ಚಿತ್ರದುರ್ಗ: ನಾನಾ ವಂಚನೆಯ ಪ್ರಕರಣಗಳಲ್ಲಿ ಭಾಗಿಯಾಗಿರುವ ನಕಲಿ ಎಂಎಲ್‌ಸಿ ಎಲ್.ಸೋಮಣ್ಣ ಚಿತ್ರದುರ್ಗದಲ್ಲಿ ಬುಧವಾರ ರಾತ್ರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.
ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ವೊಂದರ ಪರಿಶೀಲನೆಗೆಂದು ಕರೆ ತಂದಿದ್ದ ವೇಳೆ ಈ ಘಟನೆ ನಡೆದಿದೆ.
ನಗರದ ಹೊಳಲ್ಕೆರೆ ರಸ್ತೆಯಲ್ಲಿ ಹೆಡ್‌ಪೋಸ್ಟ್ ಆಫೀಸಿನ ಆವರಣಕ್ಕೆ ಹೊಂದಿಕೊಂಡಿರುವ ಧನಲಕ್ಷ್ಮೀ ಜ್ಯುಯಲರ್ಸ್‌ಗೆ ಬೆಂಗಳೂರು ಪೊಲೀಸರು ಸಂಜೆ 7.55 ರ ಸುಮಾರಿಗೆ ಸೋಮಣ್ಣನನ್ನು ಕರೆತಂದಿದ್ದಾರೆ.
ಪರಿಶೀಲನೆ ನಡೆಯುತ್ತಿದ್ದ ವೇಳೆ ಆರೋಪಿ ಎಲ್. ಸೋಮಣ್ಣ ಮೂತ್ರ ವಿಸರ್ಜನೆ ಮಾಡಬೇಕೆಂದು ಹೇಳಿದ್ದಾನೆ. ಆತನ ಕೋರಿಕೆಯನ್ನು ಮನ್ನಿಸಿದ ಪೊಲೀಸರು ಪೇದೆ ಚಂದ್ರು ಎಂಬಾತನ ಜತೆ ಜ್ಯುಯಲರ್ಸ್ ಹಿಂಭಾಗದ ಶೌಚಾಲಯಕ್ಕೆ ಕಳುಹಿಸಿದ್ದಾರೆ.
ಶೌಚಾಲಯದ ಬಳಿ ಬಂದ ನಂತರ ತನ್ನ ಜತೆ ಬಂದಿದ್ದ ಪೇದೆಯನ್ನು ತಳ್ಳಿದ ಸೋಮಣ್ಣ ಅಲ್ಲಿಂದ ಮೇಲೆ ಹತ್ತಿ ಕಾಂಪೌಂಡ್‌ನಿಂದ ಹಾರಿ ಹಿಂಭಾಗದ ಹೆಡ್‌ಪೋಸ್ಟ್ ಆವರಣಕ್ಕೆ ಧುಮುಕಿ ಪರಾರಿಯಾಗಿದ್ದಾನೆ.
ತಕ್ಷಣ ಪೊಲೀಸರು ಮುಖ್ಯರಸ್ತೆ ಮೂಲಕ ಹೆಡ್‌ಪೋಸ್ಟ್ ಆವರಣಕ್ಕೆ ಹೋಗಿ ಪರಿಶೀಲಿಸುವ ಹೊತ್ತಿಗೆ ಸೋಮಣ್ಣ ನಾಪತ್ತೆಯಾಗಿದ್ದಾನೆ. ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೇದೆಯನ್ನು ಬೀಳಿಸಿ ಪರಾರಿಯಾದ ಆರೋಪದ ಮೇಲೆ ಕೋಟೆ ಠಾಣೆಯಲ್ಲಿ ಬೆಂಗಳೂರು ಪೊಲೀಸರು ಕೇಸು ದಾಖಲಿಸಿದ್ದಾರೆ.
