ಕರ್ನಾಟಕ

ಜನವರಿ 20ರಿಂದ ಮೇ ಅಂತ್ಯದ ವರೆಗೆ ಶಿರಾಡಿಘಾಟ್‌ ರಸ್ತೆ ಬಂದ್‌

Pinterest LinkedIn Tumblr


ಹಾಸನ: ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ -75ರ ಶಿರಾಡಿಘಾಟ್‌ನಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣದ 2ನೇ ಹಂತದ ಕಾಮಗಾರಿ ಆರಂಭಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ಜ.20 ರಿಂದ ಕಾಮಗಾರಿ ಆರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಅಂದಿನಿಂದಲೇ ( ಜ.20) ಈ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್‌ ಮಾಡಲು ನಿರ್ಧರಿಸಲಾಗಿದೆ.

ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸಕಲೇಶಪುರದಲ್ಲಿ ಶನಿವಾರ ವಿವಿಧ ಇಲಾಖೆಗಳ ಸಭೆಯಲ್ಲಿ ಚರ್ಚಿಸಿ ಶಿರಾಡಿಘಾಟ್‌ನಲ್ಲಿ 12.38 ಕಿ.ಮೀ. ಕಾಂಕ್ರೀಟ್‌ ರಸ್ತೆ ನಿರ್ಮಾಣದ 61.57 ಕೋಟಿ ರೂ. ಅಂದಾಜಿನ ಕಾಮಗಾರಿಯನ್ನು ಜ.20 ರಿಂದ ಆರಂಭಿಸಿ ಮೇ ಅಂತ್ಯದೊಳಗೆ ಪೂರ್ಣಗೊಳಿಸಲು ತೀರ್ಮಾನಿಸಲಾಯಿತು. ಶಿರಾಡಿಘಾಟ್‌ ರಸ್ತೆ ಸಂಚಾರ ಬಂದ್‌ ಆಗಿರುವ 5 ತಿಂಗಳ ಅವಧಿಯಲ್ಲಿ ವಾಹನ ಸಂಚಾರಕ್ಕೆ 7 ಪರ್ಯಾಯ ರಸ್ತೆಗಳನ್ನೂ ಗುರುತಿಸಲಾಗಿದೆ.

ಶಿರಾಡಿಘಾಟ್‌ ರಸ್ತೆ ವಿಸ್ತೀರ್ಣವೆಷ್ಟು ?: ರಾಷ್ಟ್ರೀಯ ಹೆದ್ದಾರಿ -75 ಹಾಸನ -ಮಂಗಳೂರು ನಡುವೆ 169 ಕಿ.ಮೀ. ರಸ್ತೆಯ ಪೈಕಿ 143 ಕಿ. ಮೀಟರ್‌ ಅನ್ನು ಎನ್‌ಎಚ್‌ಎಐ ಚತುಷ್ಪಥ ರಸ್ತೆಯನ್ನಾಗಿ ನಿರ್ಮಿಸುವ ಕಾಮಗಾರಿ ಆರಂಭಿಸಿದೆ. ಇನ್ನುಳಿದ ಶಿರಾಡಿಘಾಟ್‌ನಲ್ಲಿ ರಸ್ತೆ 26 ಕಿ.ಮೀ. ಉದ್ದವಿದ್ದು, ಅಲ್ಲಿ ಚತುಷ್ಪಥ ರಸ್ತೆ ನಿರ್ಮಿಸಲು ತಾಂತ್ರಿಕವಾಗಿ ಸಾಧ್ಯವಿಲ್ಲದ ಕಾರಣ ದ್ವಿಪಥ ರಸ್ತೆಯನ್ನೇ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

