ಬೆಂಗಳೂರು: ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಒಡೆದು ಹೋಳಾಗಲಿದ್ದು,ಅಡ್ವಾಣಿ ಅವರಂತೆಯೇ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಮತ್ತು ಬೆಂಗಳೂರು ವರದಿಗಾರರ ಕೂಟ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ‘‘ರಾಜ್ಯದಲ್ಲಿ ಬಿಜೆಪಿ ಅಲೆ ಇಲ್ಲ,ಜನರು ಅಭಿವೃದ್ಧಿಯನ್ನು ಗುರುತಿಸಿ ಮತ ಹಾಕಲಿದ್ದಾರೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರಕಲಿದೆ.ಬಿಜೆಪಿ ಅಧಿಕಾರಕ್ಕಾಗಿ ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದೆ.ಅದಕ್ಕೆಲ್ಲಾ ಜನರು ಸೊಪ್ಪು ಹಾಕುವುದಿಲ್ಲ’’ಎಂದರು.
ಆರು ತಿಂಗಳ ಹಿಂದೆಯೇ ಕರ್ನಾಟಕಕ್ಕೆ ಬಂದಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬೆಂಕಿ ಹಂಚಿ ಹೋಗಿದ್ದರು. ಹಾಗಂತ ಅವರ ಪಕ್ಷದ ಸಂಸದ ಪ್ರತಾಪ್ ಸಿಂಹ ಹೇಳಿಕೊಂಡಿದ್ದಾರೆ. ಆದರೂ ಅವರ ಪಕ್ಷ 50-60 ಸ್ಥಾನಗಳಿಸುವುದಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎನ್ನುತ್ತಾರೆ, ಅದು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದಷ್ಟೇ ಪ್ರತಿಪಕ್ಷವೂ ಮುಖ್ಯ ಎಂದು ಹೇಳಿದರು.
ಟಿಪ್ಪು ಸುಲ್ತಾನ್ ಜಯಂತಿಗೆ ಬಿಜೆಪಿ ಏಕೆ ವಿರೋಧಿಸಬೇಕು ಎಂದು ಪ್ರಶ್ನಿಸಿದ ಅವರು, ಅವರದ್ದು ದ್ವಂದ್ವ ನಿಲುವು.ಮತಗಳಿಸಲು ಏನು ಬೇಕಾದರೂ ಮಾಡುತ್ತಾರೆ. ಕರಾವಳಿ ಭಾಗದಲ್ಲಿ ಸತ್ತವರನ್ನೆಲ್ಲಾ ನಮ್ಮ ಪಕ್ಷದ ಕಾರ್ಯತರ್ಕರೆಂದು ಹೇಳಿಕೊಂಡರು. ಟಿಪ್ಪು ಜಯಂತಿ, ಹನುಮಜಯಂತಿ ಎಲ್ಲದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ನಾವು ದೇವಾಲಯಗಳನ್ನು ಕಟ್ಟುತ್ತೇವೆ, ಅವರು ದೇವರನ್ನು ಹೈಜಾಕ್ ಮಾಡಿಕೊಳ್ಳುತ್ತಾರೆ. ಆಯೋಧ್ಯೆಯಲ್ಲಿ ರಾಮಮಂದಿರ ಏಕೆ ಕಟ್ಟುತ್ತಿಲ್ಲ.ಅಲ್ಲಿ ದೇಗುಲ ನಿರ್ಮಾಣವಾಗುವುದು ಅವರಿಗೆ ಬೇಕಿಲ್ಲ, ರಾಜಕಾರಣಕ್ಕಾಗಿ ಆ ವಿಷಯ ಜೀವಂತವಾಗಿರಬೇಕು ಎಂದು ಟೀಕಿಸಿದರು.
ಗೋ ಹತ್ಯೆ ನಿಷೇಧ ವಿಷಯ ಪ್ರಸ್ತಾಪಿಸಿದ ಅವರು, ಕೇಂದ್ರ ಸರಕಾರಕ್ಕೆ ಗೋವುಗಳ ಬಗ್ಗೆ ಕಾಳಜಿ ಇದ್ದರೆ ಮೊದಲು ಗೋಮಾಂಸ ರಫ್ತು ನಿಷೇಧಿಸಲಿ. ಗೋಮಾಂಸ ರಫ್ತಿನಲ್ಲಿ ಭಾರತ 3ನೇ ಸ್ಥಾನದಲ್ಲಿದೆ, ಇನ್ನು ಕೆಲವೇ ವರ್ಷಗಳಲ್ಲಿ ಮೊದಲ ಸ್ಥಾನಕ್ಕೇರಲಿದೆ.ವಾರ್ಷಿಕ 26ಸಾವಿರ ಕೋಟಿ ವಹಿವಾಟು ಗೋಮಾಂಸ ರಫ್ತಿನಿಂದ ಆಗುತ್ತಿದ್ದು, ಆ ಉದ್ಯಮದಲ್ಲಿ ತೊಡಗಿರುವವರೆಲ್ಲಾ ಬಿಜೆಪಿ ನಾಯಕರೇ ಎಂದು ಆರೋಪಿಸಿದರು.
