ಕರ್ನಾಟಕ

ಬಿಜೆಪಿಯ ಮಗ್ಗಲು ಮುರಿಯಲು ಕಾಂಗ್ರೆಸ್‌-ಜೆಡಿಎಸ್‌ ಗಳು ಮಾಡಿದ್ದೇನು?

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮುರಿಯಲು ಬಿಜೆಪಿ ಸಾಕಷ್ಟು ಕಸರತ್ತು ನಡೆಸಿದರೂ ಹೈಕಮಾಂಡ್‌ನ‌ ಸ್ಪಷ್ಟ ನಿಲುವು ಮತ್ತು ಎರಡೂ ಪಕ್ಷಗಳ ನಾಯಕ ಒಗ್ಗಟ್ಟೇ ಬಿಜೆಪಿ ಸೋಲೊಪ್ಪಿಕೊಳ್ಳಲು ಕಾರಣವಾಯಿತು.

ಫ‌ಲಿತಾಂಶದ ದಿನ ಆರಂಭವಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರ ಈ ಒಗ್ಗಟ್ಟು ಶನಿವಾರದವರೆಗೂ ಮುಂದುವರಿದಿದ್ದರಿಂದ ಮತ್ತು ಎರಡೂ ಪಕ್ಷದವರು ಸರ್ಕಾರ ರಚನೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಒಟ್ಟಾಗಿ ಕೆಲಸ ಮಾಡಿದ ಪರಿಣಾಮ ಆ ಪಕ್ಷಗಳ ಶಾಸಕರನ್ನು ಸೆಳೆಯಲು ಬಿಜೆಪಿ ನಡೆಸಿದ ಪ್ರಯತ್ನಗಳನ್ನು ವಿಫ‌ಲಗೊಳಿಸಿತು.

ಚುನಾವಣೆ ಬಳಿಕ ಸೋನಿಯಾ ಗಾಂಧಿ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರನ್ನು ಸಂಪರ್ಕಿಸಿ ಸರ್ಕಾರ ರಚನೆ ಬಗ್ಗೆ ಪ್ರಸ್ತಾಪಿಸಿದ್ದರು. ಇಲ್ಲೂ ಜಾಣತನ ಮೆರೆದ ಕಾಂಗ್ರೆಸ್‌, ರಾಹುಲ್‌ ಗಾಂಧಿ ಮೂಲಕ ದೇವೇಗೌಡರನ್ನು ಸಂಪರ್ಕಿಸಿರಲಿಲ್ಲ. ಹೀಗಾಗಿ ಸೋನಿಯಾ ಮಾತಿಗೆ ದೇವೇಗೌಡರು ಒಪ್ಪಿಗೆ ಸೂಚಿಸುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಜೆಡಿಎಸ್‌ ಸರ್ಕಾರ ರಚನೆಗೆ ಕಾಂಗ್ರೆಸ್‌ ಬೇಷರತ್‌ ಬೆಂಬಲ ನೀಡುತ್ತದೆ ಎಂದು ಘೋಷಿಸಿದರು.

ನಂತರದಲ್ಲಿ ನಡೆದಿದ್ದೇ ಶಾಸಕರನ್ನು ಹಿಡಿದಿಡುವ ಕೆಲಸ. ಇದರ ನೇತೃತ್ವ ವಹಿಸಿಕೊಂಡಿದ್ದು ಟ್ರಬಲ್‌ ಶೂಟರ್‌ ಎಂದು ಕರೆಸಿಕೊಳ್ಳುವ ಡಿ.ಕೆ.ಶಿವಕುಮಾರ್‌. ಸಿದ್ದರಾಮಯ್ಯ ಕೂಡ ಇದಕ್ಕೆ ಕೈಜೋಡಿಸಿದರು. ಇನ್ನು ಜೆಡಿಎಸ್‌ನಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಪಕ್ಷದ ಶಾಸಕರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಂಡಿದ್ದರಿಂದ ಅವರನ್ನು ಮುಟ್ಟುವುದು ಕಷ್ಟಸಾಧ್ಯ ಎಂಬುದು ಬಿಜೆಪಿಗೆ ಗೊತ್ತಾಗಿಹೋಗಿತ್ತು. ಹೀಗಾಗಿ ಕಾಂಗ್ರೆಸ್‌ ಶಾಸಕರನ್ನೇ ಗುರಿಯಾಗಿಸಿಕೊಂಡು ಆಪರೇಷನ್‌ಗೆ ಯತ್ನಿಸಿದರು.

ದೇವೇಗೌಡರ ಕುಟುಂಬ ಮತ್ತು ಡಿ.ಕೆ.ಶಿವಕುಮಾರ್‌ ನಡುವಿನ ಸಂಬಂಧ ಅಷ್ಟಕ್ಕಷ್ಟೆ. ಇನ್ನು ಸಿದ್ದರಾಮಯ್ಯ ಚುನಾವಣೆ ಸಂದರ್ಭದಲ್ಲಿ ದೇವೇಗೌಡರು ಮತ್ತು ಅವರ ಕುಟುಂಬದವರ ವಿರುದ್ಧ ಸಾಕಷ್ಟು ಮಾತನಾಡಿದ್ದರಿಂದ ಅವರಿಬ್ಬರು ಜೆಡಿಎಸ್‌ ಜತೆ ಸೇರಿ ಸರ್ಕಾರ ರಚಿಸಲು ಆಸಕ್ತಿ ತೋರಿಸಲಿಕ್ಕಿಲ್ಲ. ಹೀಗಾಗಿ ಕಾಂಗ್ರೆಸ್‌ ಶಾಸಕನ್ನು ಆಪರೇಷನ್‌ ಮಾಡಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು.

ಆದರೆ, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಕಾಂಗ್ರೆಸ್‌, ಯಾವುದೇ ಕಾರಣಕ್ಕೂ ಬಿಜೆಪಿಯ ಆಪರೇಷನ್‌ಗೆ ಅವಕಾಶ ಮಾಡಿಕೊಡಬಾರದು ಎಂದು ಸ್ಪಷ್ಟ ಸೂಚನೆ ನೀಡಿತ್ತು. ಹೀಗಾಗಿ ಡಿ.ಕೆ.ಶಿವಕುಮಾರ್‌ ಅವರೇ ಮುಂದೆ ನಿಂತು ಪಕ್ಷದ ಶಾಸಕರನ್ನು ಕಟ್ಟಿಹಾಕಿದರು. ಕುಮಾರಸ್ವಾಮಿ ಕೂಡ ಇದಕ್ಕೆ ಅಷ್ಟೇ ತ್ವರಿತವಾಗಿ ಕೈಜೋಡಿಸಿದ್ದರಿಂದ ಬಿಜೆಪಿಯ ಲೆಕ್ಕಾಚಾರಗಳೆಲ್ಲವೂ ತಲೆಕೆಳಗಾಯಿತು.

Comments are closed.