26 ಕಿ.ಮೀ.ನಲ್ಲಿ ಮೊದಲ ಹಂತದಲ್ಲಿ 13.62 ಕಿ. ಮೀ.ನ್ನು 2015 ರ ಜನವರಿಯಲ್ಲಿ ಕಾಂಕ್ರೀಟ್‌ ರಸ್ತೆಯಾಗಿ ಅಭಿವೃದ್ಧಿಪಡಿಸುವ 69.90 ಕೋಟಿ ರೂ. ಕಾಮಗಾರಿಯನ್ನು 2015ರ ಆಗಸ್ಟ್‌ನಲ್ಲಿ ಪೂರ್ಣಗೊಳಿಸಲಾಗಿತ್ತು. ಇನ್ನುಳಿದ 12.38 ಕಿ.ಮೀ. ಕಾಂಕ್ರೀಟ್‌ ರಸ್ತೆ ನಿರ್ಮಾಣದ 61.57 ಕೋಟಿ ರೂ. ಕಾಮಗಾರಿಯನ್ನು ಸಂಸ್ಥೆಯೊಂದು ಪಡೆದು ಸಕಾಲದಲ್ಲಿ ಕಾಮಗಾರಿ ಆರಂಭಿಸಲಿಲ್ಲ. ಹಾಗಾಗಿ ಆ ಗುತ್ತಿಗೆ ಕರಾರನ್ನು ಸರ್ಕಾರ ರದ್ದುಪಡಿಸಿ ಈಗ ಮೊದಲ ಹಂತದ ಕಾಮಗಾರಿ ನಿರ್ವಹಿಸಿದ್ದ ಮಂಗಳೂರಿನ ಓಷಿಯನ್‌ ಕನ್‌ಸ್ಟ್ರಕ್ಷನ್‌ ಇಂಡಿಯಾ ಪ್ರೈ.ಲಿ. ಕಂಪನಿಗೇ 61.57 ಕೋಟಿ ರೂ. ಕಾಮಗಾರಿಯನ್ನು ನೀಡಿದೆ. ಗುತ್ತಿಗೆ ಅವಧಿ 15 ತಿಂಗಳ ಕಾಲಾವಧಿ ನಿಗದಿಯಾಗಿದ್ದರೂ ಶಿರಾಡಿಘಾಟ್‌ ರಸ್ತೆಯ ಪ್ರಾಮುಖ್ಯತೆಯ ದೃಷ್ಠಿಯಿಂದ 5 ತಿಂಗಳೊಳಗೆ ಕಾಮಗಾರಿ ಮುಗಿಸಬೇಕೆಂದು ಸೂಚಿಸಲಾಗಿದೆ.

12.38 ಕಿ.ಮೀ.ನಲ್ಲಿ 74 ಕಿರು ಸೇತುವೆಗಳನ್ನು ನಿರ್ಮಿಸಬೇಕಾಗಿದ್ದು, ಆ ಪೈಕಿ ಇದುವರೆಗೆ 27 ಕಿರು ಸೇತುವೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಒಟ್ಟು 53,519 ಕ್ಯೂಬಿಕ್‌ ಮೀಟರ್‌ ಜಲ್ಲಿ ಅಗತ್ಯವಿದ್ದು, ಇದುವರೆಗೆ 23,851 ಕ್ಯೂಬಿಕ್‌ ಮೀಟರ್‌ ಸಂಗ್ರಹಿಸಲಾಗಿದೆ. 26,757 ಕ್ಯೂಬಿಕ್‌ ಮೀಟರ್‌ ಮರಳು ಅಗತ್ಯವಿದ್ದು, ಇದುವರೆಗೂ ಮರಳು ಸಂಗ್ರಹಣೆಯಾಗಿಲ್ಲ. ಈಗ ಪ್ರತಿದಿನ 500 ಕ್ಯೂಬಿಕ್‌ ಮೀಟರ್‌ ಮರಳನ್ನು ಮಂಗಳೂರಿನಿಂದ ಸಾಗಣೆ ಮಾಡಲು ಸರ್ಕಾರ ಅನುಮತಿ ನೀಡಿದೆ. 29,798 ಕ್ಯೂಬಿಕ್‌ ಮೀಟರ್‌ ಉಕ್ಕಿನ ಸರಳು ಅಗತ್ಯವಿದ್ದು, ಈಗಾಗಲೇ 6,102 (ಶೇ.20.48) ) ಸಂಗ್ರಹಿಸಲಾಗಿದೆ ಎಂದು ಗುತ್ತಿಗೆ ಪಡೆದ ಕಂಪನಿ ಮಾಹಿತಿ ನೀಡಿದೆ.

