ಬೆಂಗಳೂರು: ಕೊಟ್ಟ ಸಾಲವನ್ನು ವಾಪಾಸ್ ಕೇಳಿದ್ದಕ್ಕೆ ಮಹಿಳೆಯನ್ನು ಆಕೆಯ ಸ್ನೇಹಿತನೇ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ
ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದ್ದು, ಎರಡು ದಿನಗಳ ಹಿಂದೆ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದ್ಯ ಪ್ರಕರಣ ಸಂಬಂಧ ಆರೋಪಿ ಗೋಪಿನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆಯನ್ನು ತಾರಾ ಎಂದು ಗುರುತಿಸಲಾಗಿದೆ.
ಎಚ್ಎಎಲ್ ನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿರೋ ಆರೋಪಿ ಗೋಪಿನಾಧ್ ಬೆಂಗಳೂರಿನ ಹೊರಮಾವು ನಿವಾಸಿಯಾಗಿದ್ದು, ತಾರಾ ಕುಟುಂಬಕ್ಕೆ ಆತ್ಮೀಯ ಸ್ನೇಹಿತನಾಗಿದ್ದ.
ಇತ್ತೀಚೆಗೆ ಗೋಪಿನಾಥ್ ತಾರಾ ಬಳಿ 11 ಲಕ್ಷ ಸಾಲ ಪಡೆದಿದ್ದ. ಹೀಗಾಗಿ ತಾರಾ ಆ ಹಣವನ್ನು ವಾಪಸ್ ಕೊಡುವಂತೆ ಪದೇ ಪದೇ ಕೇಳುತ್ತಿದ್ದರು. ಈ ವಿಚಾರದಲ್ಲಿ ಇವರಿಬ್ಬರ ಮಧ್ಯೆ ನಡೆದ ಜಗಳ ತಾರಕಕ್ಕೇರಿದ್ದು, ತಾರಾ ತನ್ನ ತಾಯಿ ಮನೆಗೆ ಬಂದಿದ್ದ ವೇಳೆ ಗೋಪಿನಾಥ್ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದು, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಮನೆಗೆ ಬೀಗ ಹಾಕಿದ್ದಾನೆ. ಅಲ್ಲದೇ ಮನೆ ಕೀ ಹಾಗೂ ಚಾಕುವನ್ನು ಪಕ್ಕದ ಚರಂಡಿಗೆ ಬಿಸಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.
ಇತ್ತ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಗೋಪಿನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯ ಸಂಗಮ್ ರಸ್ತೆಯ ತಾಯಿ ಮನೆಯಲ್ಲಿ ಈ ಕೊಲೆ ನಡೆದಿದ್ದು, ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Comments are closed.