ಮೈಸೂರು; ಚಾಮರಾಜನಗರ ಜಿಲ್ಲೆಗೆ ಆಗಮಿಸಿರವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಮಾವೇಶಕ್ಕಾಗಿ ಸಂತೇಮರಹಳ್ಳಿಯ ಹೋಬಳಿ ಕೇಂದ್ರದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದು, ಕನ್ನಡದಲ್ಲಿಯೇ ಭಾಷಣವನ್ನು ಮಾಡಿದ್ದಾರೆ.
ದೇವರಿಗೆ ನಮಸ್ಕಾರ ಮಾಡಿದ ಮೋದಿಯವರು, ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು. ಮೈಸೂರಿನ ಮಠ, ಸಾಹಿತಿ, ಡಾ.ರಾಜ್ ಕುಮಾರ್ ಇತ್ಯಾದಿ ಮಹಾಪುರುಷರನ್ನು ಇದೇ ವೇಳೆ ನೆನೆದರು.
ಕರ್ನಾಟಕದಲ್ಲಿ ಎದ್ದಿರುವುದು ಬಿಜೆಪಿ ಅಲೆಯಲ್ಲ, ಬಿರುಗಾಳಿ. ಬಿಸಿಲಿನಲ್ಲಿ ನಿಂತು ಕಾಯುತ್ತಿರುವ ನಿಮ್ಮ ಶ್ರಮವನ್ನು ನಾವು ವ್ಯರ್ಥ ಮಾಡುವುದಿಲ್ಲ. ಭಾರತದ 1,800 ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ನೀಡವ ಕಾರ್ಯವನ್ನು ನಾವು ಮಾಡಿದ್ದೇವೆ. ಇದಕ್ಕೆ ನಾನು ದೇಶದ ಕಾರ್ಮಿಕರಿದೆ ಧನ್ಯವಾದಗಳನ್ನು ಹೇಳುತ್ತೇನೆ.
ಕಾಂಗ್ರೆಸ್ ಪಕ್ಷದ ಹೊಸ ಅಧ್ಯಕ್ಷರು ಉತ್ಸಾಹದಲ್ಲಿ ಏನೇನೋ ಮಾತನಾಡಿ ಬಿಡುತ್ತಾರೆ. ಹಳ್ಳಿಗಳಿಗೆ ವಿದ್ಯುತ್ ತಲುಪಿಸಲು ಸಹಾಯ ಮಾಡಿದ ಕಾರ್ಮಿಕರಿಗಾಗಿ ರಾಹುಲ್ ಅವರ ಬಾಯಿಂದ ಕೆಲವು ಒಳ್ಳೆಯ ಶಬ್ಧಗಳು ಬಂದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅವರಿಂದ ಒಳ್ಳೆಯ ಮಾತುಗಳು ನಿರೀಕ್ಷೆ ಮಾಡುವುದೂ ಕೂಡ ವ್ಯರ್ಥ.
