ಕರ್ನಾಟಕ

ಹಲವು ಕಡೆ ಮತದಾನಕ್ಕೆ ಮಳೆರಾಯನ ಅಡ್ಡಿ

Pinterest LinkedIn Tumblr


ಹುಬ್ಬಳ್ಳಿ: ಮುಂಜಾನೆಯಿಂದ ಮತದಾನಕ್ಕೆ ಬಿಡುವು ಕೊಟ್ಟಿದ್ದ ವರುಣ ಮಧ್ಯಾಹ್ನದ ವೇಳೆಗೆ ಸುರಿದು ಮತದಾನಕ್ಕೆ ಅಡ್ಡಿಪಡಿಸಿದ್ದಾನೆ.

ಮಧ್ಯಾಹ್ನ 3.30ರ ವೇಳೆಗೆ ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ವಿವಿಧೆಡೆ ಭಾರಿ ಮಳೆ ಸುರಿದಿದ್ದು, ಗುಡುಗು, ಮಿಂಚು, ಆಣೆಕಲ್ಲು ಸಹಿತ ಮಳೆಯಿಂದಾಗಿ ಮತದಾರರು ಮನೆಯಿಂದ ಹೊರಬರದ ಪರಿಸ್ಥಿತಿ ನಿರ್ಮಾಣವಾಗಿದೆ.

ಹುಬ್ಬಳ್ಳಿ ಸುತ್ತ ಮುತ್ತಲು ದಟ್ಟವಾದ ಮೋಡ ಕವಿದ ವಾತಾವರಣವಿದ್ದು, ಕುಂದಗೋಳ ತಾಲೂಕಿನ ಅಲ್ಲಾಪೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ ಆರಂಭವಾಗಿದೆ.

ಮಧ್ಯಾಹ್ನ 4 ಗಂಟೆ ಸುಮಾರಿಗೆ ಶೇ. 53ರಷ್ಟು ಮತದಾನವಾಗಿದ್ದು, ಮುಂದುವರಿದಿರುವ ಮಳೆಯಿಂದಾಗಿ ಮತದಾನ ಪ್ರಮಾಣದಲ್ಲಿ ಕುಸಿತವಾಗುವ ಸಾಧ್ಯತೆ ಇದೆ.

ರಾಯಚೂರಿನಲ್ಲೂ ಮತದಾನಕ್ಕೆ ಅಡ್ಡಿ

ರಾಯಚೂರಿನ ಮಸ್ಕಿಯಲ್ಲಿಯೂ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಮತ ಚಲಾಯಿಸಲು ಜನ ಹಿಂದೇಟು ಹಾಕುತ್ತಿದ್ದಾರೆ. ಮತಗಟ್ಟೆಗೆ ಈಗಾಗಲೇ ಬಂದಿದ್ದ ಮತದಾರರು ಮಳೆಯಿಂದ ತಪ್ಪಿಸಿಕೊಳ್ಳಲು‌ ಪರದಾಟ ನಡೆಸುತ್ತಿದ್ದಾರೆ. ಬಿರುಗಾಳಿ ಸಹಿತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನರು ಪರದಾಡುವಂತಾಗಿದೆ.

ಕಲಬುರಗಿಯಲ್ಲಿ ಬಿರುಗಾಳಿ ಸಹಿತ ಮಳೆ

ನಗರದಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಮತಚೀಟಿ ನೀಡಲು ಮತಗಟ್ಟೆ ಹೊರಗೆ ಕುಳಿತ ಚುನಾವಣಾ ಸಿಬ್ಬಂದಿ ಪರದಾಟ ನಡೆಸಿ ತಕ್ಷಣ ಮತದಾರ ಪಟ್ಟಿ ಸಮೇತ ಮತಗಟ್ಟೆಯೊಳಗೆ ತೆರಳಿದ್ದಾರೆ. ಮಳೆಯಿಂದಾಗಿ ಜನರು ಮತದಾನಕ್ಕೆ ತೆರಳಲು ಪರದಾಡುವಂತಾಗಿದೆ.

ಮಧ್ಯಾಹ್ನ 3 ಗಂಟೆಯವರೆಗಿನ ಹು-ಧಾ ಮತದಾನದ ವಿವರ

ನವಲಗುಂದ ಮತಕ್ಷೇತ್ರ: 56.06%

ಕುಂದಗೋಳ ಮತಕ್ಷೇತ್ರ: 43.63%

ಧಾರವಾಡ ಮತಕ್ಷೇತ್ರ: 54.77%

ಹು-ಧಾ ಪೂರ್ವ ಮತಕ್ಷೇತ್ರ: 53.83%

ಹು-ಧಾ ಕೇಂದ್ರ ಮತಕ್ಷೇತ್ರ: 45.59%

ಹು-ಧಾ ಪಶ್ಚಿಮ ಮತಕ್ಷೇತ್ರ: 42.94%

ಕಲಘಟಗಿ ಮತಕ್ಷೇತ್ರ: 57%

Comments are closed.