್ಗೆ ಪತ್ನಿಯನ್ನು ತವರಿಗೆ ಕಳುಹಿಸಿ ತಾಯಿಯೊಂದಿಗೆ ತನ್ನ ನೋವನ್ನು ತೋಡಿಕೊಂಡು ಇಬ್ಬರು ರಾತ್ರಿ 8ರ ಸುಮಾರಿನಲ್ಲಿ ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿರುವ ಜ್ಞಾನಭಾರತಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಅವರು ತಿಳಿಸಿದ್ದಾರೆ.
Comments are closed.