ಕಾಂಕ್ರೀಟ್‌ ರಸ್ತೆ ನಿರ್ಮಾಣ ಏಕೆ ?: ಅತಿ ಹೆಚ್ಚು ಬೀಳುವ ಶಿರಾಡಿಘಾಟ್‌ನ ಡಾಂಬರು ರಸ್ತೆಯಲ್ಲಿ ಅತಿ ಹೆಚ್ಚು ವಾಹನಗಳ ಸಂಚಾರದಿಂದ ಪ್ರತಿ ವರ್ಷ ರಸ್ತೆ ಹಾಳಾಗಿ ವಾಹನಗಳು ಸಂಚರಿಸಲು ಪರದಾಡಬೇಕಾಗಿತ್ತು. ಆ ಹಿನ್ನಲೆಯಲ್ಲಿ ಯುಪಿಎ ಸರ್ಕಾರದಲ್ಲಿ ಭೂ ಸಾರಿಗೆ ಸಚಿವರಾಗಿದ್ದ ಆಸ್ಕರ್‌ ‌ರ್ನಾಂಡೀಸ್‌ ಅವರು ಶಿರಾಡಿಘಾಟ್‌ನ 26 ಕಿ. ಮೀ. ರಸ್ತೆಯನ್ನು ಚನ್ನೆçನ ಜಿಯೋ ಟೆಕ್ಸ್‌ಟೈಲ್ಸ್‌ ತಂತ್ರಜಾlನದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ 100 ಕೋಟಿ ರೂ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಆ ಅನುದಾನದಲ್ಲಿ ಎಷ್ಟೇ ಮಳೆ ಬಿದ್ದರೂ ರಸ್ತೆ ಹಾಳಾಗದಂತೆ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ ನಿರ್ಮಾಣದ ಅವಧಿಯಲ್ಲಿ ಕಾಮಗಾರಿಗೆ ಅಡಚಣೆ ಆಗದಿರಲೆಂದು ಹಾಗೂ ಗುಣಮಟ್ಟ ಕಾಯ್ದುಕೊಳ್ಳಲು ಆ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್‌ ಮಾಡಲಾಗುತ್ತಿದೆ.

ವಾಹನ ಸಂಚಾರಕ್ಕೆ 7 ಪರ್ಯಾಯ ರಸ್ತೆ
ಮಂಗಳೂರು- ಬಿ.ಸಿ.ರೋಡ್‌ ಶಿರಾಡಿಘಾಟ್‌- ಸಕಲೇಶಪುರ – ಹಾಸನ (168 ಕಿ. ಮೀ.) ನೇರ ಮಾರ್ಗದ ಬದಲಿಗೆ ಗುರುತಿಸಿರುವ ಪರ್ಯಾಯ ರಸ್ತೆಗಳು ಹೀಗಿವೆ.

1. ಎ ವರ್ಗದ ವಾಹನ ಸಂಚಾರಕ್ಕೆ ನಿಗದಿಪಡಿಸಿರುವ ಮಾರ್ಗ:
ಮಂಗಳೂರು -ಬಿ.ಸಿ.ರೋಡ್‌- ಉಜಿರೆ, ಚಾರ್ಮಾಡಿ ಘಾಟ್‌, ಮೂಡಿಗೆರೆ – ಬೇಲೂರು- ಹಾಸನ.(188 ಕಿ. ಮೀ.)