ಕೆಲವು ಹಳ್ಳಿಗಳಿಗೆ ವಿದ್ಯುತ್ ತಲುಪಿಸಿ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಾವು ಎಲ್ಲಾ ಮನೆಗಳಿಗೆ ವಿದ್ಯುತ್ ತಲುಪಿಸುವ ಪ್ರಯತ್ನ ಮಾಡುತ್ತಲೇ ಇದ್ದೇವೆ. ಆದರೆ, ನಮ್ಮ ಬಗ್ಗೆ ಇಲ್ಲ, ಸಲ್ಲದ ಆರೋಪ ಮಾಡಿದ ಕಾಂಗ್ರೆಸ್ 60 ವರ್ಷ ಆಡಳಿತ ಮಾಡಿದರೂ ಕೋಟ್ಯಾಂತರ ಮನೆಗಳಿಗೇಕೆ ವಿದ್ಯುತ್ ತಲುಪಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಗೆ ದೇಶದ ಇತಿಹಾಸ ಗೊತ್ತಿಲ್ಲ. ಅವರಿಗೆ ವಂದೇ ಮಾತರಂ ಬಗ್ಗೆ ಗೌರವವಿಲ್ಲ. ಅವರಿಗೆ ಅವರದ್ದೇ ಪಕ್ಷದ ನಾಯಕರ ಬಗ್ಗೆಯೂ ಗೊತ್ತಿಲ್ಲ. ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಅವರು ಎಲ್ಲಾ ಹಳ್ಳಿಗಳಿಗೆಸ, ಎಲ್ಲಾ ಮನೆಗಳಿಗೆ ವಿದ್ಯುತ್ ಕೊಡುತ್ತೇವೆಂದು ಹೇಳಿದ್ದರು. ಆದರೆ, ಏಕೆ ಮಾಡಲಿಲ್ಲ? ಏಕೆ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡಿದರು?…
2014ರಲ್ಲಿ ಕರ್ನಾಟಕದ 39 ಹಳ್ಳಿಗಳಲ್ಲಿ ವಿದ್ಯುತ್ ಇರಲಿಲ್ಲ. ನಮ್ಮ ಯೋಜನೆಗಳಿಂದ ವಿದ್ಯುತ್ ತಲುಪಿದೆ. ಆದರೆ, ಕಾಂಗ್ರೆಸ್ ಉತ್ತರ ಕೊಡಬೇಕು. 2014ರ ಮುಂಚೆ 4 ವರ್ಷಗಳಲ್ಲಿ 2 ಹಳ್ಳಿಗಳಿಗೆ ಮಾತ್ರ ವಿದ್ಯುತ್ ತಲುಪಿತ್ತು. ಆದರೆ, ನೀವು ನಮ್ಮನ್ನು ಪ್ರಶ್ನೆ ಮಾಡುತ್ತೀರಿ.
ರಾಹುಲ್ ಗಾಂಧಿಯವರು ಇತ್ತೀಚೆಗೆ ನನಗೆ ಸವಾಲೊಂದನ್ನು ಹಾಕಿದ್ದರು. ನಾನು ಸಂಸತ್ ನಲ್ಲಿ 15 ನಿಮಿಷ ಮಾತನಾಡಿದರೆ, ನರೇಂದ್ರ ಮೋದಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು. ರಾಹುಲ್ ಗಾಂಧಿ 15 ನಿಮಿ| ಮಾತನಾಡುವುದೇ ದೊಡ್ಡ ಸಂಗತಿ, 15 ನಿಮಿಷ ನಾನು ಕುಳಿತುಕೊಳ್ಳುವುದಿಲ್ಲ ಎಂಬುದನ್ನು ಕೇಳಿದರೆ ನಗು ಬರುತ್ತದೆ. ಕಾಂಗ್ರೆಸ್ ನವರು ಹೆಸರು ಮಾಡಿದವರು, ನಾವು ಕಾರ್ಮಿಕರು ನಿಮ್ಮ ಮುಂದೆ ಹೇಗೆ ತಾನೆ ಕುಳಿತುಕೊಳ್ಳಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿಯವರೇ ನಿಮಗೇ ನಾನು ಸವಾಲು ನೀಡುತ್ತಿದ್ದೇನೆ ಯಾವ ಪೇಪರ್ ಗಳೂ ಇಲ್ಲದೆಯೇ ಕರ್ನಾಟಕದಲ್ಲಿ ನೀವು ಮಾಡಿರುವ ಸಾಧನೆಗಳ ಬಗ್ಗೆ ಹಿಂದಿ, ಇಂಗ್ಲೀಷ್ ಅಥವಾ ನಿಮ್ಮ ತಾಯಿ ಭಾಷೆ ಯಾವುದರಲ್ಲಿ ಆದರೂ 15 ನಿಮಿಷಗಳ ಕಾಲ ನಿಂತು ಮಾತನಾಡಿ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 2+1 ರಾಜಕೀಯ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಸೋಲಿನ ಭಯದಿಂದ ಎರಡೂ ಕಡೆ ಚುನಾವಣೆಗೆ ನಿಂತಿದ್ದಾರೆ. ಕಳೆದ ಬಾರಿ ಗೆದ್ದಿದ್ದ ಕ್ಷೇತ್ರದಿಂದ ಅವರ ಮಗನನ್ನು ಬಲಿ ಕೊಡಲು ತಯಾರಿ ನಡೆಸಿದ್ದಾರೆ. ಮುಖ್ಯಮಂತ್ರಿಗಳಿಗೆ 2+1 ಸೂತ್ರ ನಡೆಯುತ್ತಿದ್ದರೆ, ಮಂತ್ರಿಗಳಿಗೆ 1+1 ಸೂತ್ರ ನಡೆಯುತ್ತಿದೆ ಎಂದ ಮೋದಿಯವರು ಕುಟುಂಬ ರಾಜಕೀಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕುಟುಂಬ ರಾಜಕಾರಣ ಪ್ರಜಾಪ್ರಭುತ್ವವನ್ನು, ದೇಶವನ್ನು ಹಾಳು ಮಾಡಿದೆ. ಕರ್ನಾಟಕದಲ್ಲಿ ಕುಟುಂಬ ರಾಜಕೀಯ ನಡೆಯುವುದಿಲ್ಲ. 10 ಪರ್ಸೆಂಟ್ ಕಮಿಷನ್ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಿದೆ. ಮೇ.12 ರಂದು ಕರ್ನಾಟಕದ ಭವಿಷ್ಯವನ್ನು ಆಯ್ಕೆ ಮಾಡಬೇಕಿದೆ. ಬಿಜೆಪಿಗೆ ಮತ ಹಾಕಿ ಕರ್ನಾಟಕದ ಭಾಗ್ಯವನ್ನು ಬದಲಾಯಿಸಬೇಕಿದೆ.
ಮೇ.12 ರಂದು ನಿಮ್ಮ ಆಯ್ಕೆ, ನಿಮ್ಮ ನಿರ್ಧಾರ ಭ್ರಷ್ಟಾಚಾರಿಗಳಿಗೆ ಶಿಕ್ಷೆ ಕೊಡುವ ನನ್ನ ನಿರ್ಧಾರಕ್ಕೆ ಶಕ್ತಿ ನೀಡಲಿದೆ. ನೋಟು ನಿಷೇಧ ನಿರ್ಧಾರ ನಂತರ ಸಿಕ್ಕಿ ಹಾಕಿಕೊಂಡ ಹಣ ಹೆಸರಾಂತ ವ್ಯಕ್ತಿಗಳದ್ದೇ ಆಗಿತ್ತೇ ವಿನಃ ಕಾರ್ಮಿಕರದ್ದಲ್ಲ. ನಾನು ಗುಜರಾತ್ ರಾಜ್ಯದಲ್ಲಿದ್ದಾಗ ಕರ್ನಾಟಕದ ಬಗ್ಗೆ ಕೇಳಿದಾಗ ಹೆಮ್ಮೆಯಾಗುತ್ತಿತ್ತು. ಆದರೆ, ಕಳೆದ 5 ವರ್ಷದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿರುವುದು ನೋಡಿದರೆ ಬೇಸರವಾಗುತ್ತದೆ, ಸಿಟ್ಟು ಬರುತ್ತದೆ. ಇಲ್ಲಿ ಮಹಿಳೆಯರು, ಮಕ್ಕಳು ಸುರಕ್ಷಿತರಲ್ಲ. ಇಲ್ಲಿ ಲೋಕಾಯುಕ್ತ ಕೂಡ ಸುರಕ್ಷಿತವಾಗಿಲ್ಲ ಎಂಬುದು ಸಾಬೀತಾಗಿದೆ.
