ಅನಾಥ ಮಕ್ಕಳನ್ನು ಕರೆತಂದು, ಧರ್ಮ ಬದಲಾವಣೆಗಾಗಿ ಕಳ್ಳ ಸಾಗಾಣಿಕೆ ಮಾಡ್ತಿದ್ದ ಜಾಲವೊಂದು ಮಲೆನಾಡಿನ ಶಿವಮೊಗ್ಗದಲ್ಲಿ ಪತ್ತೆಯಾಗಿದೆ. ಪೋಷಕರು ಯಾರೆಂಬುದೇ ತಿಳಿಯದ ಈ ಮಕ್ಕಳನ್ನು ಮತಾಂತರಕ್ಕೆ ಒಳಪಡಿಸುತ್ತಿದ್ದ ಮಾಹಿತಿ ಕೂಡ ತಿಳಿದು ಬಂದಿದೆ. ಶಿವಮೊಗ್ಗದ ಬೊಮ್ಮನಕಟ್ಟೆಯ ಮನೆಯೊಂದರಲ್ಲಿ 5 ರಿಂದ 12 ವರ್ಷದೊಳಗಿನ 9 ಮಕ್ಕಳನ್ನು ಅಕ್ರಮ ಬಂಧನದಲ್ಲಿಡಲಾಗಿತ್ತು. ಈ ಮಕ್ಕಳನ್ನು ಮಕ್ಕಳ ಸಂರಕ್ಷಣಾ ಘಟಕ ರಕ್ಷಿಸುವ ಮೂಲಕ, ರಾಜ್ಯವ್ಯಾಪಿಯ ಜಾಲವೊಂದನ್ನು ಬಟಾ ಬಯಲು ಮಾಡಿದ್ದಾರೆ.
ಕ್ರಿಶ್ಚಿಯನ್ ಧರ್ಮ ಭೋದಕನಾಗಿದ್ದ ಮಧು ಎಂಬಾತ ಈ ಕೃತ್ಯವೆಸಗಿದ್ದು, ದಿವ್ಯಜ್ಯೋತಿ ಚಾರಿಟೆಬಲ್ ಟ್ರಸ್ಟ್ ಎಂಬ ಬ್ಯಾನರ್ ಹಾಕಿ, ಈ ಮಕ್ಕಳನ್ನು ಮನೆಯೊಂದರಲ್ಲಿ ಇಟ್ಟಿದ್ದ. ಹಿಂದೂ ಧರ್ಮದ 6 ಹೆಣ್ಣು ಮತ್ತು 3 ಗಂಡು ಮಕ್ಕಳು ಈತನ ವಶದಲ್ಲಿದ್ದರು. ಮಾಹಿತಿ ತಿಳಿದ ಮಕ್ಕಳ ಕಲ್ಯಾಣ ಸಮಿತಿ, ಪೊಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಇವರು ಚಿಕ್ಕಮಗಳೂರು, ದಾವಣಗೆರೆ, ಬೆಂಗಳೂರು ಹಾಗೂ ಚಿತ್ರದುರ್ಗ ಮೂಲದ ಮಕ್ಕಳು ಎಂಬುದು ತಿಳಿದುಬಂದಿದೆ. ಈ ಮಕ್ಕಳನ್ನು ಕಾನೂನು ಬಾಹಿರವಾಗಿ ಯಾವುದೇ ದಾಖಲೆಯಿಲ್ಲದೆ ಇಟ್ಟಕೊಂಡಿದ್ದ ಮಧು, ಮಕ್ಕಳ ಪೋಷಕರೆಂದು ಕೆಲವರ ಬಳಿ 20 ಸಾವಿರ ರೂಪಾಯಿ ಬಾಂಡ್ ಕೂಡ ಬರೆಯಿಸಿ ಕೊಂಡಿದ್ದ. ಈ ಹಿನ್ನೆಲೆ ಧರ್ಮ ಬೋಧಕ ಮಧು ವಿರುದ್ಧ 2015 ರ ನೂತನ ಬಾಲ ನ್ಯಾಯ ಕಾಯ್ದೆ ಕಲಂ 42 , ಐಪಿಸಿ 363 ಮತ್ತು 365 ರ ಅಡಿಯಲ್ಲಿ ವಿನೋಬ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಕಳೆದೊಂದು ವರ್ಷದಿಂದ ಜಿಲ್ಲೆಯ ಭದ್ರಾವತಿ , ಶಿವಮೊಗ್ಗ ನಗರದ ಹಲವೆಡೆ ಈ ಮಧು ಮಕ್ಕಳನ್ನು ಸಾಗಾಟ ಮಾಡಿದ್ದ ಎಂಬ ಮಾಹಿತಿ ಕೂಡ ತಿಳಿದು ಬಂದಿದೆ.
ಕರ್ನಾಟಕ
Comments are closed.