ಕರ್ನಾಟಕ

ಜನಾರ್ದನ ರೆಡ್ಡಿಯಿಂದ ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಿದ ಆಡಿಯೋ ಬಿಡುಗಡೆ ! ಜನಾರ್ದನರೆಡ್ಡಿ- ಬಸವನಗೌಡ ಸಂಭಾಷಣೆ ಬಹಿರಂಗ

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್ ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಷವೊಡ್ಡಿ ಬಿಜೆಪಿ ತನ್ನತ್ತ ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ ಅವರೊಂದಿಗೆ ಜನಾರ್ದನರೆಡ್ಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಕ್ಲಿಪ್ ಕೇಳಿಸಿದ ಉಗ್ರಪ್ಪ, ಇದು ಬಿಜೆಪಿ ಕೃತ್ಯಕ್ಕೆ ಸ್ಪಷ್ಟ ಸಾಕ್ಷಿ ಎಂದು ದೂರಿದರು.

ಜನಾರ್ದನ ರೆಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ನೇರವಾಗಿ ಅಖಾಡಕ್ಕಿಳಿದಿದ್ದು, ರಾಯಚೂರು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಅವರಿ​ಗೆ ಆಮಿಷ ಒಡ್ಡಿದ ಆಡಿಯೋವೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಇಂದು ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಕಾಂಗ್ರೆಸ್ ನಾಯಕ ವಿ.ಎಸ್ ಉಗ್ರಪ್ಪ ಅವರು, ಕಾಂಗ್ರೆಸ್​ ಶಾಸಕರಿಗೆ ಜನಾರ್ದನ​ ರೆಡ್ಡಿ ಆಮಿಷ ಒಡ್ಡಿದ ಆಡಿಯೋ ಇದು ಕೇವಲ ಸ್ಯಾಂಪಲ್​ ಮಾತ್ರ. ಕೇಂದ್ರ ಬಿಜೆಪಿ ನಾಯಕರೂ ಸಹ ಇದೆ ವಾಮಮಾರ್ಗದಿಂದ ಬಹುಮತ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರು ನಿನ್ನೆವರೆಗೆ 25 ಕೋಟಿ ರುಪಾಯಿಯ ಆಮಿಷ ತೋರಿಸುತ್ತಿದ್ದರು. ಇಂದು ಹಲವು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ 150 ಕೋಟಿ ರುಪಾಯಿ ಹಾಗೂ ಸಚಿವ ಸ್ಥಾನದ ಆಮಿಷ ಒಡ್ಡುತ್ತಿದ್ದಾರೆ ಎಂದು ದೂರಿದರು.

ತಮಗೆ ಕುದುರೆ ವ್ಯಾಪಾರ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಬೆಂಬಲ ಇದೆ ಎಂದು ರೆಡ್ಡಿ ಆಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಉಗ್ರಪ್ಪ ತಿಳಿಸಿದ್ದಾರೆ.

ಮೂರು ಬಿಟ್ಟವರು ಊರಿಗೆ ದೊಡ್ಡವರು ಎನ್ನುತ್ತಾರೆ. ಬಿಜೆಪಿ ಮತ್ತು ರಾಜ್ಯಪಾಲರಿಗೆ ಈ ಮಾತು ಅನ್ವಯಿಸುತ್ತದೆ ಎಂದು ಉಗ್ರಪ್ಪ ವಾಗ್ದಾಳಿ ನಡೆಸಿದರು.

ಸಂಭಾಷಣೆಯಲ್ಲಿ ಏನಿದೆ?
ಜನಾರ್ದನ ರೆಡ್ಡಿ: ಬಸನವಗೌಡ, ಹಿಂದಿನದ್ದು ಕೆಟ್ಟಕಾಲ. ಅದನ್ನು ಮರೆತುಬಿಡು. ಈಗ ನಾನು ಹೇಳಿದಂತೆ ಕೇಳು. ನಮ್ಮ ಟೈಂ ಮತ್ತೆ ಚೆನ್ನಾಗಿ ಆಗ್ತಾ ಇದೆ. ನಿನ್ನ ಜೊತೆಗೆ ನೇರವಾಗಿ ದೊಡ್ಡವರು, ರಾಷ್ಟ್ರೀಯ ಅಧ್ಯಕ್ಷರೇ ಮಾತಾಡ್ತಾರೆ. ಒನ್‌ ಟು ಒನ್ ಮಾತನಾಡಿ ಮುಂದಿನ ಹೆಜ್ಜೆ ಇಡೋಣ.

