ಬೆಂಗಳೂರು: ಸಾಗರ ವಿಧಾನಸಭೆ ಕ್ಷೇತ್ರದ ಟಿಕೆಟ್ ವಿಚಾರವಾಗಿ ಎರಡು ದಿನಗಳಿಂದ ಪಕ್ಷದ ಮುಖಂಡರ ಸಂಪರ್ಕಕ್ಕೂ ಸಿಗದೆ ಮುನಿಸಿಕೊಂಡಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಂಧಾನ ಮಾತುಕತೆ ನಡೆಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಸಾಗರ ಕ್ಷೇತ್ರದ ಸ್ಥಿತಿಗತಿ, ಲೆಕ್ಕಾಚಾರದ ಬಗ್ಗೆ ಹಾಲಪ್ಪ ಆವರಿಗೆ ಮನವರಿಕೆ ಮಾಡಿಕೊಟ್ಟು ನಿಮಗೆ ಟಿಕೆಟ್ ಕೊಟ್ಟರೆ ಗೆಲುವು ಕಷ್ಟ ಎಂಬುದು ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹೀಗಾಗಿ, ಸ್ಪರ್ಧೆ ಮಾಡದೆ ಪಕ್ಷದ ಅಭ್ಯರ್ಥಿ ಯಾರೇ ಆದರೂ ಕೆಲಸ ಮಾಡಿ , ಮುಂದೆ ಭವಿಷ್ಯ ಇದೆ ಎಂದು ಭರವಸೆ ನೀಡಿದರು.
ಕಷ್ಟ ಕಾಲದಲ್ಲಿ ನಿಮ್ಮ ಜತೆ ಪಕ್ಷ ನಿಂತಿತ್ತು. ಇದೀಗ ನೀವು ಬೇರೆ ಪಕ್ಷಕ್ಕೆ ಹೋದರೆ ಮತದಾರರಿಗೆ ಬೇರೆ ಸಂದೇಶ ರವಾನೆಯಾಗುತ್ತದೆ. ರಾಜಕೀಯವಾಗಿಯೂ ನಿಮಗೆ ಹಿನ್ನೆಡೆಯಾಗುತ್ತದೆ ಎಂಬ ಕಿವಿಮಾತು ಸಹ ಯಡಿಯೂರಪ್ಪ ಹೇಳಿದರು ಎನ್ನಲಾಗಿದೆ.
ಆದರೆ, ಯಾವುದರ ಬಗ್ಗೆಯೂ ಸ್ಪಷ್ಟವಾಗಿ ಮಾತನಾಡಿದ ಹಾಲಪ್ಪ, ಮೌನವಾಗಿದ್ದು ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೇಳಿ ವಾಪಸ್ಸಾದರು. ಹೀಗಾಗಿ, ಹಾಲಪ್ಪ ಬಹುತೇಕ ಪಕ್ಷದಲ್ಲೇ ಉಳಿಯಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಮಾತುಕತೆ ಬಳಿಕ ಪ್ರತಿಕ್ರಿಯೆ ನೀಡಿದ ಹಾಲಪ್ಪ, ಮಾತುಕತೆಯಿಂದ ನನಗೆ ಸಂತೋಷವಾಗಿದ್ದು, ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿದ ಬಳಿಕ ನಾನು ಮಾತನಾಡುತ್ತೇನೆ. ಆದರೆ ಟಿಕೆಟ್ ಬಗ್ಗೆ ಏನೂ ಹೇಳುವುದಿಲ್ಲ ಎಂದಷ್ಟೇ ಹೇಳಿದರು.
ಬಿಜೆಪಿ ಪರ ಪ್ರಚಾರ ನಡೆಸುವಿರಾ? ಬೇರೆ ಪಕ್ಷ ಸೇರುವಿರಾ ಎಂಬ ಪ್ರಶ್ನೆಗೆ ಎಂಬ ಪ್ರಶ್ನೆಗೆ ಉತ್ತರಿಸದ ಹಾಲಪ್ಪ, ಕಾಂಗ್ರೆಸ್‌ನ ಹಲವು ನಾಯಕರ ಪರಿಚಯವಿದೆ. ಕಾಗೋಡು ತಿಮ್ಮಪ್ಪ ಅವರು ದೂರವಾಣಿ ಮೂಲಕ ವಿಚಾರಿಸಿದರು. ಟಿಕೆಟ್ ವಿಚಾರಕ್ಕೆ ಬೇಸರವಾಗಿತ್ತು. ದೇವಸ್ಥಾನಕ್ಕೆ ಹೋಗಿ ಬಂದ ಬಳಿಕ ಬೇಸರ ಕಡಿಮೆಯಾಗಿದೆ. ನಾನು ಬೇರೆಯವರಂತೆ ಮುತ್ಸದ್ಧಿ ರೀತಿ ಮಾತನಾಡುವುದಿಲ್ಲ ಎಂದು ತಿಳಿಸಿದರು.
ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಹಾಲಪ್ಪ ಬದ್ಧರಾಗಿರಲಿದ್ದಾರೆ. ಅವರ ಕಷ್ಟ ಸುಖಗಳಲ್ಲಿ ನಾವು ಜೊತೆಯಲ್ಲಿದ್ದೇವೆ. ಅವರು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂಬ ನಂಬಿಕೆ ಇದೆ. ಮಂಗಳವಾರದಿಂದ ಕ್ಷೇತ್ರದಲ್ಲಿ ಹಾಲಪ್ಪ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.
– ಸಂಸದೆ ಶೋಭಾ ಕರಂದ್ಲಾಜೆ
-ಉದಯವಾಣಿ
Comments are closed.