ಕರ್ನಾಟಕ

ಸಂಜೆತನಕ ಶೇ.61 ರಷ್ಟು ಮತದಾನ; ಹಿಂದುಳಿದ ಬೆಂಗಳೂರು !

Pinterest LinkedIn Tumblr

ಮತಚಲಾಯಿಸಿದ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ, ಸಾಲು ಮರದ ತಿಮ್ಮಕ್ಕ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು, ಸಂಜೆ 4 ಗಂಟೆಯವರೆಗೆ ಶೇ.61.53ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಶೇ.40, ಹಾವೇರಿಯಲ್ಲಿ ಶೇ.69, ದಕ್ಷಿಣ ಕನ್ನಡದಲ್ಲಿ ಶೇ.68, ಹುಬ್ಬಳ್ಳಿ-ಧಾರವಾಡದಲ್ಲಿ ಶೇ.50, ಬೆಳವಾಗಿಯಲ್ಲಿ ಶೇ.52ರಷ್ಟು ಹಾಗೂ ಮೈಸೂರಿನಲ್ಲಿ ಶೇ.45ರಷ್ಟು ಮತದಾನವಾಗಿದೆ.

ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತಾದರೂ, ಹಲವೆಡೆ ಮತಯಂತ್ರಗಳು ಕೈಕೊಟ್ಟ ಪರಿಣಾಮ ಮತದಾನ ತಡವಾಯಿತು. ಇನ್ನು ಹಲವು ಮತಗಟ್ಟೆಗಳಲ್ಲಿ ವಿದ್ಯುತ್ ಕೈ ಕೊಟ್ಟ ಕಾರಣ ಚುನಾವಣಾ ಸಿಬ್ಬಂದಿ ಗೊಂದಲಕ್ಕೀಡಾದರು.

ಇನ್ನು ಬೆಂಗಳೂರಿನ ಎರಡು ಕಡೆ ನಕಲಿ ಮತದಾನ ಆರೋಪ ಹಿನ್ನೆಲೆಯಲ್ಲಿ ಬಸವನಗುಡಿ ಕ್ಷೇತ್ರದ ಶ್ರೀನಗರದಲ್ಲಿ ನಾಗಮಂಗಲ ಕ್ಷೇತ್ರಕ್ಕೆ ತೆರಳುತ್ತಿದ್ದ ಬಸ್​ ಅಡ್ಡಗಟ್ಟಿ ಸ್ಥಳೀಯರು ಗಲಾಟೆ ಮಾಡಿದ್ದಾರೆ.

15ನೇ ವಿಧಾನಸಭೆಗೆ ಒಂದೇ ಹಂತದ ಮತದಾನ ನಡೆಯುತ್ತಿದ್ದು, ರಾಜ್ಯಾದ್ಯಂತ ಒಟ್ಟು 58,546 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ರಾಜ್ಯದ 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಮಾತ್ರ ಇಂದು ಚುನಾವಣೆ ನಡೆಯುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸುಮಾರು 10 ಸಾವಿರ ವೋಟರ್ ಐಡಿ ಪತ್ತೆಯಾದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಇನ್ನು ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿಧನರಾದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಚುನಾವಣೆಯನ್ನು ಸಹ ಮುಂದೂಡಲಾಗಿದೆ.

ಹೊಳೆನರಸಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇಲೆ ದಾಳಿ
ಹೊಳೆನರಸಿಪುರ ಕ್ಷೇತ್ರದ ಪರಸನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಪಿ ಮಂಜೇಗೌಡ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಗುಂಪೊಂದು ದಾಳಿ ಮಾಡಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜೆಡಿಎಸ್ ಅಭ್ಯರ್ಥಿ ಎಚ್ ಡಿ ರೇವಣ್ಣ ಕಡೆಯವರು ಎನ್ನಲಾದ ಕೆಲ ಯುವಕರ ಗುಂಪು ಮಂಜೇಗೌಡ ಅವರ ಕಾರನ್ನು ಧ್ವಂಸಗೊಳಿಸಿದ್ದಲ್ಲದೆ, ಅವರನ್ನು ನಿಂದಿಸಿ, ಹಲ್ಲೆ ಯತ್ನಿಸಿದ್ದಾರೆ. ಈ ಸಂಬಂಧ ಮಂಜೇಗೌಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಹಾಸನದ ಮತಗಟ್ಟೆಯ ಮತಯಂತ್ರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಸ್ವಲ್ಪ ಕಾಲ ಮತದಾನಕ್ಕೆ ಅಡಚಣೆ ಉಂಟಾಯಿತು.

ಕೆಲ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ.

Comments are closed.