ಬಸನವಗೌಡ: ಅದೆಲ್ಲಾ ಏನು ಬೇಡ ಸರ್. ನಿಮ್ಮ ಬಗ್ಗೆ ನನಗೆ ಗೌರವ ಇದೆ. ನನ್ನ ಕೆಟ್ಟ ಗಳಿಗೆಯಲ್ಲಿ ಇವರು ಕೈ ಹಿಡಿದಿದ್ದಾರೆ. ನಾನು ವಿಶ್ವಾಸ ದ್ರೋಹ ಮಾಡಲಾರೆ.

ಜನಾರ್ದನ ರೆಡ್ಡಿ: ನನ್ನ ಮಾತು ಕೇಳಿ ಶಿವನಗೌಡ ನಾಯಕ ಇವತ್ತು ಏನಾದ ನೋಡು. ನೀನು ಈವರೆಗೆ ಮಾಡಿಕೊಂಡಿರುವ ಆಸ್ತಿಯ ನೂರರಷ್ಟು ಮಾಡಿಕೊಳ್ಳಬಹುದು.

ಬಸವನಗೌಡ: ನನ್ನ ಕೆಟ್ಟ ಕಾಲದಲ್ಲಿ ಟಿಕೆಟ್ ಕೊಡಿಸಿದ್ದಾರೆ. ಎಲೆಕ್ಷನ್ ಮಾಡಲು ಸಹಾಯ ಮಾಡಿದ್ದಾರೆ. ನಾನು ದ್ರೋಹ ಮಾಡಲಾರೆ.

ಸುಪ್ರೀಂಕೋರ್ಟ್ ಆದೇಶದ ಬಳಿಕ ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡುತ್ತಿದ್ದಾರೆ.

ಕೇವಲ 104 ಶಾಸಕರನ್ನ ಹೊಂದಿರುವ ಬಿಜೆಪಿ ಗೆಲ್ಲಲೇಬೇಕೆಂಬ ಪಣತೊಟ್ಟಂತೆ ಕಾಣುತ್ತಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್​ನ ಶಾಸಕರನ್ನ ಸೆಳೆಯಲು ಆಪರೇಷನ್ ಕಮಲ ನಡೆಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಈ ಮಧ್ಯೆ, ಕಣ್ಮರೆಯಾಗಿರುವ ಮಸ್ಕಿ ಶಾಸಕ ಪ್ರತಾಪ್‌ ಗೌಡ ಪಾಟೀಲ್ ದೆಹಲಿಯಲ್ಲಿ ಬಿಜೆಪಿ ಸುಪರ್ದಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಬಳ್ಳಾರಿ ವಿಜಯನಗರ ಶಾಸಕ ಆನಂದ್​ಸಿಂಗ್ ಪ್ರಭಾವಿ ಕೇಂದ್ರ ಸಚಿವರ ಜೊತೆ ಇದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ, ಕಾಂಗ್ರೆಸ್​ನ ಲಿಂಗಾಯತ ಶಾಸಕರತ್ತ ಬಿಜೆಪಿ ಚಿತ್ತ ಹರಿಸಿದ್ದು, ಮಠಾಧೀಶರು ಮತ್ತು ಕುಟುಂದವರ ಮೂಲಕ‌ ಶಾಸಕರಿಗೆ ಒತ್ತಡ ಹಾಕಲಾಗುತ್ತಿದೆ ಎನ್ನಲಾಗಿದೆ.

Comments are closed.