ಕರ್ನಾಟಕ

ಕಪ್ಪತಗುಡ್ಡವನ್ನು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಮರುಘೋಷಣೆ ಗದುಗಿನಲ್ಲಿ ಬೃಹತ್‌ ಪ್ರತಿಭಟನೆ

Pinterest LinkedIn Tumblr


ಗದಗ: ಜಿಲ್ಲೆಯ ಕಪ್ಪತಗುಡ್ಡವನ್ನು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಮರು ಘೋಷಣೆ ಮಾಡುವಂತೆ ಒತ್ತಾಯಿಸಿ, ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಸಂಘಟನೆಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೋಮವಾರ ಬೆಳಿಗ್ಗೆ ಗದುಗಿನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಕಪ್ಪತಗುಡ್ಡ ನಮ್ಮದು, ಗಣಿಗಾರಿಕೆ ಕಂಪೆನಿಗಳನ್ನು ಓಡಿಸಿ, ಎಪ್ಪತ್ತುಗಿರಿಗಿಂತ ಕಪ್ಪತಗಿರಿ ನೋಡು, ಕಪ್ಪತಗುಡ್ಡಕ್ಕೆ ಮರಣ ಶಾಸನ ಬರೆಯಬೇಡಿ ಮತ್ತಿತರ ಘೋಷಣಾ ಫಲಕಗಳನ್ನು ಹಿಡಿದು 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮಹಿಳಾ ಸಂಘಟನೆಗಳ ಸದಸ್ಯರು ಪ್ರತಿಭಟನೆಯಲ್ಲಿ ಹೆಜ್ಜೆ ಹಾಕಿದರು.

ಸೋಮವಾರ ಬೆಳಿಗ್ಗೆ 11 ಗಂಟೆಗೆ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಇತ್ತೀಚೆಗೆ ಡಂಬಳದಲ್ಲಿ ನಡೆದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಶೇ 99ರಷ್ಟು ಜನಾಭಿಪ್ರಾಯವು ಕಪ್ಪತಗುಡ್ಡ ಸ್ಥಾನಮಾನ ಮುಂದುವರಿಸುವ ಪರವಾಗಿಯೇ ಬಂದಿದೆ. ಇನ್ನಾದರೂ ಸರ್ಕಾರ ವಿಳಂಬ ನೀತಿ ಅನುಸರಿಸದೆ ಆದಷ್ಟು ಬೇಗ, ಸಂರಕ್ಷಿತ ಸ್ಥಾನಮಾನ ಮುಂದುವರಿಸಿ ಆದೇಶ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.

ಮೆರವಣಿಗೆಯು ಮಠದ ಆವರಣದಿಂದ ಭೂಮರೆಡ್ಡಿ ವೃತ್ತದ ತನಕ ಬಂದು ನಂತರ ಮರಳಿ ಗಾಂಧಿ ವೃತ್ತಕ್ಕೆ ಬಂದು ತಲುಪಿತು. ಪ್ರತಿಭಟನೆಯುದ್ದಕ್ಕೂ ಕಪ್ಪತಗುಡ್ಡಕ್ಕೆ ಸಂರಕ್ಷಿತ ಮೀಸಲು ಸ್ಥಾನಮಾನ ಮುಂದುವರಿಸಿ ಎಂಬ ಒಕ್ಕೂರಲ ಧ್ವನಿ ಮೊಳಗಿತು.

ಅಹೋರಾತ್ರಿ ಧರಣಿ: ಗದುಗಿನ ಗಾಂಧಿ ವೃತ್ತದಲ್ಲಿ ಕಪ್ಪತಗುಡ್ಡ ಸಂರಕ್ಷಿತ ಸ್ಥಾನಮಾನಕ್ಕೆ ಆಗ್ರಹಿಸಿ ಇಂದು ಸಂಜೆಯಿಂದ ಅಹೋರಾತ್ರಿ ಧರಣಿ ನಡೆಯಲಿದೆ. ಫೆ.15ರವರೆಗೆ ಧರಣಿ ಮುಂದುವರಿಯಲಿದೆ. ಜಿಲ್ಲೆಯ ವಿವಿಧ ಮಠಾಧೀಶರು,ಧಾರವಾಡದ ಸಮಾಜ ಪರಿವರ್ತನಾ ಸಮುದಾಯ, ವಿವಿಧ ರೈತ ಸಂಘಟನೆಗಳು, ಕರ್ನಾಟಕ ಜನಶಕ್ತಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಅಹೋರಾತ್ರಿ ಧರಣಿಗೆ ಬೆಂಬಲ ಸೂಚಿಸಿವೆ.

Comments are closed.