ಕರ್ನಾಟಕ

ಬಹುಮತ ಸಾಬೀತಿನ ಹಿನ್ನೆಲೆ; ಆತಂಕದಲ್ಲಿರುವ ಯಡಿಯೂರಪ್ಪಗೆ ‘ಭಯ ಪಡಬೇಡಿ…ಬಿಜೆಪಿ ಗೆಲುವುತ್ತೆ’ ಎಂದು ಅಭಯ ನೀಡಿದ ಅಮಿತ್‌ ಶಾ

Pinterest LinkedIn Tumblr

ಬೆಂಗಳೂರು: ಶನಿವಾರವೇ ವಿಶ್ವಾಸಮತ ಸಾಬೀತುಪಡಿಸಲು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿರುವುದು ಬಿಜೆಪಿಗೆ ಭಾರಿ ಹಿನ್ನ್ನೆಡೆಯನ್ನುಂಟು ಮಾಡಿದ್ದು, ‘ಮ್ಯಾಜಿಕ್‌ ನಂಬರ್‌’ಗೆ ಅಗತ್ಯವಾದ ಶಾಸಕರ ಸಂಗ್ರಹಕ್ಕೆ ನಿರಂತರ ಪ್ರಯತ್ನ ನಡೆಸುತ್ತಿದೆ.

ಸುಪ್ರೀಂ ಆದೇಶದ ಬೆನ್ನಲ್ಲೇ ಬಿಜೆಪಿಯಲ್ಲಿ ತುರುಸಿನ ಬೆಳವಣಿಗೆಗಳು ನಡೆದಿದ್ದು, ಪಕ್ಷದ ಸೂಚನೆಯಂತೆ ಬಿಜೆಪಿಯ ಸ್ವಕ್ಷೇತ್ರದಲ್ಲಿದ್ದ ಎಲ್ಲ ಶಾಸಕರು ಶುಕ್ರವಾರ ರಾತ್ರಿಯೇ ಬೆಂಗಳೂರು ತಲುಪಿದರು. ಬೆಂಗಳೂರಿನ ಶಾಸಕರಿಗೆ ಶುಕ್ರವಾರ ಸಂಜೆಯ ಹೊತ್ತಿಗೆ ವಸಂತನಗರದಲ್ಲಿರುವ ಖಾಸಗಿ ಹೋಟೆಲ್‌ಗೆ ಬರಲು ತಿಳಿಸಲಾಗಿದೆ. ಬಿಜೆಪಿ ಶಾಸಕರನ್ನು ಸೆಳೆಯುವುದಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಂದಾಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಬಿಜೆಪಿಯೂ ಶಾಸಕರ ರಕ್ಷಣೆಗೆ ಮೊದಲ ಆದ್ಯತೆ ನೀಡಿದೆ.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶಾಸಕರು ಹೈದರಾಬಾದ್‌ನಲ್ಲಿ ಇರುವುದು ಮತ್ತು ಸಮಯಾವಕಾಶದ ಕೊರತೆ ಇರುವುದರಿಂದ 111ರ ಮ್ಯಾಜಿಕ್‌ ನಂಬರ್‌ ಮುಟ್ಟುವುದು ಬಿಜೆಪಿಗೆ ತೊಡಕಾಗಿ ಪರಿಣಿಮಿಸಿದೆ. ಇದೆಲ್ಲದರ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಫೋನ್‌ ಮೂಲಕ ಸಂಪರ್ಕಿಸಿ ಡೋಂಟ್‌ ವರಿ, ನಾವು ಯಶಸ್ವಿಯಾಗುತ್ತೇವೆ ಎಂದು ಭರವಸೆ ನೀಡಿದ್ದಾರೆನ್ನಲಾಗಿದೆ. ಬಿಜೆಪಿಯ ತಂತ್ರಗಾರಿಕೆ ಕೇಂದ್ರ ಬೆಳಗ್ಗೆಯಿಂದ ಎರಡು ಬಾರಿ ಬದಲಾಗಿದೆ.