ಬಿಎಸ್‌ವೈ ಬಗ್ಗೆ ಪಿಎಂ ನರೇಂದ್ರ ಮೋದಿಗೆ ವಿಶ್ವಾಸವಿಲ್ಲ, ಹಾಗಾಗಿ ಅವರನ್ನು ದೂರವಿಟ್ಟು ರಾರಯಲಿಗಳನ್ನು ನಡೆಸಲಿದ್ದಾರಂತೆ. ಹೆಚ್ಚಿನ ಕ್ರಿಮಿನಲ್‌ಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಅವರ ಕುತಂತ್ರ ಮತ್ತು ಅನೈತಿಕ ರಾಜಕಾರಣ ನಡೆಯುವುದಿಲ್ಲ. ಉತ್ತರ ಪ್ರದೇಶದಲ್ಲಿ ಅಪರಾಧಗಳ ಪ್ರಮಾಣ ಶೇ.11ರಷ್ಟಿದೆ, ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸುವ ಕೆಲಸ ಮಾಡುವ ಬದಲು ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಬಂದು ಕಾಂಗ್ರೆಸ್ ಟೀಕಿಸುತ್ತಿದ್ದಾರೆ.ಅವರ ರಾಜ್ಯಕ್ಕೆ ಹೋಲಿಸಿದರೆ ಕರ್ನಾಟಕ ಶಾಂತಿಯಿಂದಿದೆ, ಇಲ್ಲಿ ಅಪರಾಧ ಪ್ರಮಾಣ ಶೇ.5ರಷ್ಟು ಮಾತ್ರವಿದೆ ಎಂದು ಹೇಳಿದರು.
ಸಿಬಿಐ, ಐಟಿ ಸೇರಿದಂತೆ ಎಲ್ಲ ಸಂಸ್ಥೆಗಳನ್ನು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ರಾಮಲಿಂಗಾರೆಡ್ಡಿ, ‘‘ಚುನಾವಣೆ ಹೊಸ್ತಿಲಲ್ಲಿ ಉದ್ದೇಶಪೂರ್ವಕವಾಗಿ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಟ್ಟುಕೊಂಡು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ಬಿಜೆಪಿ ಪ್ರಯತ್ನ ಫಲ ನೀಡದು’’ ಎಂದು ತಿಳಿಸಿದರು.
ಟೆರರಿಸ್ಟ್ ಫ್ಯಾಕ್ಟರಿಗಳನ್ನು ಮುಚ್ಚಬೇಕು
ಐದು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ 30 ಕೋಮುಗಲಭೆ ನಡೆದಿವೆ, ಅವುಗಳಲ್ಲಿ 28 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಉಡುಪಿಯಲ್ಲಿ ನಡೆದಿದ್ದು, ಉಳಿದ 28 ಜಿಲ್ಲೆಗಳಲ್ಲಿ ಯಾವುದೇ ಗಲಭೆ ಆಗಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕರಾವಳಿಯಲ್ಲಿ ಸಂಘ ಪರಿವಾರ ಮತ್ತು ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳು ಸೇರಿಗೆ ಸವ್ವಾ ಸೇರು ಎಂಬಂತೆ ಕೊಲೆಗಳನ್ನು ಮಾಡುತ್ತಿವೆ.ಅವುಗಳಿಗೆ ರಾಜಕೀಯ ಪಕ್ಷಗಳು ಬೆಂಬಲ ನೀಡುತ್ತಿವೆ.ಅಂತಹ ಟೆರರಿಸ್ಟ್ ಫ್ಯಾಕ್ಟರಿಗಳನ್ನು ಮುಚ್ಚಬೇಕು,ಆ ಕೆಲಸಕ್ಕೆ ಪೊಲೀಸ್ ಇಲಾಖೆ ಚಾಲನೆ ನೀಡಿತ್ತು,ಅಷ್ಟರಲ್ಲಿ ಚುನಾವಣೆ ಬಂದಿತು. ಮತ್ತೆ ನಾವೇ ಅಧಿಕಾರಕ್ಕೆ ಬಂದರೆ ಮೊದಲು ಅಂತಹ ಪ್ರಚೋದಕ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ ಎಂದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ,ರಾಹುಲ್ ಗಾಂಧಿ ಮಸೀದಿಗೆ ಹೋಗುವಾಗ ಟೊಪ್ಪಿ ಧರಿಸುವಂತೆ, ಚರ್ಚ್‌ಗೆ ಹೋಗುವಾಗ ಶಿಲುಬೆ ಧರಿಸುವಂತೆ ಶ್ರವಣಬೆಳಗೊಳಕ್ಕೆ ಹೋಗಲಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ‘ಬಿಜೆಪಿಯವರನ್ನೆಲ್ಲಾ ಶ್ರವಣಬೆಳಗೊಳಕ್ಕೆ ಕಳಿಸ್ತಿವಿ’ ಎಂದರು.
Comments are closed.