2. ಎ ವರ್ಗದ ವಾಹನಗಳಿಗೆ :
ಮಂಗಳೂರು -ಬಿ.ಸಿ.ರೋಡ್‌-ಉಜಿರೆ, ಚಾರ್ಮಾಡಿ ಘಾಟ್‌,ಮೂಡಿಗೆರೆ -ಜನ್ನಾಪುರ-ಹಾನಬಾಳ್‌ – ಆನೆಮಹಲ್‌
-ಸಕಲೇಶಪುರ- ಹಾಸನ.(190 ಕಿ.ಮೀ.)

3. ಬಿ.ವರ್ಗದ ವಾಹನಗಳಿಗೆ:
ಮಂಗಳೂರು-ಬಿ.ಸಿ.ರೋಡ್‌- ಮಾಣಿ -ಪುತ್ತೂರು-ಮಡಿಕೇರಿ- ಹುಣಸೂರು – ಕೆ.ಆರ್‌.ನಗರ-ಹೊಳೆನರಸೀಪುರ-ಹಾಸನ. (309 ಕಿ. ಮೀ.)

4. ಎ ಮತ್ತು ಬಿ.ವರ್ಗದ ವಾಹನಗಳಿಗೆ :
ಮಂಗಳೂರು -ಬಿ.ಸಿ.ರೋಡ್‌- ಮಾಣಿ -ಪುತ್ತೂರು- ಮಡಿಕೇರಿ- ಇಲವಾಲ -ಶ್ರೀರಂಗ ಪಟ್ಟಣ -ಬೆಂಗಳೂರು (390 ಕಿ.ಮೀ.)

5. ಎ ವರ್ಗದ ವಾಹನಗಳ ಸಂಚಾರಕ್ಕೆ :
ಉಡುಪಿ – ಕಾರ್ಕಳ-ಮಲಘಾಟ್‌-ಕುದುರೆಮುಖ- ಕಳಸ-ಕೊಟ್ಟಿಗೆಹಾರ- ಮೂಡಿಗೆರೆ- ಬೇಲೂರು- ಹಾಸನ -ಬೆಂಗಳೂರು 420 ಕಿ.ಮೀ.

6. ಎ ಮತ್ತು ಬಿ.ವರ್ಗದ ವಾಹನಗಳ ಸಂಚಾರಕ್ಕೆ :
ಉಡುಪಿ – ಕುಂದಾಪುರ-ಸಿದ್ದಾಪುರ- ಹೊಸಂಗಡಿ- ಬಳೆಬಾರೆ ಘಾಟ್‌-ಮಾಸ್ತಿಕಟ್ಟೆ- ಹೊಸನಗರ- ಆಯನೂರು- ಶಿವಮೊಗ್ಗ-ಬೆಂಗಳೂರು- 469 ಕಿ. ಮೀ.

7. ಬಿ ವರ್ಗದ ವಾಹನಗಳಿಗೆ:
ಉಡುಪಿ – ಕುಂದಾಪುರ-ಮುರುಡೇಶ್ವರ- ಹೊನ್ನಾವರ- ಸಾಗರ- ಶಿವಮೊಗ್ಗ -ನೆಲಮಂಗಲ – ಬೆಂಗಳೂರು.

ಎ. ವರ್ಗದ ವಾಹನಗಳೆಂದರೆ
ಸಾಮಾನ್ಯ ಬಸ್‌, ಕಾರು, ಜೀಪು, ವ್ಯಾನ್‌,ದ್ವಿಚಕ್ರ ವಾಹನಗಳು.

ಬಿ. ವರ್ಗದ ವಾಹನಗಳೆಂದರೆ
ವಾಣಿಜ್ಯ ಉದ್ದೇಶದ ಭಾರೀ ವಾಹನಗಳು, ಎರಡು ಆಕ್ಸಿಲ್‌ ಲಾರಿಗಳು, ಟ್ಯಾಂಕರ್‌ಗಳು, ಮಲ್ಟಿ ಆಕ್ಸಿಲ್‌ ಟ್ರಕ್‌, ಟ್ಯಾಂಕರ್, ರಾಜಹಂಸ ಬಸ್‌, ಐರಾವತ ಬಸ್‌ಗಳು.

-ಉದಯವಾಣಿ

Comments are closed.