ಕರ್ನಾಟಕ

ಪ್ರೇಮ ವೈಫಲ್ಯ: ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಜೋಡಿ; ಬರೆದಿಟ್ಟ ಕೊನೆ ಆಸೆ ಏನು..?

Pinterest LinkedIn Tumblr

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಾನವಿ (16) ಮತ್ತು ಗಿರೀಶ್ (18) ಆತ್ಮಹತ್ಯೆಗೆ ಶರಣಾದ ಜೋಡಿ. ಇಬ್ಬರೂ ಆತ್ಮಹತ್ಯೆಗೂ ಮುನ್ನ ತಮ್ಮ ಕೊನೆಯ ಆಸೆಯನ್ನು ಬರೆದಿಟ್ಟಿದ್ದು, ಇಬ್ಬರನ್ನು ಮರಣೋತ್ತರ ಪರೀಕ್ಷೆ ಮಾಡದೇ ಮಣ್ಣು ಹಾಕಿ ಒಂದೇ ಸಮಾಧಿ ಮಾಡಿ ಎಂದು ಹೇಳಿದ್ದಾರೆ.

ಗಾನವಿ ಗೌರಿಬಿದನೂರು ನಗರದ ಮುನಿಸಿಪಾಲ್ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದು, ಗಿರೀಶ್ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಇಂದು ಬೆಳಿಗ್ಗೆ ಮನೆಯಿಂದ ಶಾಲಾ-ಕಾಲೇಜಿಗೆ ಅಂತ ಹೋದ ಇಬ್ಬರು ಗ್ರಾಮದ ಹೊರವಲಯದಲ್ಲಿರುವ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಣಸೆ ಮರದ ಬುಡದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಡೆತ್ ನೋಟ್ ನಲ್ಲಿ ನಮ್ಮ ಕೊನೆಯ ಆಸೆ ಒಂದೇ ನಮ್ಮಿಬ್ಬರನ್ನ ಒಂದೇ ಗುಣಿಗೆ ಹಾಕಿ, ಪೋಸ್ಟ್ ಮಾರ್ಟಂ ಗೆ ಕೊಡಬೇಡಿ, I Am Sorry ಅಂತ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಘಟನಾ ಸ್ಥಳದಲ್ಲಿ ಬಾಲಕಿಯ ಸ್ಕೂಲ್ ಬ್ಯಾಗ್ ಮತ್ತು ಪುಸ್ತಕಗಳು ಲಭ್ಯವಾಗಿವೆ.

ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮೃತ ದೇಹಗಳನ್ನ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಅಪ್ರಾಪ್ತ ವಯಸ್ಕರಾದ ಕಾರಣ ಸದ್ಯ ಪ್ರೀತಿ ಪ್ರೇಮ ಎಲ್ಲಾ ಬೇಡ. ಚೆನ್ನಾಗಿ ಓದಿ ನಾವೇ ನಿಮಗೆ ಮದುವೆ ಮಾಡುತ್ತೇವೆ ಅಂತ ಬದ್ದಿವಾದ ಹೇಳಿದ್ದೀವಿ. ಆದ್ರೆ ಅಷ್ಟರಲ್ಲೇ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಮೃತರ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.