ಕರ್ನಾಟಕ

ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ: ನರೇಂದ್ರ ಮೋದಿ ವಿಶ್ವಾಸ

Pinterest LinkedIn Tumblr

ಕಲಬುರ್ಗಿ: ರೈತ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಎನ್‌ವಿ ಮೈದಾನದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ಬಸವಣ್ಣ, ಸಂತ ವಿಜ್ಞಾನೇಶ್ವರ, ರಾಜಾ ವೆಂಕಟಪ್ಪ ನಾಯಕ ಅವರನ್ನು ನೆನೆದರು. ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಎಂದಾಗ ಜನರಿಂದ ಹರ್ಷೋದ್ಗಾರ ಮೊಳಗಿತು.

ಇಷ್ಟು ಸೆಖೆ ಬೇಕಾದರೆ ಸಹಿಸ್ತೀನಿ ಆದರೆ ಕಾಂಗ್ರೆಸ್ ಆಡಳಿತ ಸಹಿಸುವುದಿಲ್ಲ ಎನ್ನುವುದು ನಿಮ್ಮ ಇಷ್ಟ. ಚುನಾವಣೆಗಳು ಬರುತ್ತವೆ ಹೋಗುತ್ತವೆ. ಕಾಂಗ್ರೆಸ್‌ಗೆ ಈಗ ಸೋಲಿನ ಪರ್ವ ಶುರುವಾಗಿದೆ. ನಮ್ಮ ಕ್ಷೇತ್ರದಲ್ಲಿ ಯಾರು ಗೆಲ್ತಾರೆ, ಸೋಲ್ತಾರೆ ಅನ್ನೋ ವಿಷಯದ ಚುನಾವಣೆ ಇದಲ್ಲ. ಕರ್ನಾಟಕದ ಯುವಜನರ, ರೈತರ ಭವಿಷ್ಯ ಸುಧಾರಿಸುವ, ಮಹಿಳೆಯರ ಸುರಕ್ಷೆ ಕಾಪಾಡುವ ಚುನಾವಣೆ ಇದು ಎಂದರು.

ಮತದಾನ ಮಾಡುವಾಗ ಕರ್ನಾಟಕದ ಉಜ್ವಲ ಭವಿಷ್ಯವನ್ನೇ ದೃಷ್ಟಿಯಲ್ಲಿರಿಸಿಕೊಂಡು ಮತ ಚಲಾಯಿಸಿ, ದೆಹಲಿಯ ಮೋದಿ ಸರ್ಕಾರವು ಕರ್ನಾಟಕದ ಬಿಜೆಪಿ ಸರ್ಕಾರದ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು.

ಸರ್ದಾರ್ ವಲ್ಲಭಬಾಯ್ ಪಟೇಲರು ನಿಮಗೆ ನಿಜಾಮ್ ಆಡಳಿತದಿಂದ ವಿಮೋಚನೆ ಕೊಟ್ಟರು. ಪಟೇಲರ ಪ್ರತಿಮೆ ನಿರ್ಮಾಣ ಪ್ರಯತ್ನ ಈಗ ಸಾಗಿದೆ. ಕಾಂಗ್ರೆಸ್‌ಗೆ ಇದು ಸಹನೀಯವಾಗ್ತಿಲ್ಲ. ಯಾವಾಗ ವಲ್ಲಭಬಾಯ್ ಪಟೇಲರು ಹೆಸರು ಹೇಳಿದರೂ ಕಾಂಗ್ರೆಸ್‌ನ ಒಂದು ಕುಟುಂಬಕ್ಕೆ ಸಿಟ್ಟು ಬರುತ್ತದೆ. ಅವರು ಪಟೇಲರಿಗೆ ಸದಾ ಅವಮಾನ ಮಾಡ್ತಾರೆ. ಇತಿಹಾಸ ಬದಲಿಸಲು ಯತ್ನಿಸುತ್ತಾರೆ ಎಂದು ಕುಟುಕಿದರು.

ನಮ್ಮ ವೀರ ಸೈನಿಕರು ಧೈರ್ಯದಿಂದ ಮುನ್ನುಗ್ಗಿ ಭಯೋತ್ಪಾದಕರ ಮೇಲೆ ಸರ್ಜಿಕಲ್ ಸ್ಟೈಕ್ ಮಾಡಿದರು. ಆದರೆ ಕಾಂಗ್ರೆಸ್ ಅವರನ್ನು ಅವಮಾನಿಸಿತು. ನಮ್ಮ ಸೈನಿಕರು ಬಂದೂಕು ತಗೊಂಡು ಹೋಗಬೇಕೋ? ಕ್ಯಾಮೆರಾ ತಗೊಂಡು ಹೋಗಬೇಕೋ? ಎಂದು ಪ್ರಶ್ನೆ ಮಾಡಿದರು.

Comments are closed.