ಪೊಲೀಸರ ಬೆಂಗಾವಲಿನಲ್ಲಿದ್ದ ಎಲ್.ಸೋಮಣ್ಣ ಅಷ್ಟು ಸುಲಭವಾಗಿ ಪರಾರಿಯಾಗಿರುವುದು ಅಚ್ಚರಿಗೆ ಕಾರಣವಾಗಿದೆ. ‘ಸೋಮಣ್ಣ ಶೌಚಕ್ಕೆ ಹೋದಾಗ ಶೌಚಾಲಯದ ಬಳಿ ಒಂದು ಸ್ಟೂಲ್ ಇತ್ತು. ಅದೇ ಸ್ಟೂಲ್ ಹತ್ತಿ ಸೋಮಣ್ಣ ಪೈಪ್ ಹಿಡಿದು ಮೇಲೆ ಹತ್ತಿದ್ದಾನೆ. ನಂತರ ಅಲ್ಲಿಂದ ಕೆಳಕ್ಕೆ ಧುಮುಕಿದ್ದಾನೆ’ ಎನ್ನಲಾಗುತ್ತಿದೆ.
ಶೌಚಾಲಯಕ್ಕೆ ಹೊಂದಿಕೊಂಡಿರುವ ಕಾಂಪೌಂಡ್‌ನಿಂದ ಸುಮಾರು ಹದಿನೆಂಟು, ಇಪ್ಪತ್ತು ಅಡಿ ಆಳಕ್ಕೆ ಸರಳವಾಗಿ ಧುಮುಕಲು ಸಾಧ್ಯವಿಲ್ಲ. ಪಕ್ಕದ ಬಿಲ್ಡಿಂಗ್‌ಗೆ ಬಂದು ಅಲ್ಲಿಂದ ಗ್ರೌಂಡ್ ಫ್ಲೋರ್ ತನಕ ಇರುವ ಮೆಶ್‌ನ ಸಹಾಯದಿಂದ ಕೆಳಗಿಳಿದು ಪರಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಆರೋಪಿ ಸೋಮಣ್ಣ ಪರಾರಿಯಾಗಿದ್ದರೂ ಅಷ್ಟು ಶೀಘ್ರವಾಗಿ ನಾಪತ್ತೆಯಾಗಲು ಹೇಗೆ ಸಾಧ್ಯ? ಎನ್ನುವ ಸಂಶಯ ಕೂಡಾ ವ್ಯಕ್ತವಾಗುತ್ತಿದೆ. ಸೋಮಣ್ಣನನ್ನು ಇಲ್ಲಿಗೆ ಕರೆ ತರುವ ವಿಚಾರ ಆತನ ಸಂಪರ್ಕದಲ್ಲಿರುವವರಿಗೆ ತಿಳಿದಿರಬೇಕು. ಆತ ಪೂರ್ವ ನಿಯೋಜಿತವಾಗಿ ಪ್ಲಾನ್ ಮಾಡಿಯೇ ತಪ್ಪಿಸಿಕೊಂಡಿರಬೇಕು ಎಂದು ಹೇಳಲಾಗುತ್ತಿದೆ. ಇಲ್ಲವಾದಲ್ಲಿ ಅಷ್ಟು ಕಡಿಮೆ ಅವಯಲ್ಲಿ ಆತ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಐಪಿ ಹಿನ್ನೆಲೆಯ ವಂಚನೆ ಮತ್ತು ಹಣಕಾಸು ಅವ್ಯವಹಾರದ ಪ್ರಕರಣ ಬಿಟ್ಟರೆ ಸೋಮಣ್ಣ ವಿರುದ್ಧ ಕಳ್ಳತನ, ತಪ್ಪಿಸಿ ಓಡುವ ಕ್ರಿಮಿನಲ್ ವರ್ತನೆಯ ಪ್ರಕರಣಗಳು ಎಲ್ಲೂ ದಾಖಲಾದ ನಿದರ್ಶನ ಇಲ್ಲ. ಜತೆಗೆ ಆತ ಚಿತ್ರದುರ್ಗ ದಲ್ಲೇ ಇರಬಹುದು ಎಂದು ಸಂಶಯಿಸಲಾಗುತ್ತಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧನೆ ಮುಂದುರಿಸಿದ್ದಾರೆ.
Comments are closed.