ಕರ್ನಾಟಕ

‘ನೀವು ಹೆದರಿದ್ದೀರಿ… ಸೋಲಿನ ಭೀತಿಯಿಂದ ಆಕ್ಷೇಪ ವ್ಯಕ್ತಪಡಿಸುತ್ತಿದ್ದೀರಿ. ಮೊಸರಲ್ಲಿ ಕಲ್ಲು ಹುಡುಕುತ್ತಿದ್ದೀರಿ’; ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಶೋಭಾ

Pinterest LinkedIn Tumblr

ಬೆಂಗಳೂರು: ‘ಬೋಪಯ್ಯ ಅವರು ಈ ಹಿಂದೆಯೂ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಆಗ ಕಾಂಗ್ರೆಸ್ ನೇಮಿಸಿದ್ದ ಹಂಸರಾಜ್ ಭಾರಧ್ವಾಜ್ ರಾಜ್ಯಪಾಲರಾಗಿದ್ದರು. ಕಾಂಗ್ರೆಸ್‌ಗೆ ಆಗ ಸ್ಪೀಕರ್‌ ಬಗ್ಗೆ ತಕರಾರು ಇರಲಿಲ್ಲ. ಈಗೇಕೆ ಹೀಗಾಡುತ್ತಿದ್ದಾರೆ?’ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೋಭಾ, ‘ನೀವು ಹೆದರಿದ್ದೀರಿ. ಸೋಲಿನ ಭೀತಿಯಿಂದ ಆಕ್ಷೇಪ ವ್ಯಕ್ತಪಡಿಸುತ್ತಿದ್ದೀರಿ. ಮೊಸರಲ್ಲಿ ಕಲ್ಲು ಹುಡುಕುತ್ತಿದ್ದೀರಿ’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ನೇರ ಆರೋಪ ಮಾಡಿದರು.

‘ಚುನಾವಣೆ ಸಂದರ್ಭ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಸ್ಪರ್ಧೆಗಿಳಿದಿದ್ದರು. ಎಷ್ಟೋ ಊರುಗಳಲ್ಲಿ ಬಿಗು ಪರಿಸ್ಥಿತಿ ಇತ್ತು. ಇಂದಿಗೂ ಪರಿಸ್ಥಿತಿ ತಿಳಿಯಾಗಿಲ್ಲ. ನಾಯಕರು ಒಂದಾದ ತಕ್ಷಣ ಕಾರ್ಯಕರ್ತರು ಒಂದಾಗಲು ಸಾಧ್ಯವಿಲ್ಲ. ರಾಜ್ಯಮಟ್ಟದಲ್ಲಿ ಮೈತ್ರಿ ಮಾಡಿಕೊಂಡರೆ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಮುಖತೋರಿಸಲು ಸಾಧ್ಯವಿಲ್ಲ ಎಂಬ ಭೀತಿ ಕಾಂಗ್ರೆಸ್ ಶಾಸಕರಲ್ಲಿ ಇದೆ’ ಎಂದು ಶೋಭಾ ವಿಶ್ಲೇಷಿಸಿದರು.

‘ತಮ್ಮ ಶಾಸಕರು ಹತಾಶರಾಗಿರುವುದನ್ನು ತಿಳಿದಿರುವ ಕಾಂಗ್ರೆಸ್ ನಾಯಕರು ಈಗ ಸ್ಪೀಕರ್ ಆಯ್ಕೆಯನ್ನು ಪ್ರಶ್ನಿಸುತ್ತಿದ್ದಾರೆ. ಯಾರು ಏನು ಹೇಳಿದರೂ ಸರಿ, ನಾಳೆ ಬೋಪಯ್ಯ ಅವರ ನೇತೃತ್ವದಲ್ಲಿ ಅಧಿವೇಶನ ನಡೆಯಲಿದೆ. ನಮ್ಮ ಪರ 120ಕ್ಕೂ ಹೆಚ್ಚು ಶಾಸಕರು ಇದ್ದಾರೆ. ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮೋದಿ-ಶಾ ನೇತೃತ್ವದಲ್ಲಿ ಬಿಜೆಪಿ 22 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಸೋನಿಯಾ-ರಾಹುಲ್ ನೇತೃತ್ವದಲ್ಲಿ ನೀವು ಮಾಡಿರುವ ಸಾಧನೆ ಏನು? ಇಂದಿರಾಗಾಂಧಿ ಕಾಲದಲ್ಲಿ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದ ರಾಜ್ಯಗಳಿಗಿಂತಲೂ ಈಗ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳ ಸಂಖ್ಯೆ ಹೆಚ್ಚು’ ಎಂದು ಅವರು ಆತ್ಮವಿಶ್ವಾಸ ಪ್ರದರ್ಶಿಸಿದರು.

‘ಅಧಿಕಾರದಲ್ಲಿದ್ದಾಗ ಹಿಟ್ಲರ್‌ನಂತೆ ನಡೆದುಕೊಂಡವರಿಗೆ ಈಗ ಭಯ ಕಾಡುತ್ತಿದೆ. 130ರಷ್ಟಿದ್ದ ಕಾಂಗ್ರೆಸ್ ಶಾಸಕರ ಸಂಖ್ಯೆ 78ಕ್ಕೆ ಕುಸಿಯಿತು. ನಿಮ್ಮ ಅಹಂಕಾರದ ವರ್ತನೆಯೇ ನಿಮ್ಮನ್ನು ಕೆಳಗೆ ತಳ್ಳಿದೆ. ನಿಮಗೆ ಸರೇಂದ್ರ ಮೋದಿ, ಅಮಿತ್‌ಶಾ ಬಗ್ಗೆ ಮಾತನಾಡುವ ಅರ್ಹತೆಯೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Comments are closed.