ಕರ್ನಾಟಕ

ಬಿಬಿಎಂಪಿಗೆ ತೆರಿಗೆ ಬಾಕಿ ಉಳಿಸಿದ್ದ ರೂ. 19 ಕೋಟಿ ಪಾವತಿಸಿದ ವಿಪ್ರೊ

Pinterest LinkedIn Tumblr


ಬೆಂಗಳೂರು, ಜ. 6- ಕಳೆದ 4-5 ವರ್ಷಗಳಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದ ವಿಪ್ರೋ ಕಂಪೆನಿಯು ಒಟ್ಟು 19 ಕೋಟಿ ರೂ.ಗಳನ್ನು ಚೆಕ್ ಮೂಲಕ ಪಾವತಿ ಮಾಡಿದೆ.
ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್ ಅವರಿಗೆ ವಿಪ್ರೋ ಕಂಪೆನಿಯ ಉಪಾಧ್ಯಕ್ಷ (ಕಾರ್ಯಾಚರಣೆ) ರಘುನಂದನ್ ಅವರು ಬಾಕಿ ಆಸ್ತಿ ತೆರಿಗೆಯನ್ನು ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗುಣಶೇಖರ್, ವಿಪ್ರೋ ಕಂಪೆನಿಯು ಒಟ್ಟು 21 ಕೋಟಿ ರೂ.ಗಳ ಆಸ್ತಿ ತೆರಿಗೆಯನ್ನು ಕಟ್ಟದೆ ಬಾಕಿ ಉಳಿಸಿಕೊಂಡಿತ್ತು. ಅಲ್ಲಿನ ಅಧಿಕಾರಿಗಳೊಂದಿಗೆ ಸತತ ಮೂರು ಸಭೆಗಳನ್ನು ನಡೆಸಲಾಯಿತು. ಅಂತಿಮವಾಗಿ 21 ಕೋಟಿ ರೂ.ಗಳ ಪೈಕಿ ವ್ಯತ್ಯಾಸದ ಹಣವನ್ನು ಬಿಟ್ಟು 19 ಕೋಟಿ ರೂ.ಗಳನ್ನು ವಿಪ್ರೋ ಬಿಬಿಎಂಪಿಗೆ ಪಾವತಿಸಿದೆ ಎಂದು ತಿಳಿಸಿದರು.
ನಗರದಲ್ಲಿನ ಮಾಲ್‌ಗಳು, ವಾಣಿಜ್ಯ ಕಟ್ಟಡಗಳು, ಟೆಕ್ ಪಾರ್ಕ್‌ಗಳ ವಿಸ್ತೀರ್ಣವನ್ನು ಮರು ಸರ್ವೆ ನಡೆಸಲಾಗುವುದು. ವ್ಯತ್ಯಾಸದ ಹಣವನ್ನು ಕಂಪೆನಿಗಳು ಕಟ್ಟಬೇಕಾಗುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಮಾಲ್‌ಗಳು, ಟೆಕ್ ಪಾರ್ಕ್‌ಗಳು ಹಾಗೂ ವಾಣಿಜ್ಯ ಕಟ್ಟಡಗಳ ಮಾಲೀಕರು ವಿಪ್ರೋ ಕಂಪೆನಿ ಮಾದರಿಯಲ್ಲೇ ಬಾಕಿ ಆಸ್ತಿ ತೆರಿಗೆ ಹಾಗೂ ವ್ಯತ್ಯಾಸದ ತೆರಿಗೆಯನ್ನು ಬಿಬಿಎಂಪಿಗೆ ಪಾವತಿ ಮಾಡಲು ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು ಎಂದರು.
ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟುವಲ್ಲಿ ಬ್ಯಾಂಕ್‌ಗಳಿಂದ ಅಸಹಕಾರವಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಬ್ಯಾಂಕ್‌ಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಕೆಲವು ಬ್ಯಾಂಕ್‌ಗಳಲ್ಲಿ ಆಸ್ತಿ ತೆರಿಗೆ ಪಾವತಿಸಿಕೊಳ್ಳಲು ನಾಗರೀಕರಿಗೆ ಸೂಕ್ತ ಸಲಹೆ ಸೂಚನೆಗಳನ್ನು ಬ್ಯಾಂಕ್ ಅಧಿಕಾರಿಗಳು ನೀಡುತ್ತಿಲ್ಲ. ಇದರಿಂದ ನಾಗರೀಕರಿಗೆ ತೆರಿಗೆ ಕಟ್ಟುವಲ್ಲಿ ಹೆಚ್ಚು ತೊಂದರೆಯಾಗುತ್ತಿದೆ. ಇದು ಹೀಗೆ ಮುಂದುವರೆದರೆ ಬ್ಯಾಂಕ್‌ಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದದಿಂದ ಹಿಂದೆ ಸರಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆನರಾ ಬ್ಯಾಂಕ್‌ನಲ್ಲೂ ಕೂಡಾ ತೆರಿಗೆ ಕಟ್ಟುವ ನಾಗರೀಕರಿಗೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಂಟಿ ಆಯುಕ್ತ (ಕಂದಾಯ) ವೆಂಕಟಾಚಲಪತಿ ಮತ್ತಿತರರು ಉಪಸ್ಥಿತರಿದ್ದರು.

Comments are closed.