ಹುಬ್ಬಳ್ಳಿ: ಗದಗ ಜಿಲ್ಲೆಯ ರೋಣ ಹಾಗೂ ನರಗುಂದ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಅಥವಾ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ! 1957ರಿಂದ ಈ ತನಕದ ವಿಧಾನಸಭಾ ಚುನಾವಣೆ ಫಲಿತಾಂಶದ ಅಂಕಿ-ಅಂಶಗಳು ಇದನ್ನು ಪುಷ್ಟೀಕರಿಸುತ್ತವೆ.
2004ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿಯ ಫಲಿತಾಂಶ ಹೊರತುಪಡಿಸಿದರೆ 1957ರಿಂದ ಇಲ್ಲಿವರೆಗೆ ಇಲ್ಲಿ ಗೆದ್ದ ಪಕ್ಷವೇ ಅಧಿಕಾರ ಹಿಡಿದಿದೆ. 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆಗ ರೋಣ ಹಾಗೂ ನರಗುಂದದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು.
1957ರಲ್ಲಿ 150 ಸ್ಥಾನಗಳೊಂದಿಗೆ ಭಾರತೀಯ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ರೋಣದಿಂದ ದೊಡ್ಡಮೇಟಿ ಅಂದಾನಪ್ಪ ಹಾಗೂ ನರಗುಂದದಿಂದ ಅಡಿವೆಪ್ಪ ಸಿದ್ದನಗೌಡ ಪಾಟೀಲ ಕಾಂಗ್ರೆಸ್‌ನಿಂದ ಗೆದ್ದಿದ್ದರು. 1962ರಲ್ಲಿ ಕಾಂಗ್ರೆಸ್ 138 ಸ್ಥಾನ ಪಡೆದಿತ್ತು. ಆಗಲೂ ರೋಣದಿಂದ ದೊಡ್ಡಮೇಟಿ ಅಂದಾನಪ್ಪ ಹಾಗೂ ನರಗುಂದದಿಂದ ಅಡಿವೆಪ್ಪ ಪಾಟೀಲ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು.
1967ರಲ್ಲಿ ಕಾಂಗ್ರೆಸ್ 150 ಸ್ಥಾನ ಪಡೆದಿತ್ತು. ರೋಣದಿಂದ ದೊಡ್ಡ ಮೇಟಿ ಅಂದಾನಪ್ಪ, ನರಗುಂದದಿಂದ ಡಿ.ಆರ್.ವೀರಪ್ಪ ಕಾಂಗ್ರೆಸ್‌ನಿಂದ ಗೆದ್ದಿದ್ದರು. 1972ರಲ್ಲಿ ಕಾಂಗ್ರೆಸ್ ವಿಭಜನೆ ಗೊಂಡು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್‌ಸಿ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಸಂಘಟನೆ- ಎನ್‌ಒಸಿ)ಯಾಗಿದ್ದವು. ಐಎನ್‌ಸಿ 165 ಸ್ಥಾನ ಪಡೆದಿತ್ತು.
ರೋಣದಿಂದ ಅಂದಾನಗೌಡ ವೀರನಗೌಡ ಪಾಟೀಲ ಹಾಗೂ ನರಗುಂದದಿಂದ ಜೆ.ವೈ.ವೆಂಕಪ್ಪ ಐಎನ್‌ಸಿಯಿಂದ ಆಯ್ಕೆಯಾಗಿದ್ದರು. 1978ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐ)ಐಎನ್‌ಸಿ-ಐ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂದಾಗಿತ್ತು. ಐಎನ್‌ಸಿ-ಐ 149 ಸ್ಥಾನ ಪಡೆದಿತ್ತು. ರೋಣದಿಂದ ಮತ್ತಿಕಟ್ಟಿ ವೀರಭದ್ರಪ್ಪ ಅಡಿವೆಪ್ಪ ಹಾಗೂ ನರಗುಂದದಿಂದ ಬಿ.ಆರ್.ಪಾಟೀಲ ಐಎನ್‌ಸಿ-ಐನಿಂದ ಗೆಲುವು ಸಾಧಿಸಿದ್ದರು.
