ಬೆಂಗಳೂರು: ರೆಸಾರ್ಟ್ ನಲ್ಲಿರುವ ಕಾಂಗ್ರೆಸ್ ಶಾಸಕರಿಗೆ ವಿಶೇಷ ಭದ್ರತೆ ಅವಶ್ಯಕತೆ ಇಲ್ಲ.. ನಮ್ಮ ಭದ್ರತೆಯನ್ನು ನಾವು ನೋಡಿಕೊಳ್ಳಬಲ್ಲೆವು ಎಂದು ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದ ಅವರಣದಲ್ಲಿ ಇಂದು ನಡೆದ ಕಾಂಗ್ರೆಸ್- ಜೆಡಿಎಸ್ ಶಾಸಕರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರೆಲ್ಲರೂ ಒಟ್ಟಿಗೆ ಇದ್ದೇವೆ. ಎಲ್ಲರೂ ನಮ್ಮ ಜತೆಯಲ್ಲಿದ್ದಾರೆ. ಆನಂದ್ ಸಿಂಗ್ ಸಹ ನಮ್ಮ ಸಂಪರ್ಕದಲ್ಲಿದ್ದಾರೆ. ಹಾಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ಶತಃ ಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಇದು ಅಲ್ಪಾವಧಿ ಸರ್ಕಾರ, ವಿಶ್ವಾಸ ಮತ ಯಾಚನೆ ಬಳಿಕ ನಮ್ಮ ಸರ್ಕಾರ ಶತಃಸಿದ್ಧ ಎಂದ ಮಾಜಿ ಸಚಿವ ಡಿಕೆಶಿ, ರೆಸಾರ್ಟ್ ನಲ್ಲಿರುವ ಕಾಂಗ್ರೆಸ್ ಶಾಸಕರಿಗೆ ವಿಶೇಷ ಭದ್ರತೆ ಅವಶ್ಯಕತೆ ಇಲ್ಲ.. ನಮ್ಮ ಭದ್ರತೆಯನ್ನು ನಾವು ನೋಡಿಕೊಳ್ಳಬಲ್ಲೆವು ಎಂದು ಹೇಳಿದ್ದಾರೆ. ಅಂತೆಯೇ ಬಿಜೆಪಿಗೆ ಮ್ಯಾಜಿಕ್ ನಂಬರ್ ಸಿಗುವುದಿಲ್ಲ. ಹಾಗಾಗಿ ಬಿಎಸ್ವೈಗೆ ಆತಂಕ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ರಾಜ್ಯದ ಜನತೆಯ ಅನುಕಂಪ ಗಿಟ್ಟಿಸಲು ಸಾಲ ಮನ್ನಾ ಅಸ್ತ್ರ ಪ್ರಯೋಗಿಸಿದ್ದಾರೆ. ಮೆಜಾರಿಟಿ ಇಲ್ಲದ ಪಕ್ಷ ಹೇಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಡಿಕೆ ಶಿವಕುಮಾರ್ ಬಿಎಸ್ವೈ ವಿರುದ್ಧ ಕಿಡಿ ಕಾರಿದರು.
ಸುಪ್ರೀಂ ಕೋರ್ಟ್ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕೆ ಬಂದೇ ಬರುತ್ತದೆ. ಆಪರೇಷನ್ ಕಮಲ ಅಸಾಧ್ಯವಾದ ಮಾತು. ನಮ್ಮ ಶಾಸಕರ ರಕ್ಷಣೆಗೆ ರೆಸಾರ್ಟ್ ರಾಜಕೀಯ ಅನಿವಾರ್ಯವಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಇನ್ನು ಪ್ರಸ್ತುತ ಕಾಂಗ್ರೆಸ್ ಶಾಸಕರ ರಕ್ಷಣೆ ಮಾಜಿ ಸಚಿವ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಮತ್ತು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರ ಜವಾಬ್ದಾರಿಯಾಗಿದ್ದು, ಇದೇ ಕಾರಣಕ್ಕೆ ಎಲ್ಲ ಕಾಂಗ್ರೆಸ್ ಶಾಸಕರನ್ನೂ ಈಗಲ್ಟನ್ ರೆಸಾರ್ಟ್ ಗೆ ವಾಪಸ್ ಕರೆದುಕೊಂಡು ಹೋಗಲಾಗಿದೆ. ಅಂತೆಯೇ ಇತ್ತ ಜೆಡಿಎಸ್ ಶಾಸಕರನ್ನೂ ಕೂಡ ಬೆಂಗಳೂರಿನ ವಸಂತನಗರದಲ್ಲಿರುವ ಶಾಂಘ್ರಿಲಾ ರೆಸಾರ್ಟ್ ಕರೆದೊಯ್ಯಲಾಗಿದೆ.
Comments are closed.