ಬೆಂಗಳೂರು: ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದು, ಗಾಂಜಾ ಡೀಲರ್ ಆಗಿದ್ದ ವ್ಯಕ್ತಿಯೊಬ್ಬ ತನ್ನ ವಾರ್ಷಿಕ ಆದಾಯ 40 ಲಕ್ಷ ರೂ. ಎಂದು ಆದಾಯ ಇಲಾಖೆಗೆ ವಿವರ ಸಲ್ಲಿಸಿಕೊಂಡು ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬಾರ್ ಬೆಂಡಿಂಗ್ ಕೆಲಸ ಮಾಡುವ ರಾಚಪ್ಪ (45) ಎಂಬಾತ ಸಿಕ್ಕಿಬಿದ್ದವ. ಈತನ ಸಹಚರ ಶ್ರೀನಿವಾಸ್ (34) ನನ್ನೂ ಬಂಧಿಸಲಾಗಿದೆ. ಬಾರ್ ಬೆಂಡಿಂಗ್ ಕೆಲಸ ಮಾಡುವ ರಾಚಪ್ಪನ ಆದಾಯ ಅಷ್ಟೊಂದು ಇರಲು ಹೇಗೆ ಸಾಧ್ಯ ಎನ್ನುವ ಅನುಮಾನದಲ್ಲಿ ಈತನ ಮೇಲೆ ಕಣ್ಣಿಡಲು ಆದಾಯ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಸೂಚಿಸಿದ್ದರು. ಅದರಂತೆ ಪೊಲೀಸರು ಬೆನ್ನತ್ತಿದಾಗ ಈತ ಗಾಂಜಾ ಡೀಲರ್ ಎನ್ನುವ ಸಂಗತಿ ಬೆಳಕಿಗೆ ಬಂದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ತಲುಪಿಸಿದ್ದಾರೆ.
ಚಾಮರಾಜನಗರದ ನಿವಾಸಿಗಳಾಗಿದ್ದ ಆರೋಪಿಗಳು ಗಾಂಜಾ ಮಾರಾಟ ಮಾಡಲು ಕೋರಮಂಗಲಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಹಿಡಿದು ದಾಳಿ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿ 26 ಕೆಜಿ ತೂಕದ ಗಾಂಜಾ, 5 ಲಕ್ಷ ರೂ ನಗದು ಮತ್ತು ಗಾಂಜಾ ಮಾರಾಟಕ್ಕೆ ಬಳಸಿದ್ದ ಇನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕಟ್ಟಡ ನಿರ್ಮಾಣದಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದರು. ಆದರೆ ರಾಚಪ್ಪ ತನ್ನ ವಾರ್ಷಿಕ ಆದಾಯವನ್ನು 40 ಲಕ್ಷ ರೂ.ಎಂದು ವಿವರ ಸಲ್ಲಿಸಿದ್ದ. ಡ್ರಗ್ಸ್ ದಂಧೆಗಾಗಿ ಗಾಂಜಾ ದಾಸ್ತಾನು ಇಡುವುದಕ್ಕಾಗಿಯೇ ಕನಕಪುರ ರಸ್ತೆಯಲ್ಲಿ ರಾಚಪ್ಪ ಮನೆ ಮಾಡಿದ್ದರೆ, ಶ್ರೀನಿವಾಸ್ ಚಂದಾಪುರದಲ್ಲಿ ಮನೆ ಮಾಡಿದ್ದ. ಇಬ್ಬರಿಗೂ ಕೆಲ ವರ್ಷಗಳ ಹಿಂದೆ ಹೊರ ರಾಜ್ಯದ ಸಾಶು ಎನ್ನುವ ಡೀಲರ್‌ನ ಪರಿಚಯವಾಗಿತ್ತು. ಆತನಿಂದಲೇ ಮಾದಕ ವಸ್ತು ತರಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಶ್ರೀಮಂತರ ಮನೆಯ ಮಕ್ಕಳೇ ಇವರಿಂದ ಗಾಂಜಾ ಖರೀದಿಸುತ್ತಿದ್ದರು ಎಂದು ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಇಬ್ಬರೂ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿರುವ ಅಧಿಕಾರಿಗಳು ತಲೆಮರೆಸಿಕೊಂಡಿರುವ ಸಾಶು ಬಂಧನಕ್ಕೆ ಬಲೆ ಬೀಸಿದ್ದಾರೆ.
Comments are closed.