ಬೆಂಗಳೂರು: 55 ಗಂಟೆಗಳ ಹೈಡ್ರಾಮಾ ಬಳಿಕ, ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿದ್ದ ಬಿಜೆಪಿ ಅಧಿಕಾರಕ್ಕೇರಲಾಗದೆ ಹಿನ್ನಡೆ ಅನುಭವಿಸಿದ್ದು, ಎರಡುವರೆ ದಿನಗಳ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡಲು ನಿರ್ಧರಿಸಿದರು.
ಬಳಿಕ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ಸದನದಲ್ಲಿ ಶನಿವಾರ ಸಂಜೆ ವಿದಾಯ ಭಾಷಣವನ್ನೇ ಆರಂಭಿಸಿದ ಯಡಿಯೂರಪ್ಪ, ಕೊನೆಯುಸಿರು ಇರುವವರೆಗೂ ರೈತರ ಏಳಿಗೆಗಾಗಿ ಶ್ರಮಿಸುವುದಾಗಿ ಘೋಷಿಸಿದರಲ್ಲದೆ, ಚುನಾವಣೆಯಲ್ಲಿ ಸೋತರೂ ಕುತಂತ್ರದಿಂದ ಅಧಿಕಾರಕ್ಕೇರುವ ಪ್ರಯತ್ನ ನಡೆಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ವಿಶ್ವಾಸಮತ ಯಾಚನೆಗೆ ಮುನ್ನ ಪ್ರಸ್ತಾವ ಮಂಡಿಸಿ ಭಾಷಣ ಮಾಡಿದ ಯಡಿಯೂರಪ್ಪ ಅತ್ಯಂತ ಭಾವುಕರಾಗಿಯೇ ಮಾತು ಆರಂಭಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಅವರು ನನ್ನ ಮೇಲೆ ವಿಶ್ವಾಸ ಇಟ್ಟು ಅಂಬೇಡ್ಕರ್ ಜಯಂತಿಯಂದು ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದರು.
ಅನ್ನದಾತನ ಏಳಿಗೆಗೆ ಹಾಗೂ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ದುಡಿಯಲು ಸಾಕಷ್ಟು ಶ್ರಮವಹಿಸಿದ್ದೇನೆ. ನನ್ನ ರಾಜಕೀಯ ಬದುಕಿನ ಅತ್ಯಂತ ಆರಂಭದ ದಿನಗಳಿಂದಲೂ ಇಂದಿನವರೆಗೂ ಹಾಗೂ ಮುಂದಿನ ದಿನಗಳಲ್ಲೂ ಹೋರಾಟ ನಡೆಸುತ್ತೇನೆ ಎಂದರು.
ಹೋರಾಟದ ಬದುಕನ್ನು ಮೈಗೂಡಿಸಿಕೊಂಡಿರುವ ನಾನು ನ್ನ ಕೊನೆಯ ಉಸಿರು ಇರುವ ತನಕವೂ ಹೋರಾಟ ಮುಂದುವರಿಸುತ್ತೇನೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.
Comments are closed.