ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಕರ್ನಾಟಕ ಸರ್ಕಾರ ಮಾಡಿರುವ ಶಿಫಾರಸ್ಸನ್ನು ಅಂಗೀಕರಿಸಿ ಲಿಂಗಾಯತ ಧರ್ಮಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನ ನೀಡುವತೆ ರಾಜ್ಯದ ಪ್ರಭಾವಶಾಲಿ ಮಠಾಧೀಶರಾದ ಮುರುಘ ರಾಜೇಂದ್ರ ಮಠದ ಶಿವಮೂರ್ತಿ ಮುರುಘ ಶರಣರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಮುರುಘ ರಾಜೇಂದ್ರ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಶ್ರೀಗಳನ್ನು ಅಮಿತ್ ಶಾ ಸತ್ಕರಿಸಿದ್ದರು. ಅಮಿತ್ ಶಾ ಭೇಟಿ ಬಳಿಕ ಅವರಿಗೆ ಪತ್ರವೊಂದನ್ನು ಬರೆದಿರುವ ಶಿವಮೂರ್ತಿ ಮುರುಘ ಶರಣರು, ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ರಾಜ್ಯ ಸರ್ಕಾರ ಮಾಡಿರುವ ಶಿಫಾರಸ್ಸನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.
ರಾಜ್ಯ ಸರಕಾರ ತನ್ನ ಕೆಲಸ ಮಾಡಿದೆ. ಈಗ ನೀವು ನಿಮ್ಮ ಕೆಲಸ ಮಾಡಿ ನಮಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿ. ಪ್ರಸ್ತುತ ಲಿಂಗಾಯತ ಮತ್ತು ವೀರಶೈವರ ನಡುವೆ ಉಂಟಾಗಿರುವ ಗೊಂದಲ ಕೇವಲ ಭಾವೋದ್ವೇಗದ ಭಾಗವಾಗಿದ್ದು, ದೀರ್ಘಕಾಲ ಉಳಿಯುವುದಿಲ್ಲ. ಸಮುದಾಯಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನ ದೊರೆಯುವುದರಿಂದ ಸಮುದಾರಯದ ಯುವಕರಿಗೆ ಅನುಕೂಲಗಳಾಗುತ್ತವೆ. ಇದು ಸಮುದಾಯವನ್ನು ಒಡೆಯುವ ಪ್ರಯತ್ನವಲ್ಲ. ಬದಲಾಗಿ ಈಗಾಗಲೇ ಹಲವಾರು ಉಪ ಪಂಗಡಗಳಿಂದಾಗಿ ಒಡೆದಿರುವ ಸಮುದಾಯವನ್ನು ಒಂದುಗೂಡಿಸಲಿದೆ ಎಂದೂ ಶರಣರು ಸ್ಪಷ್ಟಪಡಿಸಿದ್ದಾರೆ.
ಇನ್ನು ಶರಣರ ಈ ಪತ್ರ ಚುನಾವಣೆ ಹೊಸ್ತಿಲಲ್ಲಿರುವ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ರಾಜ್ಯ ಸರ್ಕಾರದ ತೀರ್ಮಾನವನ್ನು ಕೇಂದ್ರ ಒಪ್ಪಿದ್ದೇ ಆದಲ್ಲಿ ಯಡ್ಡಿಯೂರಪ್ಪ ಅಲ್ಪಸಂಖ್ಯಾತ ಸಮುದಾಯದ ನಾಯಕರಾಗಿ ಬಿಡುತ್ತಾರಲ್ಲದೆ ಬಿಜೆಪಿಯ ಬಹುಸಂಖ್ಯಾತ ಪರ ನಿಲುವಿಗೂ ಇದು ತದ್ವಿರುದ್ಧವಾಗಲಿದೆ.
ಇನ್ನು ಕಳೆದ ಮೂರು ದಶಕಗಳಿಂದ ಬಿಜೆಪಿಯ ಕಟ್ಟಾ ಬೆಂಬಲಿಗರಾಗಿರುವ ಲಿಂಗಾಯತರು ಕರ್ನಾಟಕದ ಒಟ್ಟು 6.5 ಕೋಟಿ ಜನಸಂಖ್ಯೆ ಹಾಗು 4.96 ಕೋಟಿ ಮತದಾರರ ಪೈಕಿ ಶೇ. 14ರಷ್ಟಿದ್ದಾರೆ. ಈ ಸಮುದಾಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತಂತೆ ರಾಜ್ಯದ ಕಾಂಗ್ರೆಸ್ ಸರಕಾರ ಕೈಗೊಂಡ ತೀರ್ಮಾನ ಲಿಂಗಾಯತರಿಗೆ ಸಮಾಧಾನ ಮೂಡಿಸಿದೆಯಾದರೂ ಇತರ ಹಿಂದುಳಿದ ವರ್ಗಕ್ಕೆ (ಕುರುಬ) ಸೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮೂಲಕ ಸಮುದಾಯವನ್ನು ಒಡೆಯುವ ಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆಪಾದಿಸುತ್ತಿದೆ.
Comments are closed.