ಕರ್ನಾಟಕ

ಬೆಂಗಳೂರು ವಕೀಲರ ಸಂಘ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಹೀಗೆಯೇ ಮುಂದುವರಿದರೆ ಕಕ್ಷಿದಾರರು ಮತ್ತು ವಕೀಲರು ರೊಚ್ಚಿಗೇಳುವ ಕಾಲ ದೂರವಿಲ್ಲ: ಎಚ್.ಡಿ.ದೇವೇಗೌಡ

Pinterest LinkedIn Tumblr

ಬೆಂಗಳೂರು: ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ಒತ್ತಾಯಿಸಿ ಬೆಂಗಳೂರು ವಕೀಲರ ಸಂಘ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಸಂಸದ ಎಚ್.ಡಿ.ದೇವೇಗೌಡ ‘ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕಕ್ಷಿದಾರರು ಮತ್ತು ವಕೀಲರು ರೊಚ್ಚಿಗೇಳುವ ಕಾಲ ದೂರವಿಲ್ಲ” ಎಂದರು.

‘ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಾಗೂ ಕರ್ನಾಟಕದ 60 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆ ಭರ್ತಿಗಾಗಿ ಹಿರಿಯ ಹಾಗೂ ಕಿರಿಯ ವಕೀಲರು ಸರಣಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದು ಆತಂಕದ ವಿಷಯ” ಎಂದರು.

“ನಾನು ಇಂದು ಅಥವಾ ನಾಳೆ ಪ್ರಧಾನಿ ಮತ್ತು ರಾಷ್ಟಪತಿಗಳನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಸಮಸ್ಯೆಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡುತ್ತೇನೆ. ನಿನ್ನೆ ಸದಾನಂದ ಗೌಡರು ಈ ಸತ್ಯಾಗ್ರಹ ಸ್ಥಳಕ್ಕೆ ಬಂದು ಹೋಗಿದ್ದಾರೆ. ಈ ವಿಷಯದಲ್ಲಿ ಯಾವುದೇ ರಾಜಕೀಯ ಲಾಭಗಳನ್ನು ನಾನು ನಿರೀಕ್ಷಿಸುವುದಿಲ್ಲ. ಸಮಸ್ಯೆಯನ್ನು ನಾನೇ ಬಗೆಹರಿಸಿದೆ ಎಂದು ಯಾರು ಬೇಕಾದರೂ ಬೆನ್ನು ತಟ್ಟಿಕೊಳ್ಳಲಿ. ನಾನಂತೂ ಈ ದೇಶದ ಮಾಜಿ ಪ್ರಧಾನಿಯಾಗಿ, ಸಂಸದನಾಗಿ ಕಕ್ಷಿದಾರರಿಗೆ ಆಗುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ವಿವರವಾಗಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ” ಎಂದು ಹೇಳಿದರು.

“ಪ್ರಧಾನಿಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಾನು ಸಹಿಸುವುದಿಲ್ಲ. ಪ್ರಧಾನಿ ಸ್ಥಾನದ ಗೌರವ ಉಳಿಯಬೇಕು ಮತ್ತು ಉಳಿಸಿಕೊಳ್ಳಬೇಕು. ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ನಿಮಗೆಲ್ಲಾ ಇದು ಅರ್ಥವಾಗುತ್ತದೆ” ಎಂದರು.

“ರಾಷ್ಟ್ರಪತಿ ರಾಮನಾಥ ಕೋವಿಂದ್ ನನಗೆ ಮುರಾರ್ಜಿ ದೇಸಾಯಿ ಕಾಲದ ಆಪ್ತ ಸ್ನೇಹಿತ. ನನ್ನ ಬಗ್ಗೆ ಅವರಿಗೆ ವೈಯುಕ್ತಿಕವಾಗಿ ಒಳ್ಳೆಯ ಅಭಿಪ್ರಾಯವಿದೆ. ನಾನು ಅವರಿಗೆ ಸಮಸ್ಯೆ ಬಗ್ಗೆ ಮನವಿ ಮಾಡುತ್ತೇನೆ. ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ” ಎಂದರು.

Comments are closed.