ಕರ್ನಾಟಕ

ಉಪಮುಖ್ಯಮಂತ್ರಿ, ಸ್ಪೀಕರ್‌ ಹುದ್ದೆ ಕಾಂಗ್ರೆಸ್‌ಗೆ

Pinterest LinkedIn Tumblr


ಹೊಸದಿಲ್ಲಿ: ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರದಲ್ಲಿ ಸ್ಪೀಕರ್‌ ಮತ್ತು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಕಾಂಗ್ರೆಸ್‌ ಪಡೆಯಲಿದೆ. ಬುಧವಾರದಂ ಎಚ್‌.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಈ ವಿಷಯದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಸೋಮವಾರ ಸಂಜೆ ಎಚ್‌.ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಪ್ರಮಾಣವಚನ ಸ್ವೀಕಾರಕ್ಕೆ ಮುನ್ನ ಸೌಹಾರ್ದ ಭೇಟಿಗಾಗಿ ಎಚ್‌ಡಿಕೆ ದಿಲ್ಲಿಗೆ ಆಗಮಿಸಿದ್ದರು. ಇದಕ್ಕೆ ಮುನ್ನ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಜತೆ ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದರು. ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಆಲಿ ಈ ವಿಷಯ ತಿಳಿಸಿದ್ದಾರೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಣ ಹಳೆಯ ದ್ವೇಷಗಳನ್ನು ಮರೆತು ಭವಿಷ್ಯದ ದೃಷ್ಟಿಯಿಂದ ಮುಂದುವರಿಯಬೇಕು ಎಂದು ರಾಹುಲ್‌ ಮತ್ತು ಕುಮಾರಸ್ವಾಮಿ ಪ್ರತಿಪಾದಿಸಿದರು.

ಚರ್ಚೆಯ ಪೂರ್ಣ ವಿಷಯ ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ, ಸ್ಪೀಕರ್‌ ಆಯ್ಕೆ ಮತ್ತು ವಿಶ್ವಾಸಮತ ನಿರ್ಣಯದ ಕುರಿತಾಗಿತ್ತು. ಆದರೆ ಅಧಿಕಾರ ಹಂಚಿಕೆ ಕುರಿತಂತೆ ಯಾವುದೇ ರೀತಿಯ ಔಪಚಾರಿಕ ಚರ್ಚೆ ನಡೆದಿಲ್ಲ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ತರಾತುರಿಯಲ್ಲಿ ರಚನೆಯಾದ ಮೈತ್ರಿಕೂಟದಿಂದ ಎರಡೂ ಪಕ್ಷಗಳ ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ಉಂಟಾದ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನವಾಗಿ ವರಿಷ್ಠ ನಾಯಕರ ಮಾತುಕತೆ ನಡೆಯಿತು.

ಅಧಿಕಾರ ಹಂಚಿಕೆ ಒಪ್ಪಂದದ ಮಾರ್ಗಸೂಚಿಗಳನ್ನು ಇನ್ನಷ್ಟೇ ಸಿದ್ಧಪಡಿಸಬೇಕಿದೆ. ಕರ್ನಾಟಕದ ರಾಜಕೀಯ ಸ್ಥಿತಿಗತಿ ಬಗ್ಗೆ ಪಕ್ಷದ ನಾಯಕರಾದ ಗುಲಾಂ ನಬಿ ಆಜಾದ್, ಅಶೋಕ್‌ ಗೆಹ್ಲೋಟ್‌ ಮತ್ತು ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್‌ ಜತೆ ರಾಹುಲ್‌ ಸೋಮವಾರ ಬೆಳಗ್ಗೆ ಚರ್ಚಿಸಿದ್ದರು.

ಕುಮಾರಸ್ವಾಮಿ ಮತ್ತು ವೇಣುಗೋಪಾಲ್‌ ನಡುವೆ ಇಂದು ಸಮಾಲೋಚನೆಗಳು ನಡೆಯಲಿವೆ.

ನಾಳೆ ಬೇರೆ ಸಚಿವರು ಪ್ರಮಾಣವಚನ ಸ್ವೀಕರಿಸಲ್ಲ:

ದಲಿತ ನಾಯಕ ಜಿ. ಪರಮೇಶ್ವರ್‌ ಉಪ ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ. ಬಹುಶಃ ಅವರೊಬ್ಬರು ಎಚ್‌ಡಿಕೆ ಜತೆಗೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಹಾಗಿದ್ದರೂ ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವಾಗಿಲ್ಲ. ಆದರೆ ಬೇರೆ ಸರಿವರು ಯಾರೂ ನಾಳೆ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂಬುದು ಖಚಿತವಾಗಿದೆ.

ಎರಡನೇ ಉಪ ಮುಖ್ಯಮಂತ್ರಿ ಹುದ್ದಗೆ ಬೇಡಿಕೆ ತೀವ್ರವಾಗಿದ್ದು ವೀರಶೈವ ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್‌ ಅವರಿಗೆ ಈ ಹುದ್ದೆ ನೀಡಬೇಕೆಂದು ಲಾಬಿ ಜೋರಾಗಿದೆ. ಆದರೆ ಅದಕ್ಕೆ ಕಾಂಗ್ರೆಸ್‌ನೊಳಗೆ ಅಷ್ಟೇ ವಿರೋಧವೂ ಎದುರಾಗಿದೆ.

ಕಾಂಗ್ರೆಸ್‌-ಜೆಡಿಎಸ್‌ ‘ಅಪವಿತ್ರ ಮೈತ್ರಿ’ಗೆ ಜನಬೆಂಬಲವಿಲ್ಲ: ಅಮಿತ್ ಶಾ

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಂಖ್ಯಾಬಲ ಆಧರಿಸಿ ಒಟ್ಟು 34 ಸಚಿವ ಹುದ್ದೆಗಳು ಹಂಚಿಕೆಯಾಗಲಿದೆ. ಕಾಂಗ್ರೆಸ್‌ 78 ಶಾಸಕರನ್ನು ಮತ್ತು ಇಬ್ಬರು ಪಕ್ಷೇತರರನ್ನು ಹೊಂದಿದ್ದರೆ, ಜೆಡಿಎಸ್ 38 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ 20 ಅಥವಾ 21 ಸಚಿವ ಸ್ಥಾನ ಪಡೆದರೆ ಜೆಡಿಎಸ್‌ 12 ಅಥವಾ 13 ಸ್ಥಾನಗಳನ್ನು ಪಡೆಯಲಿವೆ. ಹಾಗಿದ್ದರೂ ಗೃಹಖಾತೆ, ಕಂದಾಯ ಮತ್ತು ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳ ಹಂಚಿಕೆ ವಿಚಾರ ಮತ್ತೆ ಕಗ್ಗಂಟಾಗಿದೆ. ಅಲ್ಲದೆ ಆರ್‌ಆರ್‌ ನಗರ ಮತ್ತು ಜಯನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪರ್ಧಿಸುತ್ತಿದೆ.

ಎರಡೂ ಪಕ್ಷಗಳ ಪ್ರಣಾಳಿಕೆ ಆಧರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮಿತಿಯೊಂದನ್ನು ರಚಿಸಲಿವೆ. ಅಲ್ಲದೆ ಸಮನ್ವಯ ಸಮಿತಿಯೊಂದನ್ನೂ ರಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಮುಂದುವರಿಯಲಿದ್ದಾರೆ. ಭವಿಷ್ಯದ ಚುನಾವಣೆಗಳಲ್ಲೂ ಅವರೇ ಕಾಂಗ್ರೆಸ್‌ನ ಮುಖವಾಡ ಆಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

Comments are closed.