ಎಲ್ಲೆಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುತ್ತದೆಯೇ ಅಲ್ಲೆಲ್ಲಾ ಅಪರಾಧ ಮತ್ತು ಭ್ರಷ್ಟಾಚಾರ ತಾಂಡವವಾಡುತ್ತದೆ. ಸಾಮಾನ್ಯ ನಾಗರೀಕರ ಮಾತಿಗೆ ಬೆಲೆ ಇರುವುದಿಲ್ಲ. ಅಭಿವೃದ್ಧಿ ಸ್ಥಗಿತಗೊಳ್ಳುತ್ತದೆ. ಚಾಮರಾಜ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿದೆ. ಇಲ್ಲಿನ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತಿಲ್ಲ. ಪ್ರವಾಸೋದ್ಯಮಕ್ಕೆ ಅವಕಾಶವಿದ್ದರೂ ಕೂಡ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. 2002ರೊಳಗೆ ರೈತರ ಆದಾಯವನ್ನು ಹೆಚ್ಚುವ ನಿರ್ಣಯ ಮಾಡಿದ್ದೇವೆ. ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದೇವೆಂದ ಮೋದಿಯವರು, ಕೇಂದ್ರ ಸರ್ಕಾರ ಯೋಜನೆಗಳ ವರದಿ ಒಪ್ಪಿಸಿ, ಕರ್ನಾಟಕಕ್ಕೆ ನೀಡಿರುವ ಯೋಜನೆಗಳ ಬಗ್ಗೆಯೂ ವಿವರಣೆ ನೀಡಿದ್ದಾರೆ.
ರೈತ ಸೇರಿದಂತೆ ಎಲ್ಲಾ ವರ್ಗದ ಜನರ ಜೀವನ ಮಟ್ಟವನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಪ್ರವೃತ್ತವಾಗಿದೆ. ಆದರೆ, ಕಾಂಗ್ರೆಸ್ ಅಭಿವೃದ್ಧಿಯಲ್ಲಿಯೂ ರಾಜಕಾರಣ ಮಾಡುತ್ತಿದೆ. ಚಾಮರಾಜನಗರ ರೈಲ್ವೇ ಯೋಜನೆ ಜಾರಿ ಆಗಿ 5 ವರ್ಷವಾದರೂ ಪ್ರಗತಿಯಾಗಿಲ್ಲ. ಕಾಂಗ್ರೆಸ್ ಪಕ್ಷದ ರಾಜಕಾರಣ ವಿಕಾಸದ ಹಾದಿಗೆ ಮಾರಕವಾಗಿದೆ, ಹೀಗಾಗಿಯೇ ರೈಲ್ವೇ ಯೋಜನೆಗಳಿನ್ನೂ ನೆನೆಗುದಿಯಲ್ಲಿವೆ.
ರೂ.88000 ಕೋಟಿ ಹಣದ ಅಭಿವೃದ್ಧಿ ಕಾರ್ಯ ಪ್ರಸ್ತುತ ನಡೆಯುತ್ತಿದೆ. ಆದರೆ, ಇಲ್ಲಿಯೂ ಕೂಡ ಕಾಂಗ್ರೆಸ್ ಸಮಸ್ಯೆಯನ್ನುಂಟು ಮಾಡಿದೆ. ನೀವು ನನಗೆ ಬೆಂಬಲ ನೀಡಿ, ನಾನು ನಿಮಗೆ ಬೆಂಬಲವನ್ನು ನೀಡುತ್ತೇನೆ. ಎಲ್ಲರೂ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಮಾಡೋಣ. ಮೇ.12 ರಂದು ಬಿಜೆಪಿಗೆ ಮತ ನೀಡಿ. ಸರ್ಕಾರವನ್ನು ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂದು ಘೋಷಣೆ ಕೂಗಿದ ಮೋದಿಯವರು, ಕನ್ನಡದಲ್ಲಿಯೇ ಮಾತನಾಡಿ ಭಾಷಣವನ್ನು ಅಂತಿಮಗೊಳಿಸಿದರು.
Comments are closed.