ಕರ್ನಾಟಕ

ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ – ಪಿಎಸ್‍ಐ ಮೇಲೆ ಫೈರಿಂಗ್ ಮಾಡಿದ ಹಂತಕ ಸಾವು

Pinterest LinkedIn Tumblr

ವಿಜಯಪುರ: ರಾಜ್ಯದ ಗಡಿ ಗ್ರಾಮ ಕೊಂಕಣಗಾಂವ್‌ನಲ್ಲಿ ಸೋಮವಾರ ಮುಂಜಾನೆ ಪೊಲೀಸರು–ರೌಡಿಶೀಟರ್‌ಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ, ಭೀಮಾ ತೀರದ ರೌಡಿಶೀಟರ್‌ ಧರ್ಮರಾಜ ಚಡಚಣ ಮೃತಪಟ್ಟಿದ್ದು, ಈತನ ಸಹಚರ ಶಿವಾನಂದ ಶ್ರೀಶೈಲ ಬಿರಾದಾರ, ಚಡಚಣ ಪೊಲೀಸ್ ಠಾಣೆಯ ಪಿಎಸ್‌ಐ ಗೋಪಾಲ ಹಳ್ಳೂರ ಗಾಯಗೊಂಡಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಧರ್ಮರಾಜ ಚಡಚಣ ದೇಹಕ್ಕೆ ಎಂಟು ಗುಂಡು ಹೊಕ್ಕಿವೆ. ಸಹಚರ ಶಿವಾನಂದನಿಗೆ ಎರಡು, ಪಿಎಸ್‌ಐಗೆ ಒಂದು ಗುಂಡು ತಗುಲಿದೆ ಎಂದು ಜಿಲ್ಲಾ ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

‘ಗಂಭೀರವಾಗಿ ಗಾಯಗೊಂಡಿದ್ದ ಧರ್ಮರಾಜನನ್ನು ಪ್ರಾಣಾಪಾಯದಿಂದ ಪಾರು ಮಾಡಲು ಯತ್ನಿಸಿದೆವು. ಆದರೆ ಎದೆಗೆ ಮೂರು, ಬೆನ್ನಿಗೆ ಮೂರು, ಬಲಗೈ–ಬಲ ಕಾಲಿಗೆ ತಲಾ ಒಂದೊಂದು ಗುಂಡು ಹೊಕ್ಕಿದ್ದರಿಂದ, ತೀವ್ರ ಅಸ್ವಸ್ಥಗೊಂಡ ಆತ ಚಿಕಿತ್ಸೆಗೆ ಸ್ಪಂದಿಸಲಿಲ್ಲ’ ಎಂದು ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನ ಅಧೀಕ್ಷಕ ವಿಜಯಕುಮಾರ ಕಲ್ಯಾಣಪ್ಪಗೋಳ ತಿಳಿಸಿದರು.

‘ಶಿವಾನಂದನ ಎಡಗೈ ಮೊಳಕೈಗೆ ಎರಡು ಗುಂಡು ಹೊಕ್ಕಿವೆ. ಪಿಎಸ್‌ಐ ಗೋಪಾಲ ಹಳ್ಳೂರ ಬಲ ಭುಜಕ್ಕೆ ಗುಂಡು ಹೊಕ್ಕಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.

ಅಕ್ರಮ ಶಸ್ತ್ರಾಸ್ತ್ರ:
‘ರೌಡಿ ಶೀಟರ್ ಧರ್ಮರಾಜ ಚಡಚಣ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಎಂಬ ಖಚಿತ ಮಾಹಿತಿ ದೊರೆತಿತ್ತು. ತಪಾಸಣೆಗೆ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ನೇತೃತ್ವದ ತಂಡ ಕೊಂಕಣಗಾಂವ್‌ಗೆ ಸೋಮವಾರ ನಸುಕಿನಲ್ಲೇ ತೆರಳಿತ್ತು.

ಈ ಸಂದರ್ಭ ಧರ್ಮರಾಜ ಪೊಲೀಸರ ಜತೆ ವಾಗ್ವಾದ ನಡೆಸಿದ್ದಾನೆ. ಪಿಎಸ್‌ಐ ತಪಾಸಣೆಗೆ ಮುಂದಾಗುತ್ತಿದ್ದಂತೆ ಸಹಚರರ ಜತೆ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದ್ದಾನೆ. ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ, ಗಂಭೀರ ಗಾಯಗೊಂಡು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್.ಜೈನ್‌ ತಿಳಿಸಿದರು.

‘ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಪಿಎಸ್‌ಐ ಸರ್ವೀಸ್‌ ರಿವಾಲ್ವರ್ ಸೇರಿದಂತೆ ರೌಡಿ ಶೀಟರ್‌ಗಳು ಬಳಸಿದ ಐದು ನಾಡ ಪಿಸ್ತೂಲ್, ಎರಡು ಲಾಂಗ್ ರೇಜ್‌ನ ಆಯುಧ ಲಭ್ಯವಾಗಿವೆ’ ಎಂದು ಹೇಳಿದರು.

ಭೀಮಾ ತೀರದ ಕುಖ್ಯಾತ ರೌಡಿಶೀಟರ್:

2014ರಲ್ಲಿ ವಿಜಯಪುರ ನಗರದಲ್ಲಿ ನಡೆದ ಇಲ್ಲಿನ ಮಹಾನಗರ ಪಾಲಿಕೆಯ ಮೊದಲ ಮೇಯರ್ ಸಜ್ಜಾದೆ ಪೀರಾ ಮುಶ್ರೀಫ್ ಸಹೋದರನ ಪುತ್ರ ಫಯಾಜ್ ಮುಶ್ರೀಫ್ ಕೊಲೆ ಪ್ರಕರಣದಲ್ಲಿ ಧರ್ಮರಾಜ ಮೊದಲ ಆರೋಪಿ ಆಗಿದ್ದ.

ಧರ್ಮರಾಜ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 2015ರ ಡಿಸೆಂಬರ್‌ನಲ್ಲಿ ಪುಣೆಯಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿದ್ದ. ದರ್ಗಾ ಜೈಲಿನಲ್ಲಿದ್ದುಕೊಂಡೇ ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂಬ ಆರೋಪವೂ ಈತನ ಮೇಲಿತ್ತು. ಕೊಲೆ ಪ್ರಕರಣ ವಿಚಾರಣೆಗೆ ವಿಜಯಪುರ ನ್ಯಾಯಾಲಯಕ್ಕೆ ಸಶಸ್ತ್ರ ಸಮೇತ ಹಾಜರಾಗಿ, ಪೊಲೀಸರಿಂದ ಕಠಿಣ ಎಚ್ಚರಿಕೆಯನ್ನು ಪಡೆದಿದ್ದ.

Comments are closed.