ವಿಶ್ವಾಸಮತ ಸಾಬೀತಿಗೆ ಕನಿಷ್ಠ 111 ಶಾಸಕರ ಬೇಕು. ಒಟ್ಟಾರೆಯಾಗಿ 7 ಮತಗಳ ಕೊರತೆ ಇದ್ದು, ಆನಂದ್‌ ಸಿಂಗ್‌ ಹಾಗೂ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್‌, ಪಕ್ಷೇತರ ಶಾಸಕರ ಪೈಕಿ ರಾಣೆಬೆನ್ನೂರಿನ ಶಂಕರ್‌ ಗೈರಾಗಬಹುದೆಂದು ಬಿಜೆಪಿ ನಿರೀಕ್ಷಿಸಿದೆ. ಆದರೂ 4 ಮತಗಳ ಕೊರತೆ ನೀಗಿಸಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಅಡ್ಡಮತದಾನ ಮಾಡಿಸುವುದಕ್ಕೆ ಬಿಜೆಪಿ ತಂತ್ರ ನಡೆಸುತ್ತಿದೆ. ಆದರೆ ಇದಕ್ಕೆ ಅಷ್ಟೇ ತೀವ್ರ ಪ್ರತಿರೋಧ ವಿರೋಧಿ ಪಾಳಯದಿಂದಲ್ಲೂ ವ್ಯಕ್ತವಾಗುತ್ತಿದ್ದು, ಬಿಜೆಪಿ ನಾಯಕರು ಯಾರಾರ‍ಯರಿಗೆ ಕರೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ನಿರಂತರವಾಗಿ ವಾಚ್‌ ಮಾಡಲಾಗುತ್ತಿದೆ.

ಫೀಲ್ಡ್‌ ಗೆ ಕತ್ತಿ, ರೆಡ್ಡಿ: ಕಾಂಗ್ರೆಸ್‌ ಜೆಡಿಎಸ್‌ ಶಾಸಕರನ್ನು ಸೆಳೆಯುವುದಕ್ಕೆ ಉಮೇಶ್‌ ಕತ್ತಿ, ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು, ವೀರಣ್ಣ ಚರಂತಿಮಠ್‌ ಅವರನ್ನು ಅಖಾಡಕ್ಕೆ ಬಿಡಲಾಗಿದೆ. ಬಾಗಲಕೋಟ, ಬಳ್ಳಾರಿ ಹಾಗೂ ಬೆಳಗಾವಿ ಭಾಗದಿಂದ ಆಯ್ಕೆಯಾದ ಕಾಂಗ್ರೆಸ್‌ ಶಾಸಕರನ್ನು ಸೆಳೆಯುವುದಕ್ಕೆ ಬಿಜೆಪಿ ತೀವ್ರ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಮುನಿಸಿಕೊಂಡಿರುವವರನ್ನು ಸೆಳೆಯುವುದಕ್ಕೆ ಯತ್ನಿಸಲಾಗುತ್ತಿದೆ.

ಆತಂಕದಲ್ಲಿ ಬಿಎಸ್‌ವೈ: ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆಯೂ ಮುಖ್ಯಮಂತ್ರಿ ಯಡಿಯೂರಪ್ಪ ತುಸು ಆತಂಕದಲ್ಲೇ ಇದ್ದು, ಕೆಲ ಪ್ರಯತ್ನಗಳು ವಿಫಲವಾದಾಗ ತಮ್ಮ ಆಪ್ತರ ಮೇಲೆ ಎಗರಾಡಿದ್ದಾರೆ. ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಪ್ರಕಾಶ್‌ ಜಾವಡೇಕರ್‌, ಜೆಪಿ.ನಡ್ಡಾ, ಧರ್ಮೇಂದ್ರ ಪ್ರಧಾನ, ಅನಂತಕುಮಾರ ಮೊದಲಾದವರ ಜತೆಗೆ ದಿನವಿಡಿ ಚರ್ಚೆ ನಡೆಸಿದರು. ವಸಂತನಗರದಲ್ಲಿರುವ ಖಾಸಗಿ ಹೊಟೇಲ್‌ನಿಂದಲೇ ವಿಧಾನಸಭೆಗೆ ತೆರಳಿ ಬಿಜೆಪಿಯ ಎಲ್ಲ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.

Comments are closed.