ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಚಕ್ಕರ್ ಹೊಡೆದ್ರೆ ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಚುನಾವಣಾ ಮುಖ್ಯಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಜೀವ್ ಕುಮಾರ್ ಅವರು, ಚುನಾವಣಾ ಹೊತ್ತಲ್ಲಿ ಸರ್ಕಾರಿ ಅಧಿಕಾರಿಗಳು ರಜೆ ಹಾಕಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಬೇಕಾಗುತ್ತದೆ ಎಂದು ಹೇಳಿದರು.
ಹಾಲಿ ಚುನಾವಣೆಯಲ್ಲಿ ವಿವಿಪಾಟ್ ಗಳನ್ನು ಬಳಕೆ ಮಾಡುತ್ತಿರುವುದರಿಂದ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿಗಳು ಬೇಕು. ಈ ಮೊದಲು ಮತಗಟ್ಟೆಗೆ ನಾಲ್ಕು ಮಂದಿ ಸಿಬ್ಬಂದಿಯಂತೆ ನೇಮಕ ಮಾಡಲಾಗುತ್ತಿತ್ತು. ಆದರೆ ಈ ಬಾರಿ ವಿವಿಪಾಟ್ ಗಳ ಬಳಕೆಯಿಂದಾಗಿ ಹೆಚ್ಚವರಿಯಾಗಿ ಓರ್ವ ಸಿಬ್ಬಂದಿ ಬೇಕಾಗುತ್ತದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ 3.4 ಲ ಸಿಬ್ಬಂದಿಗಳು ಬೇಕು. ಅಂದರೆ 40 ರಿಂದ 50 ಸಾವಿರ ಸಿಬ್ಬಂದಿ ಕೊರತೆ ಎದುರಾಗುವುದರಿಂದ ಸಿಬ್ಬಂದಿಗಳಿಗೆ ಆಯೋಗ ಈ ಎಚ್ಚರಿಕೆ ನೀಡಿದೆ ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.
ನೋಟಾ ಹೆಚ್ಚಾದರೆ ಮರು ಚುನಾವಣೆ ಇಲ್ಲ
ಇದೇ ವೇಳೆ ಈ ಬಾರಿಯ ಚುನಾವಣೆಯಲ್ಲಿ ನೋಟಾ (ಮತದಾನ ತಿರಸ್ಕಾರ) ಪ್ರಮಾಣ ಎಷ್ಟೇ ಆದರೂ ಮರು ಚುನಾವಣೆಗೆ ಅವಕಾಶವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಚಲಾವಣೆ ಆಗಿರುವ ಮತಗಳ ಪೈಕಿ ಅತಿ ಹೆಚ್ಚು ಮತಪಡೆದವರನ್ನು ವಿಜಯಿ ಎಂದು ಘೊಷಿಸಲಾಗುವುದು.ನೋಟಾ ಚಿಹ್ನೆ ಎಲ್ಲ ಇವಿಎಂಗಳಲ್ಲೂ ಇರುತ್ತದೆ. ಇದರ ಮೂಲಕ ಯಾವುದೇ ಅಭ್ಯರ್ಥಿಗೆ ಮತ ಬೇಡ ಎನ್ನುವವರು ನೋಟಾ ಚಲಾಯಿಸಬಹುದು ಎಂದು ಅವರು ಮಾಹಿತಿ ನೀಡಿದರು.
Comments are closed.