ಕರ್ನಾಟಕ

ಮಡಿಕೇರಿಯ ಸಂಪಾಜೆ ಮನೆಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಕೀಲ

Pinterest LinkedIn Tumblr

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಂಪಾಜೆಯಲ್ಲಿ ವಕೀಲರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚಿತ್ರ ನಿರ್ಮಾಪಕ, ಸಾಹಿತಿ, ಸಂಪಾಜೆ ಪಂಚಲಿಂಗೇಶ್ವರ ದೇವಾಲಯದ ಆಡಳಿತ ಮೊಕ್ತೇಸರರಾಗಿರುವ ದೇವಿಪ್ರಸಾದ್ ಅವರ ಏಕೈಕ ಪುತ್ರ ದೇವಿಚರಣ್(36) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶನಿವಾರ ರಾತ್ರಿ ಮನೆಯಲ್ಲಿ ಒಬ್ಬರೇ ಇದ್ದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ ಬೆಳಗ್ಗೆ ಕೆಲಸದವರು ಮನೆಗೆ ಬಂದಾಗ ವಿಚಾರ ಬೆಳಕಿಗೆ ಬಂದಿದೆ.

ವಕೀಲಿ ವೃತ್ತಿ ಮಾಡುತ್ತಿದ್ದ ದೇವಿಚರಣ್ ಸುಳ್ಯದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ನೆಲೆಸಿದ್ದರೆ, ದೇವಿಪ್ರಸಾದ್ ದಂಪತಿ ಸಂಪಾಜೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಶನಿವಾರ ದೇವಿಪ್ರಸಾದ್ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಸಂಪಾಜೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ದೇವಿಚರಣ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ. ಕುಟುಂಬದ ವೈಯಕ್ತಿಕ ಸಮಸ್ಯೆಯಿಂದ ಖಿನ್ನತೆಗೆ ಜಾರಿ ಆತ್ಮಹತ್ಯೆಗೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸಂಪಾಜೆಯಲ್ಲಿ ಹೋಮ್ ಸ್ಟೇ ನಡೆಸುತ್ತಿದ್ದ ಇವರು, ಕೂರ್ಗ್ ಹೋಮ್ ಸ್ಟೇ ಸಂಘದ ಸಂದಸ್ಯರಾಗಿದ್ದರು. ಜೊತೆಗೆ ಲಯನ್ಸ್ ಇಂಟರ್ ನ್ಯಾಷನಲ್ ಕ್ಲಬ್ ನ ಸಕ್ರೀಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು. ಡಿಸೆಂಬರ್ 14 ರಂದು ದೇವಿಚರಣ್ ಅವರು ಕೊನೆಯದಾಗಿ ಫೇಸ್ ಬುಕ್ ನಲ್ಲಿ ಜೀವನದ ಕುರಿತು ಅರ್ಥ ಬರುವಂತಹ ನಾಲ್ಕು ಇಂಗ್ಲಿಷ್ ಉಕ್ತಿಗಳನ್ನು ಪೋಸ್ಟ್ ಮಾಡಿದ್ದರು.

Comments are closed.