ಕರ್ನಾಟಕ

ಕ್ರಿಮಿನಲ್‌ ಹಿನ್ನೆಲೆ ಅಭ್ಯರ್ಥಿಗಳು : ಬಿಜೆಪಿ 83, ಕಾಂಗ್ರೆಸ್‌ 59

Pinterest LinkedIn Tumblr


ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕ್ರಿಮಿನಲ್‌ ಹಿನ್ನೆಲೆ ಇರುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿರುವ ಪಕ್ಷಗಳ ಪಟ್ಟಿಯಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದೆ; ಎರಡನೇ ಸ್ಥಾನದಲ್ಲಿ ಕಾಂಗ್ರೆಸ್‌ ಇದೆ.

ಅಸೋಸಿಯೇಶನ್‌ ಫಾರ್‌ ಡೆಮೋಕ್ರಾಟಿಕ್‌ ರಿಫಾರ್‌ಮ್ಸ್‌ (ಎಡಿಆರ್‌) ಮಾಡಿರುವ ವರದಿಯಲ್ಲಿ ಈ ವಿಷಯ ಬಹಿರಂಗವಾಗಿದೆ.

ಎಡಿಆರ್‌ ಒಟ್ಟು 2,560 ಅಭ್ಯರ್ಥಿಗಳು ಸಲ್ಲಿಸಿರುವ ಅಫಿದಾವಿತ್‌ಗಳನ್ನು ವಿಶ್ಲೇಷಿಸಿದೆ. ಈ ಪೈಕಿ 391 ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್‌ ಕೇಸುಗಳು ಇವೆ ಎಂದು ಘೋಷಿಸಿಕೊಂಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣಾ ಕಣದಲ್ಲಿರುವ ಬಿಜೆಪಿಯ 223 ಅಭ್ಯರ್ಥಿಗಳ ಪೈಕಿ 87 ಮಂದಿ (ಶೇ.37) ವಿರುದ್ಧ ಕ್ರಿಮಿನಲ್‌ ಕೇಸುಗಳಿವೆ. ಅಲ್ಲದೆ ಇನ್ನೂ 58 ಬಿಜೆಪಿ ಅಭ್ಯರ್ಥಿಗಳ(ಶೇ.26) ವಿರುದ್ಧ ಗಂಭೀರ ಕ್ರಿಮಿನಲ್‌ ಕೇಸುಗಳಿವೆ.

ಆಳುವ ಕಾಂಗ್ರೆಸ್‌ ಪಕ್ಷದ 220 ಅಭ್ಯರ್ಥಿಗಳ ಪೈಕಿ 59 ಮಂದಿಯ ವಿರುದ್ಧ (ಶೇ.27) ಕ್ರಿಮಿನಲ್‌ ಕೇಸ್‌ಗಳಿವೆ; ಇನ್ನೂ 22 ಕಾಂಗ್ರೆಸ್‌ ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್‌ ಕೇಸುಗಳಿವೆ.

ಜೆಡಿಎಸ್‌ನ 199 ಅಭ್ಯರ್ಥಿಗಳ ಪೈಕಿ 41 ಮಂದಿ ವಿರುದ್ಧ (ಶೇ.21) ಕ್ರಿಮಿನಲ್‌ ಕೇಸುಗಳು ಮತ್ತು 29 ಜೆಡಿಎಸ್‌ ಅಭ್ಯರ್ಥಿಗಳ (ಶೇ.15) ವಿರುದ್ಧ ಗಂಭೀರ ಕ್ರಿಮಿನಲ್‌ ಕೇಸುಗಳು ಇವೆ.

ಒಟ್ಟು 1,090 ಮಂದಿ ಪಕ್ಷೇತರರ ಪೈಕಿ 108 ಅಭ್ಯರ್ಥಿಗಳ ವಿರುದ್ಧ ( ಶೇ.10) ಕ್ರಿಮಿನಲ್‌ ಕೇಸುಗಳಿವೆ; ಇತರ 70 ಮಂದಿ ವಿರುದ್ಧ (ಶೇ.6) ಗಂಭೀರ ಕ್ರಿಮಿನಲ್‌ ಕೇಸುಗಳಿವೆ.

ಬಿಜೆಪಿಯ 223 ಅಭ್ಯರ್ಥಿಗಳ ಪೈಕಿ 208 ಅಭ್ಯರ್ಥಿಗಳ (ಶೇ.93) ಘೋಷಿತ ಆಸ್ತಿಪಾಸ್ತಿ ಒಂದು ಕೋಟಿ ರೂ. ಗೂ ಅಧಿಕವಿದೆ. ಅಂತೆಯೇ ಎಲ್ಲ ಪಕ್ಷಗಳ ಪೈಕಿ ಬಿಜೆಪಿಯದ್ದು ಗರಿಷ್ಠವಾಗಿದೆ.

ಕಾಂಗ್ರೆಸ್‌ನ 220 ಅಭ್ಯರ್ಥಿಗಳ ಪೈಕಿ 207 ಮಂದಿ (ಶೇ.94) ಮತ್ತು ಜೆಡಿಎಸ್‌ನ 199 ಅಭ್ಯರ್ಥಿಗಳ ಪೈಕಿ 154 ಅಭ್ಯರ್ಥಿಗಳ (ಶೇ.77) ಮತ್ತು 1,090 ಪಕ್ಷೇತರರ ಪೈಕಿ 199 ಅಭ್ಯರ್ಥಿಗಳ (ಶೇ.18) ಘೋಷಿತ ಆಸ್ತಿಪಾಸ್ತಿ 1 ಕೋಟಿ ರೂ.ಗಳಿಗೂ ಅಧಿಕವಿದೆ.

-Udayavani

Comments are closed.