ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ಸ್ವಲ್ಪ ತಮ್ಮ ಅಕ್ಕ, ಪಕ್ಕ ಕಣ್ಣು ಬಿಟ್ಟು ನೋಡಲಿ. ಮಾಜಿ ಸಿಎಂ ಯಡಿಯೂರಪ್ಪರನ್ನು ಮೋದಿಯವರು ಪಕ್ಕ ಕೂರಿಸಿಕೊಂಡು ಪೊಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಪಕ್ಷದ ಪರ ಪ್ರಚಾರ ನಡೆಸುವ ನಿಟ್ಟಿನಲ್ಲಿ ಮಂಗಳವಾರ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ರಾಹುಲ್ ಗಾಂಧಿ ರೋಡ್ ಶೋ ನಡೆಸಿದ ಬಳಿಕ ಗೋಪಿ ಸರ್ಕಲ್ ನಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಒಂದೆಡೆ ಪ್ರಧಾನಿ ಮೋದಿಯವರು ಚೀನಾ ಅಧ್ಯಕ್ಷರನ್ನು ಆಲಿಂಗಿಸಿಕೊಳ್ಳುತ್ತಾರೆ. ಮತ್ತೊಂದೆಡೆ ಚೀನಾ ಗಡಿ ಪ್ರದೇಶದಲ್ಲಿ ಕ್ಯಾತೆ ಮುಂದುವರಿಸಿದೆ. ಆದರೆ ಚೀನಾ ಬಗ್ಗೆ ಮಾತನಾಡಲು 56 ಇಂಚಿನ ಎದೆಯ ಮೋದಿಜೀಗೆ ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು.
ರಾಜ್ಯದ ರೈತರ ಸಾಲಮನ್ನಾಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮುಂದಾಗಲಿಲ್ಲ, ಆದರೆ ಸಿಎಂ ಸಿದ್ದರಾಮಯ್ಯನವರು ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದರು.
2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಸುಳ್ಳು ಹೇಳಿದ್ದಾರೆ. ವಿದ್ಯಾರ್ಥಿಗಳ ಪರೀಕ್ಷೆ ಸಮಯದಲ್ಲಿಯೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತದೆ, ಚುನಾವಣಾ ದಿನಾಂಕ ಕೂಡಾ ಸೋರಿಕೆಯಾಗುತ್ತೆ. ಮೋದಿಯವರೇ ಅರ್ಧ ಚಡ್ಡಿ ಹಾಕ್ಕೊಂಡ್ರೆ ದೇಶ ಉದ್ಧಾರವಾಗಲ್ಲ ಎಂದು ರಾಹುಲ್ ವಾಗ್ದಾಳಿ ನಡೆಸಿದರು.
-ಉದಯವಾಣಿ
Comments are closed.