ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಪಡೆಯುತ್ತಿರುವ ಮೂಲ ವೇತನಕ್ಕೆ ಶೇ 30 ಫಿಟ್‌ಮೆಂಟ್ (ತಾರತಮ್ಯ ಸರಿದೂಗಿಸುವ ಮೊತ್ತ) ನೀಡಿ, 2018ರ ಏಪ್ರಿಲ್ 1ರಿಂದ ಅನುಷ್ಠಾನಗೊಳಿಸಬೇಕು ಎಂದು ಆರನೇ ವೇತನ ಆಯೋಗದ ವರದಿ ಶಿಫಾರಸು ಮಾಡಿದೆ.
ಶೇ 45.25ರಂತೆ ಈಗ ನೀಡುತ್ತಿರುವ ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸಿ, ಆರಂಭಿಕ ಕನಿಷ್ಠ ಮೂಲವೇತನವನ್ನು ₹17,000ಕ್ಕೆ ಏರಿಸಬೇಕು; ಮನೆಬಾಡಿಗೆ ಭತ್ಯೆಯನ್ನು ಶೇ 2ರಿಂದ ಶೇ 6ರವರೆಗೆ ಇಳಿಸುವಂತೆ ಪ್ರಸ್ತಾಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿಯಾದ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಮೊದಲ ಕಂತಿನ ವರದಿ ಸಲ್ಲಿಸಿದರು.
‘ಅಕ್ಕಪಕ್ಕದ ರಾಜ್ಯಗಳ ವೇತನ ಶ್ರೇಣಿ ಅಧ್ಯಯನ ಮಾಡಿ, ನೌಕರರಿಗೆ ಅನುಕೂಲವಾಗುವಂತೆ ವರದಿ ಸಲ್ಲಿಸಲಾಗಿದೆ. ವೇತನ ಪರಿಷ್ಕರಣೆ ಮಾಡಿದಲ್ಲಿ ಬೊಕ್ಕಸಕ್ಕೆ ₹10,508 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ’ ಎಂದು ಶ್ರೀನಿವಾಸಮೂರ್ತಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಅವಧಿ ವಿಸ್ತರಣೆ: ಆಯೋಗದ ಅವಧಿಯನ್ನು ಏಪ್ರಿಲ್ 30ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಆಡಳಿತ ಸುಧಾರಣೆ ಹಾಗೂ ನೌಕರರ ದಕ್ಷತೆ ಹೆಚ್ಚಿಸುವ ಕುರಿತು ಅಧ್ಯಯನ ನಡೆಸಿ ಶಿಫಾರಸು ಮಾಡಲು ಕಾಲಾವಕಾಶ ಬೇಕು ಎಂದು ಆಯೋಗ ಕೋರಿತ್ತು. ವಿವಿಧ ಇಲಾಖೆಗಳ ನೌಕರರ ವೇತನ ತಾರತಮ್ಯದ ಬಗ್ಗೆಯೂ ಅಧ್ಯಯನ ನಡೆಸಿ ಆಯೋಗ ಎರಡನೇ ಕಂತಿನ ವರದಿ ಸಲ್ಲಿಸಲಿದೆ.
ಶಿಫಾರಸುಗಳೇನು?
*ಸ್ವಯಂ ನಿವೃತ್ತಿ ಪಡೆಯಲಿದ್ದ 15 ವರ್ಷಗಳ ಮಿತಿಯನ್ನು 10 ವರ್ಷಕ್ಕೆ ಇಳಿಸುವಂತೆ ಶಿಫಾರಸು.
*ಪೂರ್ಣ ಪ್ರಮಾಣದ ಪಿಂಚಣಿಗಿದ್ದ 33 ವರ್ಷದ ಮಿತಿಯನ್ನು 30 ವರ್ಷಕ್ಕೆ ಇಳಿಸಲು ಪ್ರಸ್ತಾವ.
*ನಿವೃತ್ತಿ ವಯಸ್ಸಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
*ಮರಣ ಮತ್ತು ನಿವೃತ್ತಿ ಉಪದಾನ (ಸೆಟ್ಲ್ ಮೆಂಟ್) ಗರಿಷ್ಠ ಮಿತಿಯನ್ನು ₹10 ಲಕ್ಷದಿಂದ ₹20 ಲಕ್ಷಕ್ಕೆ ಏರಿಕೆ.
*ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ವ್ಯಾಪ್ತಿಯ ನೌಕರರು ಮೃತಪಟ್ಟಾಗ ಅವರ ಅವಲಂಬಿತರಿಗೆ ಕುಟುಂಬ ಪಿಂಚಣಿ ಸೌಲಭ್ಯ.
*ನೌಕರರ ಅಂಗವಿಕಲ ಮಗುವಿಗೆ ಈಗ ನೀಡುತ್ತಿರುವ ಭತ್ಯೆ ₹ 500ರಿಂದ ₹1,000ಕ್ಕೆ ಹೆಚ್ಚಳ
ಪಿಂಚಣಿದಾರರಿಗೆ ಅನುಕೂಲ:
*80 ವರ್ಷ ಮೇಲ್ಪಟ್ಟ ಎಲ್ಲ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ಸಂದಾಯ.
*ಕನಿಷ್ಠ ಪಿಂಚಣಿ ಮೊತ್ತ ₹8,500ಕ್ಕೆ ಏರಿಕೆ. ಗರಿಷ್ಠ ಪಿಂಚಣಿ ಮೊತ್ತವನ್ನು ₹75,300ಕ್ಕೆ ನಿಗದಿ ಮಾಡಲಾಗಿದೆ. ಈ ಎರಡೂ ಮೊತ್ತಕ್ಕೆ ಕಾಲಕಾಲಕ್ಕೆ ನಿಗದಿಯಾಗುವ ತುಟ್ಟಿಭತ್ಯೆ ಮೊತ್ತ ಸೇರಲಿದೆ.
*ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರರಿಗೆ ಮೂಲ ಪಿಂಚಣಿಯ ಶೇ30ರಷ್ಟು ಫಿಟ್ ಮೆಂಟ್ ಹಾಗೂ ಶೇ 45.25ರಷ್ಟು ತುಟ್ಟಿಭತ್ಯೆ ವಿಲೀನ.
*ಮರಣ ಮತ್ತು ನಿವೃತ್ತಿ ಉಪದಾನದ ಸೌಲಭ್ಯವನ್ನು ಎನ್‌ಪಿಎಸ್ ನೌಕರರಿಗೂ ನೀಡಲು ಪ್ರಸ್ತಾವ.
*ನೌಕರರಿಗೆ ನೀಡುವ ‘ಜ್ಯೋತಿ ಸಂಜೀವಿನಿ ಯೋಜನೆ’ ಸೌಲಭ್ಯವನ್ನು ಪಿಂಚಣಿದಾರರು, ಕುಟುಂಬ ಪಿಂಚಣಿದಾರರಿಗೆ ನೀಡಲು ಪ್ರಸ್ತಾವ. ಇದಕ್ಕೆ ವಾರ್ಷಿಕ ₹500 ಕೋಟಿ ಮೀಸಲಿಡಲು ಶಿಫಾರಸು.
ಮುಂದಿನ ವಾರ ತೀರ್ಮಾನ: ಸಿದ್ದರಾಮಯ್ಯ
ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಆಯೋಗದ ಶಿಫಾರಸುಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
‘ಈಗಷ್ಟೇ ವರದಿ ಸ್ವೀಕರಿಸಿದ್ದೇನೆ. ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಷ್ಟು ಹೆಚ್ಚಳ: ಲೆಕ್ಕಾಚಾರ ಹೇಗೆ
ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದರೆ ಕನಿಷ್ಠ ಮೂಲವೇತನ ₹9,600ಕ್ಕೆ ಶೇ 45.25ರ ತುಟ್ಟಿಭತ್ಯೆ ( ₹4,344), ಮೂಲವೇತನದ ಶೇ 30ರಷ್ಟು ಮನೆಬಾಡಿಗೆ ಭತ್ಯೆ (₹2,880) ಸೇರಿ ತಿಂಗಳಿಗೆ ₹16, 824 (ನಗರ ಪರಿಹಾರ ಭತ್ಯೆ, ವೈದ್ಯ ಪರಿಹಾರ ಭತ್ಯೆ ಬಿಟ್ಟು) ವೇತನ ಸಿಗುತ್ತಿದೆ. ಶೇ 45.25ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನ ಮಾಡಿ, ಶೇ 30ರಷ್ಟು ಫಿಟ್‌ಮೆಂಟ್ ನೀಡಿ ಪರಿಷ್ಕರಣೆ ಮಾಡಲು ಆಯೋಗ ಶಿಫಾರಸು ಮಾಡಿದೆ.
ಈ ಲೆಕ್ಕಾಚಾರದಲ್ಲಿ ಕನಿಷ್ಠ ಮೂಲವೇತನ ₹17,000ಕ್ಕೆ ನಿಗದಿಯಾಗಲಿದೆ. ಆಯೋಗ ಶಿಫಾರಸು ಮಾಡಿರುವಂತೆ ಶೇ 30ರ ಬದಲು ಶೇ 24ರಷ್ಟು ಮನೆಬಾಡಿಗೆ ಭತ್ಯೆ ನೀಡಿದರೆ ಸಿಗುವ ವೇತನ ₹21,080ಕ್ಕೆ ಏರಲಿದೆ. ಆಗ, ಆರಂಭಿಕ ವೇತನ ಶ್ರೇಣಿಯವರಿಗೆ ₹4,256 ಹೆಚ್ಚಳವಾದಂತಾಗಲಿದೆ.
₹11,600 ಕನಿಷ್ಠ ಮೂಲವೇತನ ಇರುವವರು ಶೇ 45.25ರಂತೆ ತುಟ್ಟಿಭತ್ಯೆ (₹5,249), ಶೇ 30ರ ಮನೆ ಬಾಡಿಗೆ ಭತ್ಯೆ (₹3,480) ಸೇರಿ ಒಟ್ಟು ₹20,329 ಪಡೆಯುತ್ತಿದ್ದಾರೆ. ಅವರ ಮೂಲವೇತನ ₹21,400 ಕ್ಕೆ ಏರಿಕೆಯಾಗಲಿದೆ. ಇದರ ಜತೆಗೆ ಶೇ 24ರಂತೆ ಮನೆ ಬಾಡಿಗೆ ಭತ್ಯೆ ಲೆಕ್ಕ ಹಾಕಿದರೆ ವೇತನ ₹26,536 ರಷ್ಟಾಗಲಿದೆ. ಅಂದರೆ ₹6,207ರಷ್ಟು ಹೆಚ್ಚಳವಾಗಲಿದೆ. ಆದರೆ, ಬೇರೆ ಜಿಲ್ಲಾ ಕೇಂದ್ರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಬಾಡಿಗೆ ಭತ್ಯೆ ಕಡಿಮೆ ಇರುವುದರಿಂದ ಇಷ್ಟು ಪ್ರಮಾಣದ ಹೆಚ್ಚಳ ಸಿಗುವುದಿಲ್ಲ.
Comments are closed.