ಕಾಂಗ್ರೆಸ್ಸೇತರ ಸರ್ಕಾರಕ್ಕೂ ಜೈ: 1983ರ ವಿಧಾನಸಭೆ ಚುನಾವಣೆ ಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರ ಅಸ್ತಿತ್ವಕ್ಕೆ ನಾಂದಿ ಹಾಡಿತ್ತು. ಜನತಾ ಪಕ್ಷ 95 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿ¤ತ್ತಲ್ಲದೆ, ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆಗ ರೋಣದಿಂದ ದೊಡ್ಡಮೇಟಿ ಜ್ಞಾನದೇವ ಶಿವನಾಗಪ್ಪ ಹಾಗೂ ಬಸವರಡ್ಡಿ ರಂಗಾರಡ್ಡಿ ಯಾವಗಲ್ಲ ಅವರು ಜನತಾಪಕ್ಷದಿಂದ ಗೆದ್ದಿದ್ದರು.
1985ರಲ್ಲಿ ಜನತಾ ಪಕ್ಷ 139 ಸ್ಥಾನಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿದಿತ್ತು. ರೋಣದಿಂದ ದೊಡ್ಡಮೇಟಿ ಜ್ಞಾನದೇವ ಶಿವನಾಗಪ್ಪ ಹಾಗೂ ಬಿ.ಆರ್.ಯಾವಗಲ್ಲ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ 178 ಸ್ಥಾನ ಪಡೆದಿತ್ತು. ರೋಣದಿಂದ ಜಿ.ಎಸ್.ಪಾಟೀಲ, ನರಗುಂದದಿಂದ ಸಿದ್ದನಗೌಡ ಫಕೀರಗೌಡ ಪಾಟೀಲ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು.
1994ರಲ್ಲಿ ಜನತಾ ದಳ 115 ಸ್ಥಾನ ಗಳಿಸಿತ್ತು. ರೋಣದಿಂದ ಶ್ರೀಶೈಲಪ್ಪ ಬಿದರೂರು, ನರಗುಂದದಿಂದ ಬಿ.ಆರ್.ಯಾವಗಲ್ಲ ಜನತಾ ದಳದಿಂದ ಆಯ್ಕೆಯಾಗಿದ್ದರು. 1999ರಲ್ಲಿ ಕಾಂಗ್ರೆಸ್ 132 ಸ್ಥಾನ ಪಡೆದಿತ್ತು. ರೋಣದಿಂದ ಜಿ.ಎಸ್.ಪಾಟೀಲ ಕಾಂಗ್ರೆಸ್‌ನಿಂದ ಗೆದ್ದಿದ್ದರು. ನರಗುಂದದಲ್ಲಿ ಕಾಂಗ್ರೆಸ್ ಸೇರಿದ್ದ ಬಿ.ಆರ್. ಯಾವಗಲ್ಲ ಆಯ್ಕೆಯಾಗಿದ್ದರು.
2004ರಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆಗಿತ್ತು. 79 ಸ್ಥಾನ ಪಡೆದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿತ್ತು. 65 ಸ್ಥಾನ ಪಡೆದ ಕಾಂಗ್ರೆಸ್ 58 ಸ್ಥಾನ ಪಡೆದ ಜೆಡಿಎಸ್ ಸೇರಿ ಸರ್ಕಾರ ರಚಿಸಿದ್ದವು. ನಂತರ 2006ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆಗ ರೋಣದಿಂದ ಕಳಕಪ್ಪ ಬಂಡಿ ಹಾಗೂ ನರಗುಂದದಿಂದ ಸಿ.ಸಿ.ಪಾಟೀಲ ಬಿಜೆಪಿಯಿಂದ ಗೆದ್ದಿದ್ದರು.
2008ರಲ್ಲಿ ಬಿಜೆಪಿ 110 ಸ್ಥಾನ ಪಡೆದು ಪ್ರಥಮ ಬಾರಿಗೆ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿತ್ತು. ರೋಣದಿಂದ ಕಳಕಪ್ಪ ಬಂಡಿ, ನರಗುಂದ ದಿಂದ ಸಿ.ಸಿ.ಪಾಟೀಲ ಜಯ ಸಾಧಿಸಿದ್ದರು. 2013ರಲ್ಲಿ ಕಾಂಗ್ರೆಸ್ 122 ಸ್ಥಾನ ಪಡೆದಿತ್ತು. ರೋಣದಿಂದ ಜಿ.ಎಸ್.ಪಾಟೀಲ ಹಾಗೂ ನರಗುಂದದಿಂದ ಬಿ.ಆರ್.ಯಾವಗಲ್ಲ ಗೆದ್ದಿದ್ದರು.
* ಅಮರೇಗೌಡ ಗೋನವಾರ
-ಉದಯವಾಣಿ
Comments are closed.